ಬೆಂಗಳೂರು, ಜ.13: ಸಾಲು-ಸಾಲು ರಜೆ ಬಂತು ಅಂದರೆ ಖಾಸಗಿ ಬಸ್ ಗಳಿಗೆ (Private Bus) ಹಬ್ಬವೂ ಹಬ್ಬ. ಎರಡ್ಮೂರು ಪಟ್ಟು ದರ ಏರಿಕೆ ಮಾಡಿ, ಜನರಿಂದ ಸುಲಿಗೆ ಶುರುವಾಗುತ್ತೆ. ಕಳೆದ ವರ್ಷ ಹಬ್ಬದ ವೇಳೆ ಬ್ಯಾಕ್ ಟೂ ಬ್ಯಾಕ್ ರಜೆ ವೇಳೆ ಜನರಿಂದ ದರೋಡೆ ಮಾಡಿದ ಖಾಸಗಿ ಬಸ್ ಮಾಲೀಕರು ಈ ವರ್ಷದ ಮೊದಲ ಹಬ್ಬಕ್ಕೆ ಮತ್ತದೆ ಚಾಳಿ ಮುಂದುವರೆಸಿದ್ದಾರೆ (Makar Sankranti). ಈ ವರ್ಷ ಒಂದು ಹೆಜ್ಜೆ ಮುಂದೆ ಹೋಗಿ 15 ದಿನದ ನಂತರ ಇರೋ ರಿಪಬ್ಲಿಕ್ ಡೇ ಹಾಲಿಡೇಗೂ ಇಗಲೇ ರೇಟ್ ಹೆಚ್ಚಿಸಿದ್ದಾರೆ. ಇನ್ನು ಮತ್ತೊಂದೆಡೆ ಕೆಎಸ್ಆರ್ಟಿಸಿ (KSRTC) ವತಿಯಿಂದ ಹೆಚ್ಚುವರಿಯಾಗಿ 400 ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ಗಣೇಶ ಚತುರ್ಥಿ, ದಸರಾ, ದೀಪಾವಳಿ, ಕ್ರಿಸ್ಮಸ್ ಹೀಗೆ ಹಬ್ಬಗಳ ಸೀಜನ್ ಬಂತು ಅಂದರೆ ಖಾಸಗಿ ಬಸ್ ಮಾಲೀಕರಿಗೆ ಭರ್ಜರಿ ಲಾಟರಿ. ಸಿಕ್ಕಿದ್ದೆ ಚಾನ್ಸ್ ಅಂತ ಜನರಿಂದ ಸುಲಿಗೆಗೆ ಇಳಿದು ಬಿಡ್ತಾರೆ. ರಜೆ ಅಂತ ಮನೆ ಕಡೆ ಹೋರಟವರ ಬಳಿ ಹಗಲು ದರೋಡೆ ಶುರು ಮಾಡ್ತಾರೆ. ಕಳೆದ ವರ್ಷ ಅವಕಾಶ ಸಿಕ್ಕಗಾಲೆಲ್ಲ ದರ ಏರಿಸಿದ ಪ್ರವೈಟ್ ಬಸ್ ಮಾಲೀಕರು ಈ ವರ್ಷವೂ ಅದೇ ರಾಗಕ್ಕೆ ತಾಳ ಹಾಕಿದ್ದಾರೆ. ಹೊಸ ವರ್ಷದ ಮೊದಲ ಹಬ್ಬಕ್ಕೆ ರಜೆಯಿದೆ ಅಂತ ಮನೆ ಕಡೆ ಹೋಗಲು ಸಜ್ಜಾದವರಿಗೆ ಖಾಸಗಿ ಬಸ್ ಕಡೆ ದರ ಏರಿಕೆ ಶಾಕ್ ಎದುರಾಗಿದೆ. ಈ ವರ್ಷದ ಮೊದಲ ಹಬ್ಬ ಸಂಕ್ರಾತಿ 15 ರಂದು ಇದೆ. ಜ.13ನೇ ತಾರೀಕು ಎರಡನೇ ಶನಿವಾರದ ಹಿನ್ನೆಲೆ ರಜೆಯಿದೆ. 14 ರವಿವಾರ ಹೀಗಾಗಿ ಬ್ಯಾಕ್ ಟು ಬ್ಯಾಕ್ ರಜೆ ಸಿಕ್ಕಿದೆ. ಜನರು ರಜೆ ಅಂತ ತಮ್ಮೂರಿಗೆ ತೆರಳಲು ಈಗಾಗಲೇ ಟಿಕೆಟ್ ಬುಕ್ಕಿಂಗ್ ಕೂಡ ಮಾಡ್ತಿದ್ದಾರೆ. ಆದರೆ ತಮ್ಮ ಊರುಗಳತ್ತ ಹೊರಟಿರುವ ಜನರಿಗೆ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ದರ ದುಪ್ಪಟ್ಟಿನ ಶಾಕ್ ಎದುರಾಗಿದೆ.
ಇನ್ನೂ ವರ್ಷದ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಖಾಸಗಿ ಬಸ್ ಮಾಲೀಕರು. 15 ದಿನ ನಂತರ ಬರುವ ಗಣರಾಜ್ಯೋತ್ಸವದ ರಜೆಗೂ ಬಸ್ ಟಿಕೆಟ್ ದರ ಏರಿಸಿ ಹೊಸ ಶಾಕ್ ನೀಡಿದ್ದಾರೆ. ಈ ವರ್ಷ ರಿಪಬ್ಲಿಕ್ ಡೇ ಶುಕ್ರವಾರ ಬಂದಿದೆ. 27ನೇ ತಾರೀಕು ನಾಲ್ಕನೇ ಶನಿವಾರ ಅವತ್ತು ಸರ್ಕಾರಿ ರಜೆ. ಇನ್ನೂ 28 ಭಾನುವಾರ ಹೀಗಾಗಿ ತಿಂಗಳಲ್ಲಿ ಎರಡನೇ ಬಾರಿಗೆ ಮೂರು ದಿನ ರಜೆ ಸಿಗ್ತಿದೆ. ಆದರೆ ಈ ಹಾಲಿಡೇಗೂ 16 ದಿನ ಮುಂಚಿವಾಗಿಯೇ 25 ನೇ ತಾರೀಕಿನ ಟಿಕೆಟ್ ದರ ದುಪ್ಪಟಾಗಿದೆ.
ಇದನ್ನೂ ಓದಿ: Makar Sankranti 2024: ಸಂಕ್ರಾಂತಿಯಂದು ಸುಲಭವಾಗಿ ತಯಾರಿಸಬಹುದಾದ ಪಾಕವಿಧಾನಗಳು ಇಲ್ಲಿವೆ
ಇನ್ನೂ ಬೆಂಗಳೂರಿನಿಂದ ಹೊರರಾಜ್ಯಕ್ಕೂ ಪ್ರವೈಟ್ ಬಸ್ ರೇಟ್ ಏರಿಸಿ ಶಾಕ್ ಕೊಟ್ಟಿವೆ. ಸಾಮಾನ್ಯ ದಿನದಲ್ಲಿ ಇದ್ದ ಬಸ್ ದರ ಎರಡ್ಮೂರು ಪಟ್ಟು ಹೆಚ್ಚಳವಾಗಿದೆ. ಟಿಕೆಟ್ ಬುಕಿಂಗ್ ವೆಬ್ ಸೈಟ್ ನಲ್ಲಿ ಮನಸ್ಸಿಗೆ ಬಂದಂತೆ ದರ ಡಬಲ್ ಆಗಿದೆ.
ಸಂಕ್ರಾಂತಿ ಹಬ್ಬಕ್ಕೆ ಬೆಂಗಳೂರಿನಿಂದ ಊರುಗಳಿಗೆ ತೆರಳುತ್ತಿರುವ ಜನ ಹೆಚ್ಚಿದ್ದಾರೆ. ಮೆಜೆಸ್ಟಿಕ್ ನಿಲ್ದಾಣದಲ್ಲಿ ಬಸ್ಗಾಗಿ ನೂರಾರು ಜನ ಕಾಯುತ್ತಿದ್ದಾರೆ. ಮೆಜೆಸ್ಟಿಕ್ ಸುತ್ತಮುತ್ತ ಫುಲ್ ಟ್ರಾಫಿಕ್ ಜಾಮ್, ಸವಾರರ ಪರದಾಟ ಕಂಡು ಬಂದಿದೆ. ಶಿವಮೊಗ್ಗ, ಬೆಂಗಳೂರು, ಉಡುಪಿ, ಬಳ್ಳಾರಿ, ಬೆಳಗಾವಿ ಕಡೆಗೆ ಹೆಚ್ಚಿನ ಜನ ಪ್ರಯಾಣಿಸುತ್ತಿದ್ದಾರೆ. ಸದ್ಯ ಕೆಎಸ್ಆರ್ಟಿಸಿ ವತಿಯಿಂದ ಹೆಚ್ಚುವರಿಯಾಗಿ 400 ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ