108 ಆ್ಯಂಬುಲೆನ್ಸ್ ಸಿಬ್ಬಂದಿಗಳ ಸಂಬಳ ವಿಚಾರ: ಸರ್ಕಾರದಿಂದ ಜಿವಿಕೆ ಸಂಸ್ಥೆಗೆ ಹಣ ಪಾವತಿಯಾಗಿದೆ ಎಂದ ಸಚಿವ ಡಾ.ಕೆ.ಸುಧಾಕರ್
108 ಆ್ಯಂಬುಲೆನ್ಸ್ ಸಿಬ್ಬಂದಿ ಜೊತೆ ನಾವು ಮಾತನಾಡಿದ್ದೇವೆ. ಸರ್ಕಾರದ ಪರ ಜಿವಿಕೆ ಸಂಸ್ಥೆ ಆ್ಯಂಬುಲೆನ್ಸ್ ಸೇವೆ ಒದಗಿಸುತ್ತಿದೆ. ಟೆಂಡರ್ ಅವಧಿ ಮುಕ್ತಾಯವಾಗಿದ್ದರೂ ಕೋರ್ಟ್ ಆದೇಶದಂತೆ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.
ಬೆಂಗಳೂರು: ರಾಜ್ಯ ಸರ್ಕಾರದಿಂದ ಜಿವಿಕೆ ಸಂಸ್ಥೆಗೆ ಹಣ ಪಾವತಿ ಆಗಿದೆ. ಸಿಬ್ಬಂದಿಗೆ ಸಂಸ್ಥೆ ಸಂಬಳ ಪಾವತಿಸಬೇಕು, ಈ ಬಗ್ಗೆ ಚರ್ಚಿಸ್ತೇವೆ ಎಂದು ನಗರದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದರು. 108 ಆ್ಯಂಬುಲೆನ್ಸ್ (108 ambulance) ಸಿಬ್ಬಂದಿ ಜೊತೆ ನಾವು ಮಾತನಾಡಿದ್ದೇವೆ. ಸರ್ಕಾರದ ಪರ ಜಿವಿಕೆ ಸಂಸ್ಥೆ ಆ್ಯಂಬುಲೆನ್ಸ್ ಸೇವೆ ಒದಗಿಸುತ್ತಿದೆ. ಟೆಂಡರ್ ಅವಧಿ ಮುಕ್ತಾಯವಾಗಿದ್ದರೂ ಕೋರ್ಟ್ ಆದೇಶದಂತೆ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. 2008ರಿಂದ ಜಿವಿಕೆ ಸಂಸ್ಥೆ 108 ಸೇವೆಯನ್ನು ಒದಗಿಸುತ್ತಿದೆ. ಜಿವಿಕೆ ಸಂಸ್ಥೆಯ ಸೇವೆ ಸಹ ನಿರೀಕ್ಷಿತ ಮಟ್ಟದಲ್ಲಿ ಸಿಗುತ್ತಿಲ್ಲ. ಉತ್ಕೃಷ್ಟ ಸೇವೆ ಒದಗಿಸಲು ಹೊಸ ಟೆಂಡರ್ ಆಹ್ವಾನಿಸಿದ್ದೇವೆ. ಮುಂದಿನ ಎರಡು ತಿಂಗಳಲ್ಲೇ ಟೆಂಡರ್ ಅಂತಿಮ ಮಾಡುತ್ತೇವೆ. ಬೈಕ್ ಆ್ಯಂಬುಲೆನ್ಸ್ ಸೇವೆ ಅನಗತ್ಯವೆಂದು ಸಮಿತಿ ವರದಿ ನೀಡಿದೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ನಮ್ಮ ಕ್ಲಿನಿಕ್ ಆಸ್ಪತ್ರೆ ಕಾಮಗಾರಿ ಪರಿಶೀಲಿಸಿದ ಡಾ.ಸುಧಾಕರ್
ಬೆಂಗಳೂರಿನ ಮಹಾಲಕ್ಷ್ಮೀಪುರಂನಲ್ಲಿ 157 ಕೋಟಿ ರೂ. ನಮ್ಮ ಕ್ಲಿನಿಕ್ ನಿರ್ಮಾಣವಾಗುತ್ತಿದ್ದು, ಆಸ್ಪತ್ರೆ ನಿರ್ಮಾಣ, ಉಪಕರಣವನ್ನು ಡಾ.ಸುಧಾಕರ್ ತಪಾಸಣೆ ಮಾಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯಾದ್ಯಂತ ಒಟ್ಟು 438 ನಮ್ಮ ಕ್ಲಿನಿಕ್ ಪ್ರಾರಂಭ ಮಾಡುತ್ತೇವೆ. ಬೆಂಗಳೂರಿನಲ್ಲಿ 243 ನಮ್ಮ ಕ್ಲಿನಿಕ್ ನಿರ್ಮಾಣ ಮಾಡುತ್ತೇವೆ. ಡಿಸೆಂಬರ್ ತಿಂಗಳೊಳಗೆ ನಮ್ಮ ಕ್ಲಿನಿಕ್ಗಳ ಸೇವೆ ಪ್ರಾರಂಭವಾಗಲಿದೆ. ನಮ್ಮ ಕ್ಲಿನಿಕ್ಗೆ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಭಾಗಶಃ ಮುಗಿದಿದೆ. ಇನ್ನೂ ಕೆಲ ವೈದ್ಯರ ನೇಮಕಾತಿ ಆಗಲಿದೆ.
ಬೆಂಗಳೂರಿನ ಪ್ರತಿ ವಾರ್ಡ್ನಲ್ಲೂ ನಮ್ಮ ಕ್ಲಿನಿಕ್ ನಿರ್ಮಾಣವಾಗಲಿದೆ. ಬಡವರಿಗೆ ನಮ್ಮ ಕ್ಲಿನಿಕ್ನಿಂದ ಅನುಕೂಲವಾಗಲಿದೆ. ಏರ್ ಆ್ಯಂಬುಲೆನ್ಸ್ ಸೇವೆ ಆರಂಭಿಸುವ ಬಗ್ಗೆ ಚರ್ಚಿಸಿದ್ದೇವೆ. ವರ್ಷಕ್ಕೆ ಇಷ್ಟು ಅಂತ ಏರ್ ಆ್ಯಂಬುಲೆನ್ಸ್ ಬಳಸಲು ಪ್ಲ್ಯಾನ್ ಇದ್ದು, ಸೇವೆ ಸಂಬಂಧ ಖಾಸಗಿಯವರ ಜತೆ ಚರ್ಚೆ ಮಾಡಲಾಗುತ್ತಿದೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ನಾಳೆ ಮಹತ್ವದ ಸಭೆ ನಡೆಸಲಿರುವ ಆರೋಗ್ಯ ಇಲಾಖೆ
ನಾಳೆ ಎಂದಿನಂತೆ 108 ಆ್ಯಂಬುಲೆನ್ಸ್ ಸೇವೆ ಸಿಗಲಿದೆ. ನಾಳೆ ಆರೋಗ್ಯ ಇಲಾಖೆ ಮಹತ್ವದ ಸಭೆ ನಡೆಸಲಿದೆ. ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಯಾವುದೇ ಕಾರಣಕ್ಕೂ ತುರ್ತು ಸೇವೆ ನಿಲ್ಲಿಸದಿರಲು ಮನವಿ ಮಾಡಲಾಗಿದೆ. ಹೀಗಾಗಿ ನಾಳೆ ಆ್ಯಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯ ಇರೋದಿಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳ್ನನು ಓದಲು ಇಲ್ಲಿ ಕ್ಲಿಕ್ ಮಾಡಿ.