ಬೆಂಗಳೂರು: ಕರ್ನಾಟಕದ ಪಾಲಿಗೆ ಆಗಸ್ಟ್ 15 ಮಹತ್ವದ ದಿನ. ಸ್ವಾತಂತ್ರ್ಯ ದಿನಾಚರಣೆಯ (Independence Day) ಸಂಭ್ರಮಕ್ಕೆ ಇಂದು ‘ಅಮೃತ ಮಹೋತ್ಸವ’ದ (Azadi Ka Amrit Mahotsav) ಮೆರುಗೂ ಇದೆ. ಭಾರತದ ಸ್ವಾತಂತ್ರ್ಯ ದಿನಾಚರಣೆಯ ಜೊತೆಜೊತೆಗೆ ಇಂದು ಸಂಗೊಳ್ಳಿ ರಾಯಣ್ಣ (Sangolli Rayanna) ಜನ್ಮದಿನವೂ ಹೌದು. ಕಿತ್ತೂರು ಸಂಸ್ಥಾನವು (Kittur Kingdom) ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಸಂಗೊಳ್ಳಿ ರಾಯಣ್ಣನನ್ನು ಕರ್ನಾಟಕದ ಜನರು ಸಾಂಸ್ಕೃತಿಕ ಹೆಮ್ಮೆಯಾಗಿ ಪರಿಗಣಿಸಿ ಗೌರವಿಸುತ್ತಾರೆ.
ಮಹಾನ್ ಹೋರಾಟಗಾರನ ಜನ್ಮದಿನವನ್ನು ನೆನಪಿಸಿಕೊಂಡು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ತಮ್ಮ ಪ್ರಾಣವನ್ನೇ ತಾಯಿ ಭಾರತಾಂಬೆಗೆ ಸಮರ್ಪಿಸಿದ ಮಹಾನ್ ದೇಶಪ್ರೇಮಿ, ರಾಣಿ ಚೆನ್ನಮ್ಮರ ಬಲಗೈ ಬಂಟ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನದಂದು ಅವರಿಗೆ ಭಕ್ತಿಪೂರ್ವಕ ನಮನಗಳು’ ಎಂದು ಹೇಳಿದ್ದಾರೆ.
‘1857ರಲ್ಲಿ ನಡೆದ ಘಟನೆಯನ್ನು ನಾವು ಪ್ರಥಮ ಸ್ವಾತಂತ್ರ್ಯ ದಂಗೆ ಎಂದು ಕರೆಯುತ್ತೇವೆ. ಆದರೇ ಅದಕ್ಕೂ ಮುಂಚೆ 1824ರಲ್ಲಿಯೇ ಕನ್ನಡತಿ ಕಿತ್ತೂರು ರಾಣಿ ಚೆನ್ನಮ್ಮ, ಅವರ ಬಂಟ ಸಂಗೊಳ್ಳಿ ರಾಯಣ್ಣ ಬ್ರಿಟಿಷರಿಗೆ ಸೋಲಿನ ರುಚಿ ತೋರಿಸಿದ ಮೊದಲಿಗರಾಗಿದ್ದರು’ ಎಂದು ಮುಖ್ಯಮಂತ್ರಿ ತಮ್ಮ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ತಿಳಿಸಿದ್ದರು.
ಸಂಗೊಳ್ಳಿ ರಾಯಣ್ಣ ಅವರನ್ನು ನೆನಪಿಸಿಕೊಂಡಿರುವ ವಿರೋಧ ಪಕ್ಷ ಕಾಂಗ್ರೆಸ್ನ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ‘ದೇಶವನ್ನು ಬಂಧಮುಕ್ತಗೊಳಿಸುವ ಗುರಿಯ ಬೆನ್ನತ್ತಿ ಹೊರಟ ರಾಯಣ್ಣ, ನಮ್ಮೆಲ್ಲರ ಬಾಳಿಗೆ ಸ್ವಾತಂತ್ರ್ಯದ ಬೆಳಕು ನೀಡಿ ಮರೆಯಾದರೂ, ತಮ್ಮ ತ್ಯಾಗ, ಬಲಿದಾನದ ಮೂಲಕ ಇಂದಿಗೂ ನಮ್ಮ ನಡುವೆ ಜೀವಂತ. ಸಂಗೊಳ್ಳಿ ರಾಯಣ್ಣನ ಅದಮ್ಯ ದೇಶಪ್ರೇಮ, ಸ್ವಾಮಿನಿಷ್ಠೆ ಮತ್ತು ಸಮರ್ಪಣಾಭಾವ ನಮ್ಮೆಲ್ಲರ ಆದರ್ಶವಾಗಲಿ. ರಾಯಣ್ಣನ ಜನ್ಮದಿನದಂದು ನನ್ನ ಗೌರವ ನಮನಗಳು’ ಎಂದು ನೆನಪಿಸಿಕೊಂಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ಸಂಗೊಳ್ಳಿ ರಾಯಣ್ಣನನ್ನು ಸ್ಮರಿಸಿದ್ದಾರೆ. ‘ಕರುನಾಡಲ್ಲಿ ಬ್ರಿಟಿಷರಿಗೆ ನಡುಕ ಹುಟ್ಟಿಸಿದ ಧೀರನೆಂದರೆ ಅದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ. ರಾಣಿ ಚೆನ್ನಮ್ಮಳ ಬಂಟ ರಾಯಣ್ಣನ ಹೆಸರು ಕೇಳುತ್ತಿದ್ದರೆ ಬ್ರಿಟಿಷರ ಸದ್ದಡಗುತ್ತಿತ್ತು. ಇಂತಹ ವೀರನ ಹುಟ್ಟೂರು ಬೆಳಗಾವಿ ಜಿಲ್ಲೆ ಎಂಬುದೇ ಕನ್ನಡಿಗರಿಗೆ ಹೆಮ್ಮೆಯ ವಿಷಯ. ವೀರ ಸೇನಾನಿಯ ಜಯಂತಿಯಂದು ಶತಶತ ನಮನಗಳು’ ಎಂದಿದ್ದಾರೆ.
ಕನ್ನಡ ನಾಡಿನ ವೀರಪುತ್ರ “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ” ಅವರ ಜನುಮ ದಿನ ಇಂದು. ಬ್ರಿಟಿಷರ ಪಾಲಿನ ದುಃಸ್ವಪ್ನವಾಗಿದ್ದ ನಾಡಿನ ಹೆಮ್ಮೆಯ ವೀರನಿಗೆ ಅನಂತಾನಂತ ನಮನಗಳು..#SangolliRayanna #IndependenceDay2022 #IndiaAt75 pic.twitter.com/inlon8y9Q7
— ‘Kannadigas Center’ ಕನ್ನಡಿಗರ ಕೇಂದ್ರ (@Kannadigacentre) August 15, 2022
ಬಿಜೆಪಿ ನಾಯಕ ಲಕ್ಷ್ಮಣ ಸವದಿ ಸಹ ಸಂಗೊಳ್ಳಿ ರಾಯಣ್ಣನನ್ನು ಸ್ಮರಿಸಿದ್ದಾರೆ. ‘ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಕಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜಯಂತಿಯಂದು ಅವರಿಗೆ ಶತಕೋಟಿ ಪ್ರಣಾಮಗಳು. ವೀರಾಧಿವೀರನ ಹೋರಾಟ ಮತ್ತು ದುರಂತ ಅಂತ್ಯ ನಾವೆಂದಿಗೂ ಮರೆಯದಿರೋಣ’ ಎಂದು ಕರೆ ನೀಡಿದ್ದಾರೆ.
ಸಂಸದ ರಾಜೀವ್ ಚಂದ್ರಶೇಖರ್ ಸಹ ಸಂಗೊಳ್ಳಿ ರಾಯಣ್ಣನನ್ನು ಸ್ಮರಿಸಿ, ‘ರಾಣಿ ಚೆನ್ನಮ್ಮರ ಬಲಗೈ ಬಂಟನಾಗಿ, ಕಿತ್ತೂರು ಸಂಸ್ಥಾನದ ಉಳಿವಿಗಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೋರಾಡಿದ ಪರಿ ಎಂದೆಂದಿಗೂ ಅಜರಾಮರ. ಅವರ ಜಯಂತಿಯಂದು ಗೌರವಪೂರ್ವಕ ನಮನಗಳು’ ಎಂದಿದ್ದಾರೆ.
ಬಿಜೆಪಿ ನಾಯಕ ವಿಜಯೇಂದ್ರ, ಸಚಿವ ಸಿ.ಎನ್.ಅಶ್ವತ್ಥ ನಾರಾಯಣ ಸೇರಿದಂತೆ ಹಲವರು ಸಂಗೊಳ್ಳಿ ರಾಯಣ್ಣನ ತ್ಯಾಗ, ಬಲಿದಾನಗಳನ್ನು ಸ್ಮರಿಸಿದ್ದಾರೆ.