AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಕ್ಷಾಂತರ ದುಡಿಯೋ ಹೆಣ್ಮಕ್ಕಳಿಗೂ ಬಸ್ ಫ್ರೀ ಬೇಕಾ? ಸಿಎಲ್​ಪಿ ಸಭೆಯಲ್ಲೇ ಕಾಂಗ್ರೆಸ್ ಶಾಸಕರ ಆಕ್ಷೇಪ!

ಲಕ್ಷಾಂತರ ದುಡಿಯೋ ಹೆಣ್ಮಕ್ಕಳಿಗೂ ಬಸ್ ಫ್ರೀ ಬೇಕಾ? ಸಿಎಲ್​ಪಿ ಸಭೆಯಲ್ಲೇ ಕಾಂಗ್ರೆಸ್ ಶಾಸಕರ ಆಕ್ಷೇಪ!

Sunil MH
| Updated By: Ganapathi Sharma|

Updated on: Dec 10, 2025 | 9:22 AM

Share

ಬೆಳಗಾವಿಯಲ್ಲಿ ಮಂಗಳವಾರ ರಾತ್ರಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ಶಾಸಕರು ಗ್ಯಾರಂಟಿ ಯೋಜನೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಕೇವಲ ಗ್ಯಾರಂಟಿಗಳನ್ನು ನೆಚ್ಚಿಕೊಂಡರೆ ಗೆಲುವು ಅಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ಮುಂದೆಯೇ ಬೇಸರ ತೋಡಿಕೊಂಡಿದ್ದಾರೆ. ಅಭಿವೃದ್ಧಿ ಯೋಜನೆಗಳತ್ತ ಗಮನ ಹರಿಸುವಂತೆ ಆಗ್ರಹಿಸಿ, ಗ್ಯಾರಂಟಿ ಯೋಜನೆಗಳ ಮರುಪರಿಶೀಲನೆಗೆ ಒತ್ತಾಯಿಸಿದ್ದಾರೆ.

ಬೆಳಗಾವಿ, ಡಿಸೆಂಬರ್ 10: ಬೆಳಗಾವಿಯಲ್ಲಿ ಮಂಗಳವಾರ ರಾತ್ರಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ, ಕರ್ನಾಟಕದ ಕಾಂಗ್ರೆಸ್ ಶಾಸಕರು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದಿನ ಚುನಾವಣೆಗಳನ್ನು ಕೇವಲ ಗ್ಯಾರಂಟಿಗಳನ್ನು ನೆಚ್ಚಿಕೊಂಡು ಎದುರಿಸಲು ಸಾಧ್ಯವಿಲ್ಲ, ಬದಲಿಗೆ ಅಭಿವೃದ್ಧಿ ಯೋಜನೆಗಳತ್ತ ಗಮನ ಹರಿಸುವ ಅಗತ್ಯವಿದೆ ಎಂದು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿಯೇ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಾಸಕರ ಪ್ರಕಾರ, ಜನಸಾಮಾನ್ಯರು ಗ್ಯಾರಂಟಿ ಯೋಜನೆಗಳ ಬಗ್ಗೆ ಅಷ್ಟಾಗಿ ಹೊಗಳಿಕೆಯ ಮಾತನ್ನಾಡುತ್ತಿಲ್ಲ. ಬದಲಿಗೆ ತಮ್ಮ ಕ್ಷೇತ್ರಗಳಲ್ಲಿ ದೇವಸ್ಥಾನಗಳ ಅಭಿವೃದ್ಧಿ, ಸಭಾಭವನಗಳ ನಿರ್ಮಾಣ, ರಸ್ತೆಗಳ ಸುಧಾರಣೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ನೆರವು ಬಯಸುತ್ತಿದ್ದಾರೆ. ಕೇವಲ ಗ್ಯಾರಂಟಿ ಯೋಜನೆಗಳ ಮೇಲೆ ಅವಲಂಬಿತವಾಗಿದ್ದರೆ ಜನರಿಗೆ ಬೇಕಾದ ಇತರ ಮೂಲಭೂತ ಸೌಕರ್ಯಗಳು ಮತ್ತು ಅಭಿವೃದ್ಧಿ ಕಾರ್ಯಗಳು ಹಿನ್ನಡೆ ಅನುಭವಿಸುತ್ತವೆ ಎಂದು ಅವರು ವಾದಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಡಬೇಕಾದ ಅನುದಾನದ ಕೊರತೆ ಎದುರಾಗಿದೆ ಎಂಬ ಕಳವಳವೂ ವ್ಯಕ್ತವಾಗಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಗ್ಯಾರಂಟಿ ಯೋಜನೆಗಳು ಪ್ರಮುಖ ಪಾತ್ರ ವಹಿಸಿದ್ದವು. ಆದರೆ, ಈಗ ಅದೇ ಯೋಜನೆಗಳು ಪಕ್ಷದೊಳಗೇ ಅಸಮಾಧಾನಕ್ಕೆ ಕಾರಣವಾಗಿರುವುದು ಸಿಎಂ ಸಿದ್ದರಾಮಯ್ಯ ಇರಿಸುಮುರಿಸಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಎಂಎಲ್‌ಸಿ ಸುಧಾಮ್ ದಾಸ್ ಅವರು ಸಿಎಲ್‌ಪಿ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಮರುಪರಿಶೀಲನೆಗೆ ಆಗ್ರಹಿಸಿದ್ದಾರೆ. ಸದಾಶಿವನಗರದಂತಹ ಶ್ರೀಮಂತ ಪ್ರದೇಶದಲ್ಲಿರುವ ಮನೆಗಳಿಗೂ 200 ಯೂನಿಟ್ ವಿದ್ಯುತ್ ಉಚಿತ, ಲಕ್ಷಾಂತರ ರೂಪಾಯಿ ದುಡಿಯುವ ಮಹಿಳೆಯರಿಗೂ ಬಸ್ ಪ್ರಯಾಣ ಉಚಿತ ನೀಡಬೇಕಾ ಎಂದು ಅವರು ಪ್ರಶ್ನಿಸಿದ್ದಾರೆ. ಉಳ್ಳವರಿಗೂ ಉಚಿತ ಸೌಲಭ್ಯಗಳನ್ನು ನೀಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುವುದಲ್ಲದೆ, ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅವರ ಈ ಹೇಳಿಕೆಗೆ ಹಲವು ಶಾಸಕರು ಸಹಮತ ವ್ಯಕ್ತಪಡಿಸಿದ್ದು, ಗ್ಯಾರಂಟಿ ಯೋಜನೆಗಳಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಯನ್ನು ಪರಿಷ್ಕರಿಸುವಂತೆ ಒತ್ತಾಯಿಸಿದ್ದಾರೆ.

ಈ ಬೆಳವಣಿಗೆಯು ಕಾಂಗ್ರೆಸ್ ನಾಯಕತ್ವಕ್ಕೆ ಸವಾಲಾಗಿ ಪರಿಣಮಿಸಿದೆ. ದೇಶಕ್ಕೇ ಮಾದರಿ ಎಂದು ಬಣ್ಣಿಸುತ್ತಿದ್ದ ಗ್ಯಾರಂಟಿ ಯೋಜನೆಗಳ ಬಗ್ಗೆ ಸ್ವಪಕ್ಷದ ಶಾಸಕರಿಂದಲೇ ಅಸಮಾಧಾನ ವ್ಯಕ್ತವಾಗಿರುವುದರಿಂದ, ಸಿದ್ದರಾಮಯ್ಯ ಸರ್ಕಾರವು ಅಭಿವೃದ್ಧಿ ಮತ್ತು ಜನಪರ ಯೋಜನೆಗಳ ಸಮತೋಲನವನ್ನು ಹೇಗೆ ಸಾಧಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ