ಕಾವೇರಿ ವಿವಾದ: ತಮಿಳುನಾಡಿಗೆ ನೀರು ಬಿಡುವ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋದ ಬೆಂಗಳೂರು ನಾಗರೀಕರು
Cauvery river water dispute; ರಾಜ್ಯವು ಸಿಡಬ್ಲ್ಯುಎಂಎ ಆದೇಶವನ್ನು ಅನುಸರಿಸಿದರೆ ಕಾವೇರಿ ನದಿಯಿಂದ ಬೆಂಗಳೂರಿಗೆ ಕುಡಿಯಲು ನೀರು ಬಿಡುವುದಿಲ್ಲ. ಇದು ನೀರಾವರಿ ಉದ್ದೇಶಕ್ಕೂ ತೊಂದರೆ ಉಂಟುಮಾಡುತ್ತದೆ ಎಂದು ಬೆಂಗಳೂರು ನಾಗರಿಕರು ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.
ಬೆಂಗಳೂರು, ಸೆಪ್ಟೆಂಬರ್ 20: ತಮಿಳುನಾಡಿಗೆ 15 ದಿನಗಳ ಕಾಲ 5,000 ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿರುವ ಆದೇಶವನ್ನು ಪ್ರಶ್ನಿಸಿ ಸ್ಯಾಂಕಿ ಟ್ಯಾಂಕ್ ವಾಕರ್ಸ್ ಅಸೋಸಿಯೇಷನ್ ಮತ್ತು ಬೆಂಗಳೂರಿನ ಇತರ ಕೆಲವು ನಾಗರಿಕರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ನೀರು ಬಿಟ್ಟರೆ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದು, ಸಿಡಬ್ಲ್ಯುಎಂಎ ಆದೇಶಕ್ಕೆ ತಡೆ ನೀಡುವಂತೆ ಕೋರಿದ್ದಾರೆ.
ರಾಜ್ಯವು ಸಿಡಬ್ಲ್ಯುಎಂಎ ಆದೇಶವನ್ನು ಅನುಸರಿಸಿದರೆ ಕಾವೇರಿ ನದಿಯಿಂದ ಬೆಂಗಳೂರಿಗೆ ಕುಡಿಯಲು ನೀರು ಬಿಡುವುದಿಲ್ಲ. ಇದು ನೀರಾವರಿ ಉದ್ದೇಶಕ್ಕೂ ತೊಂದರೆ ಉಂಟುಮಾಡುತ್ತದೆ ಎಂದು ಬೆಂಗಳೂರು ನಾಗರಿಕರು ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿದೆ. ತಮಿಳುನಾಡು ಜಲಾಶಯಗಳ ನೀರನ್ನು ‘ಅತಿಯಾಗಿ ಬಳಸಿಕೊಂಡಿದೆ’ ಹೀಗಾಗಿ ತಮಿಳುನಾಡಿಗೆ ನೀರು ಬಿಡದಂತೆ ಆದೇಶ ನೀಡಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ನೀರು ಬಿಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಲಿದೆ. ಈ ವಿಷಯವು ಗುರುವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ ಮತ್ತು ಅದೇ ದಿನಾಂಕದಂದು ಸುಪ್ರೀಂ ಕೋರ್ಟ್ ಹೊಸ ಅರ್ಜಿಯನ್ನು ಪರಿಗಣಿಸಬಹುದು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬುಧವಾರ ದೆಹಲಿಯ ಖಾಸಗಿ ಹೋಟೆಲ್‌ನಲ್ಲಿ ಸರ್ವಪಕ್ಷ ಸಭೆ ನಡೆಸಿ ಎಲ್ಲ ನಾಯಕರೊಂದಿಗೆ ಚರ್ಚಿಸಿದರು.
ಪಕ್ಷ ರಾಜಕಾರಣ ಬಿಟ್ಟು ರಾಜ್ಯದ ಜನತೆಯ ಹಿತಕ್ಕಾಗಿ ಎಲ್ಲಾ ಪಕ್ಷದ ಮುಖಂಡರು ಒಗ್ಗೂಡಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Explainer; ಕಾವೇರಿ ವಿವಾದದ ಕಿಡಿ ಹೊತ್ತಿಕೊಂಡಿದ್ದು ಯಾವಾಗ? ಇಲ್ಲಿದೆ ನದಿ ನೀರು ಹಂಚಿಕೆ ಕಲಹದ ಸುದೀರ್ಘ ಇತಿಹಾಸ
ಪ್ರಸ್ತುತ ನಮಗೆ ಕುಡಿಯುವ ನೀರಿಗೆ 33 ಟಿಎಂಸಿ, ಬೆಳೆ ಸಂರಕ್ಷಣೆಗೆ 70 ಟಿಎಂಸಿ, ಕೈಗಾರಿಕೆಗಳಿಗೆ 3 ಟಿಎಂಸಿ ಸೇರಿ ಒಟ್ಟು 106 ಟಿಎಂಸಿ ಅಗತ್ಯವಿದೆ. ನಮಗೆ 53 ಟಿಎಂಸಿ ನೀರು ಮಾತ್ರ ಉಳಿದಿದೆ. ಹೀಗಾಗಿ ತಮಿಳುನಾಡಿಗೆ ಬಿಡಲು ನಮ್ಮಲ್ಲಿ ನೀರಿಲ್ಲ ಎಂದು ಸಿಎಂ ಹೇಳಿದ್ದಾರೆ. ಸಮಸ್ಯೆ ಬಗೆಹರಿಸಲು ಮಧ್ಯಸ್ಥಿಕೆ ವಹಿಸುವಂತೆ ಕೇಂದ್ರ ಜಲಶಕ್ತಿ ಸಚಿವರನ್ನು ನಿಯೋಗ ಭೇಟಿ ಮಾಡುವುದಾಗಿಯೂ ಸಿದ್ದರಾಮಯ್ಯ ಹೇಳಿದ್ದಾರೆ.
ಸರ್ವಪಕ್ಷಗಳ ಸಭೆಯ ನಂತರ, ತಮಿಳುನಾಡಿಗೆ 5,000 ಕ್ಯೂಸೆಕ್ ನೀರು ಬಿಡುವ ಆದೇಶಕ್ಕೆ ತಡೆ ಕೋರಿ ಕರ್ನಾಟಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಗುರುವಾರ ಪ್ರಕರಣದ ವಿಚಾರಣೆ ನಡೆಯುವ ಸಾಧ್ಯತೆ ಇದೆ.
ಮಳೆ ಕೊರತೆಯಿಂದ ಕರ್ನಾಟಕ ರಾಜ್ಯದ 195 ತಾಲೂಕುಗಳಲ್ಲಿ ಬರ ಘೋಷಣೆ ಮಾಡಿದ್ದು, ಕೇಂದ್ರದಿಂದ ಪರಿಹಾರ ಕೋರಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ