ರಾಜ್ಯದ ವಿವಿಧೆಡೆ ವಿಜಯದಶಮಿ ಹಿನ್ನಲೆ ಆರ್‌ಎಸ್‌ಎಸ್ ಪಥಸಂಚಲನ: ಕೆಲವೆಡೆ ಷರತ್ತುಬದ್ಧ ಅನುಮತಿ, ಇನ್ನು ಕೆಲವೆಡೆ ಸಿದ್ಧತೆ ಚುರುಕು!
ವಿಜಯದಶಮಿ ನಿಮಿತ್ತ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪಥಸಂಚಲನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಲಬುರಗಿ, ರಾಮನಗರ ಹಾಗೂ ಹುಬ್ಬಳ್ಳಿಯಲ್ಲಿ ಷರತ್ತುಬದ್ಧ ಅನುಮತಿ ನೀಡಲಾಗಿದ್ದು, ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭಾಗವಹಿಸುತ್ತಿದ್ದಾರೆ. ಆದರೆ ತುಮಕೂರಿನಲ್ಲಿ ಚುನಾವಣಾ ನೀತಿ ಸಂಹಿತೆ ಕಾರಣದಿಂದ ಅನುಮತಿ ಇನ್ನೂ ಸಿಕ್ಕಿಲ್ಲ.

ಮುಖ್ಯಾಂಶಗಳು
- ವಿಜಯದಶಮಿ ನಿಮಿತ್ತ ಕಲಬುರಗಿ ಸೇರಿದಂತೆ ವಿವಿಧೆಡೆ ಆರ್‌ಎಸ್‌ಎಸ್ ಪಥಸಂಚಲನ ಆಯೋಜನೆ.
- ಹುಬ್ಬಳ್ಳಿಯಲ್ಲಿ ಪಥಸಂಚಲನ ಹಾಗೂ ಸಾರ್ವಜನಿಕ ಸಭೆಯಲ್ಲಿ ಸಚಿವ ಪ್ರಲ್ಹಾದ್ ಜೋಶಿ ಭಾಗಿ.
- ತುಮಕೂರಿನಲ್ಲಿ ಪದವೀಧರರ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅನುಮತಿ ವಿಳಂಬ.
ಬೆಂಗಳೂರು, ಅಕ್ಟೋಬರ್ 24: ವಿಜಯದಶಮಿ ನಿಮಿತ್ತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವತಿಯಿಂದ ಹಮ್ಮಿಕೊಳ್ಳಲಾಗಿರುವ ಪಥಸಂಚಲನ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಕಲ ಸಿದ್ಧತೆಗಳು ನಡೆದಿವೆ. ಕೆಲವು ಕಡೆಗಳಲ್ಲಿ ಪೊಲೀಸರಿಂದ ಅಧಿಕೃತ ಅನುಮತಿ ಸಿಕ್ಕಿದ್ದರೆ, ಇನ್ನು ಕೆಲವು ಜಿಲ್ಲೆಗಳಲ್ಲಿ ಅನುಮತಿಗಾಗಿ ಕಾಯಲಾಗುತ್ತಿದೆ.
ಕಲಬುರಗಿಯಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ
ಕಲಬುರಗಿಯಲ್ಲಿ ನಾಳೆ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿರುವ ಆರ್‌ಎಸ್‌ಎಸ್ ಪಥಸಂಚಲನಕ್ಕೆ ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಶಾಲೂ ಅವರು ಷರತ್ತುಬದ್ಧ ಅನುಮತಿ ನೀಡಿದ್ದಾರೆ. ಗೃಹ ಇಲಾಖೆಯ ಫಾರ್ಮ್ 1 ಮತ್ತು 2 ಭರ್ತಿ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಈ ಅನುಮತಿ ನೀಡಲಾಗಿದ್ದು, ನಿಗದಿಪಡಿಸಿದ ಮಾರ್ಗದಲ್ಲೇ ಪಥಸಂಚಲನ ಸಾಗಬೇಕು ಮತ್ತು ಪ್ರಚೋದನಕಾರಿ ಭಾಷಣ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಕಲಬುರಗಿಯ ನಗರೆಶ್ವರ ಶಾಲೆಯಿಂದ ಆರಂಭವಾಗಲಿರುವ ಈ ಪಥಸಂಚಲನವು ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಸಮಾರೋಪಗೊಳ್ಳಲಿದೆ.
ರಾಮನಗರದಲ್ಲಿ ಪಥಸಂಚಲನಕ್ಕೆ ಪೊಲೀಸ್ ಇಲಾಖೆ ಅನುಮತಿ
ಇದೇ ರೀತಿ ರಾಮನಗರದಲ್ಲಿ ನಾಳೆ ಬೆಳಿಗ್ಗೆ 9:30ಕ್ಕೆ ಆರ್‌ಎಸ್‌ಎಸ್ ಕಚೇರಿಯಿಂದ ಅಗ್ರಹಾರದವರೆಗೆ ಎರಡು ಕಿಲೋಮೀಟರ್ ದೂರದ ಪಥಸಂಚಲನಕ್ಕೆ ಪೊಲೀಸ್ ಇಲಾಖೆ ಅನುಮತಿ ನೀಡಿದೆ. ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಅಕ್ಟೋಬರ್ 25ರಂದು ನಡೆಯಲಿರುವ ಪಥಸಂಚಲನ ಹಾಗೂ ಸಾರ್ವಜನಿಕ ಸಭೆಗೂ ಪರವಾನಗಿ ಸಿಕ್ಕಿದ್ದು, ಇದರಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಅನೇಕ ಬಿಜೆಪಿ ಶಾಸಕರು ಭಾಗವಹಿಸಲಿದ್ದಾರೆ. ಕೋಲಾರ ಮತ್ತು ಮೈಸೂರಿನಲ್ಲೂ ಪಥಸಂಚಲನ ಹಾಗೂ ಬೌದ್ಧಿಕ್ ಕಾರ್ಯಕ್ರಮಗಳಿಗೆ ಭರ್ಜರಿ ಸಿದ್ಧತೆಗಳು ನಡೆದಿವೆ.
ತುಮಕೂರಿನಲ್ಲಿ ಸಿಕ್ಕಿಲ್ಲ ಅನುಮತಿ
ಆದರೆ, ತುಮಕೂರು ಜಿಲ್ಲೆಯಲ್ಲಿ ಪಥಸಂಚಲನಕ್ಕೆ ಈವರೆಗೂ ಪೊಲೀಸರಿಂದ ಅನುಮತಿ ಸಿಕ್ಕಿಲ್ಲ. ತುಮಕೂರು ನಗರ, ಗ್ರಾಮಾಂತರ, ಕುಣಿಗಲ್ ಹಾಗೂ ಗುಬ್ಬಿಯಲ್ಲಿ ಆಯೋಜನೆಗೆ ತಯಾರಿ ನಡೆಸಲಾಗಿದ್ದು, ಪದವೀಧರರ ಕ್ಷೇತ್ರದ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ವಿಳಂಬವಾಗಿರುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಒಟ್ಟಾರೆ ರಾಜ್ಯಾದ್ಯಂತ ಆರ್‌ಎಸ್‌ಎಸ್ ವಿಜಯದಶಮಿ ಸಂಭ್ರಮ ಕಳೆಗಟ್ಟಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




