ಬೆಂಗಳೂರಿನ ಟೆಕ್ಕಿಗಳಿಂದ ವಿಭಿನ್ನ ಸಮಾಜ ಸೇವೆ; ಗ್ರಾಮೀಣ ಪ್ರದೇಶದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ

ಬೆಂಗಳೂರು ಸಾಫ್ಟ್‌ವೇರ್ ಉದ್ಯೋಗಿಗಳು ಕನಕಪುರದ ಸಾಸ್ಲಾಪುರದಲ್ಲಿ ಯಶಸ್ವಿ ಕಣ್ಣಿನ ತಪಾಸಣಾ ಶಿಬಿರ ಆಯೋಜಿಸಿದರು. 100ಕ್ಕೂ ಹೆಚ್ಚು ಗ್ರಾಮಸ್ಥರು ಭಾಗವಹಿಸಿದ್ದು, ಹಲವರಿಗೆ ಉಚಿತ ಕನ್ನಡಕ ಹಾಗೂ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ಒದಗಿಸಲಾಗುವುದಾಗಿ ಆಯೋಜಕರು ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಶಿಬಿರವನ್ನು ಆಯೋಜಿಸಲು ಆಯೋಜಕರು ಚಿಂತಿಸಿದ್ದಾರೆ.

ಬೆಂಗಳೂರಿನ ಟೆಕ್ಕಿಗಳಿಂದ ವಿಭಿನ್ನ ಸಮಾಜ ಸೇವೆ; ಗ್ರಾಮೀಣ ಪ್ರದೇಶದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ
ಬೆಂಗಳೂರಿನ ಟೆಕ್ಕಿಗಳಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರ

Updated on: Dec 10, 2025 | 10:19 AM

ಬೆಂಗಳೂರು, ಡಿಸೆಂಬರ್ 10: ಬೆಂಗಳೂರಿನ (Bengaluru) ಸಾಫ್ಟವೇರ್ ಉದ್ಯೋಗಿಗಳು ಕನಕಪುರದ ಸಾತನೂರು ಹೋಬಳಿಯ ಚಿಕ್ಕಗ್ರಾಮವಾದ ಸಾಸ್ಲಾಪುರದಲ್ಲಿ ಕಣ್ಣಿನ ಸಮಗ್ರ ತಪಾಸಣಾ ಶಿಬಿರವನ್ನು ಆಯೋಜಿಸಿದ್ದರು.ಈ ಶಿಬಿರದಲ್ಲಿ 100 ಕ್ಕೂ ಹೆಚ್ಚು ಸ್ಥಳೀಯರು ಪಾಲ್ಗೊಂಡಿದ್ದು, ಮುಂಬರುವ ದಿನಗಳಲ್ಲಿ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಶಿಬಿರವನ್ನು ಆಯೋಜಿಸಲು ಆಯೋಜಕರು ಉತ್ಸುಕರಾಗಿದ್ದಾರೆ.

ಸಾಸ್ಲಾಪುರದಲ್ಲಿ ಕಣ್ಣಿನ ಸಮಗ್ರ ತಪಾಸಣಾ ಶಿಬಿರ ಯಶಸ್ವಿ

ಸಾಫ್ಟವೇರ್ ಉದ್ಯೋಗಿ ಪ್ರಸನ್ನ ಅವರು ಹಳ್ಳಿಯ ಜನರೊಡಗಿನ ತಮ್ಮ ಒಡನಾಟ ಮತ್ತು ಮಾತುಕತೆಯ ಸಂದರ್ಭದಲ್ಲಿ ,ಹಳ್ಳಿಯ ಜನರಲ್ಲಿ ಕಣ್ಣಿನ ಆರೈಕೆಯ ಮಾಹಿತಿ ಮತ್ತು ಸೌಲಭ್ಯದ ಕೊರತೆಯನ್ನು ಮನಗಂಡು, ತಮ್ಮ ಸಹೋದ್ಯೋಗಿ ಸೌರಭ ಶಾಂಡಿಲ್ಯ ಅವರ ಜೊತೆಗೂಡಿ ,ಬೆಂಗಳೂರಿನ ಪ್ರತಿಷ್ಠಿತ ಕಣ್ಣಿನ ಆಸ್ಪತ್ರೆ ಮತ್ತು ಐಗೇಟ್ ಆಪ್ಟಿಕ್ಸ ಅವರ ಸಹಯೋಗದೊಂದಿಗೆ ಹಳ್ಳಿಯಲ್ಲಿ ಕಣ್ಣು ತಪಾಸಣಾ ಶಿಬಿರವನ್ನು ಆಯೋಜಿಸಲು ಮುಂದಾದರು. ಇವರ ಪ್ರಯತ್ನದಿಂದ, ಐಗೇಟ್ ಆಪ್ಟಿಕ್ಸ ಮಾಲಕರಾದ ಶ್ರೀ. ಲೆನಿನ ಮತ್ತು ಸಹಾಯಕರಾದ ಚಂದನ ಅವರ ಸಹಕಾರ, ಪಂಚಾಯತ್ ಅಧ್ಯಕ್ಷೆ ಪುಟ್ಟತಾಯಮ್ಮ ಮತ್ತು ಅವರ ಪತಿ ಶಿವಣ್ಣ ಹಾಗೂ ಊರಿನ ಅನೇಕ ಮುಖಂಡರ ಸಹಕಾರದೊಂದಿಗೆ ಡಿಸೆಂಬರ್ 6 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಸ್ಲಾಪುರದಲ್ಲಿ ಕಣ್ಣಿನ ಸಮಗ್ರ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು.

ಸುತ್ತಮುತ್ತಲಿನ 20 ಹಳ್ಳಿಗಳಲ್ಲಿಯೂ ಶಿಬಿರ ನಡೆಸುವ ಯೋಜನೆ

ಶಾಲೆಯ ಮುಖ್ಯೋಪಾಧ್ಯಯರಾದ ನಂದೀಶ ಅವರು ಶಿಬಿರಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿ ಶಿಬಿರದ ಯಶಸ್ಸಿನಲ್ಲಿ ಮುಖ್ಯ ಪಾತ್ರ ವಹಿಸಿದರು. ಸಾಸ್ಲಾಪುರ ಗ್ರಾಮದ ಶ್ರೀಯುತ ಮಹಾದೇವ ಅವರು ಊರ ನಾಗರಿಕರು ಶಿಬಿರದಲ್ಲಿ ಪಾಲ್ಗೊಳ್ಳುವಲ್ಲಿ ಮಹತ್ವದ ಪಾತ್ರವಹಿಸಿದರು. 30 ಶಾಲಾಮಕ್ಕಳು ಸೇರಿ ಒಟ್ಟೂ 140 ನಾಗರಿಕರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದು, ಶಿಬಿರದಲ್ಲಿ ಪಾಲ್ಗೊಂಡ ಒಟ್ಟೂ 78 ನಾಗರಿಕರಿಗೆ ಉಚಿತ ಕನ್ನಡಕ ಮತ್ತು 13 ನಾಗರಿಕರಿಗೆ ಉಚಿತ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯನ್ನು ಬೆಂಗಳೂರಿನ ಪ್ರತಿಷ್ಟಿತ ಕಣ್ಣಿನ ಆಸ್ಪತ್ರೆಯಲ್ಲಿ ನಡೆಸಲಾಗುವುದಾಗಿ ಆಯೋಜಕರು ಹೇಳಿದ್ದಾರೆ. ಊರಿನ ನಾಗರಿಕರು ಬಹಳ ಉತ್ಸಾಹದಿಂದ ಈ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಮನೆಯ ಬಾಗಿಲಿಗೇ ಈ ವ್ಯವಸ್ಥೆ ಮಾಡಿದ್ದಕ್ಕೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು.

ಊರಿನ ನಾಯಕರು,ಆರೋಗ್ಯ ಸಿಬ್ಭಂದಿಗಳ ಜೊತೆಗೆ ತಂತ್ರಜ್ಞಾನ ಮತ್ತು ತಂತ್ರಜ್ಞಾನಿಗಳು ಸೇರಿ ಪ್ರಯತ್ನ ಪಟ್ಟರೆ ಹಳ್ಳಿಯ ಜನರ ಆರೋಗ್ಯದ ಸುಧಾರಣೆಯಲ್ಲಿ ಹೇಗೆ ಸಹಾಯವಾಗಬಹುದು ಎನ್ನುವುದಕ್ಕೆ ಈ ಯಶಸ್ವಿ ಸಮುದಾಯ ಸಂಪರ್ಕ ಶಿಬಿರ ಒಂದು ಉದಾಹರಣೆ. ಊರನಾಗರಿಕರ ಉತ್ತಮ ಭಾಗವಹಿಸುವಿಕೆಯನ್ನು ಕಂಡು ಆಯೋಜಕರು ಹತ್ತಿರದ 20 ಹಳ್ಳಿಗಳಲ್ಲೂ ಹೆಚ್ಚು ಹೆಚ್ಚು ಶಿಬಿರಗಳನ್ನು ಆಯೋಜಿಸಲು ಉತ್ಸುಕರಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:18 am, Wed, 10 December 25