ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ಖತರ್ನಾಕ್ ಕಳ್ಳಿಯ ಬಂಧನವಾಗಿದೆ. ಆರ್.ಟಿ.ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಲಕ್ಷ್ಮೀಯನ್ನು ಅರೆಸ್ಟ್ ಮಾಡಿದ್ದಾರೆ.
ಆರೋಪಿ ಲಕ್ಷ್ಮೀ ವಿರುದ್ಧ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಪೊಲೀಸರಿಗೆ ಸಿಕ್ಕಿಬಿದ್ದಾಗ ಮಕ್ಕಳಿದ್ದಾರೆ, ಗರ್ಭಿಣಿ ಎಂದು ಅನುಕಂಪದ ಅಸ್ತ್ರ ಪ್ರಯೋಗ ಮಾಡಿದ್ದಾಳೆ. ಆದ್ರೆ ಕಳ್ಳಿಯ ಚಲಾಕಿತನ ತಿಳಿದಿದ್ದ ಪೊಲೀಸರು ಅನುಕಂಪದ ಅಲೆಗೆ ಮೋಸ ಹೋಗಿಲ್ಲ. ಆರೋಪಿ ಲಕ್ಷ್ಮೀಗೆ ಬರೋಬ್ಬರಿ ಆರು ಮಕ್ಕಳಿದ್ದಾರೆ. ಕಳ್ಳಿ ಲಕ್ಷ್ಮೀಯಿಂದ ಪೊಲೀಸರು ಮಕ್ಕಳನ್ನು ರಕ್ಷಿಸಿದ್ದಾರೆ. ಮಕ್ಕಳನ್ನು ಬಾಲಮಂದಿರಕ್ಕೆ ಕಳುಹಿಸಿದ್ದಾರೆ. 6 ತಿಂಗಳ ಮಗುವನ್ನು ಪೋಷಕರ ಬಳಿ ಬಿಡಲಾಗಿದೆ.
ಕಳ್ಳಿ ಲಕ್ಷ್ಮೀ ತನ್ನ ಮಕ್ಕಳನ್ನೇ ಕಳ್ಳತನಕ್ಕೆ ಬಂಡವಾಳ ಮಾಡಿಕೊಳ್ಳುತ್ತಿದ್ದಳು. ಈ ಹಿಂದೆ ಜೈಲಿಗೆ ಹೋಗಿ ಬಂದಿದ್ದರೂ ಆಕೆಯ ಚಾಳಿ ಮಾತ್ರ ಬದಲಾಗಿಲ್ಲ. ಈಕೆಯ ಕಳ್ಳತನಕ್ಕೆ ಈಕೆಯ ಗಂಡ ಕೂಡ ಸಾಥ್ ನೀಡುತ್ತಿದ್ದ. ಮೊದಲಿಗೆ ಲಕ್ಷ್ಮೀ ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡುತಿದ್ದಳು. ಬಳಿಕ ಸಮಯ ನೋಡಿ ಮನೆ ಬಳಿ ತೆರಳಿ ಕಿಟಕಿ, ಗೋಡೆ, ಶೂಗಳಲ್ಲಿ ಬೀಗದ ಕೈ ಹುಡುಕಾಡಿ ಮನೆ ಬೀಗ ತೆಗೆದು ಕಳ್ಳತನ ಮಾಡುತ್ತಿದ್ದಳು. ಇದೇ ರೀತಿ ಅನೇಕ ಮನೆಗಳಿಗೆ ಲಕ್ಷ್ಮೀ ಕನ್ನ ಹಾಕಿದ್ದಾಳೆ. ಅಲ್ಲದೆ ಕಳ್ಳತನದ ವೇಳೆ ಸಿಕ್ಕಿಬಿದ್ದರೆ ತನ್ನ ಪುಟ್ಟ ಮಗುವನ್ನು ತೋರಿಸಿ ಅನುಕಂಪ ಗಿಟ್ಟಿಸಿಕೊಳ್ಳುತ್ತಿದ್ದಳು.
ಇನ್ನು ಕಳ್ಳತನ ಮಾಡಿ ತಂದ ಚಿನ್ನ, ವಸ್ತುಗಳನ್ನು ಲಕ್ಷ್ಮೀಯ ಗಂಡ ಮಾರಿ ಹಣ ತರುತ್ತಿದ್ದ. ಸದ್ಯ ಖತರ್ನಾಕ್ ಕಳ್ಳಿಯನ್ನು ಆರ್.ಟಿ.ನಗರ ಪೊಲೀಸರು ಬಂಧಿಸಿ ಮಕ್ಕಳನ್ನ ಬಾಲಮಂದಿರಕ್ಕೆ ಕಳುಹಿಸಿದ್ದಾರೆ.
ಇದನ್ನೂ ಓದಿ: Facebook Outage: ಫೇಸ್ಬುಕ್ನ 6 ಗಂಟೆ ವ್ಯತ್ಯಯದಿಂದ ಝುಕರ್ಬರ್ಗ್ನ 44,713 ಕೋಟಿ ರೂಪಾಯಿ ಖಲ್ಲಾಸ್