ಬೆಂಗಳೂರು, ಸೆ.18: ಎಸ್ಪಿ ರೋಡ್ ನ ಮೊಬೈಲ್ ಶಾಪ್ ನಲ್ಲಿ ಸೇಲ್ಸ್ ಮ್ಯಾನೇಜರ್ ಆಗಿದ್ದ ಬಿಹಾರ ಮೂಲದ ಸಿದ್ಧಾರ್ಥ ಜೈನ್ ಎಂಬ ವ್ಯಕ್ತಿ ಬ್ಯಾಂಕ್ ನಲ್ಲಿ ಪಡೆದಿದ್ದ ಸಾಲಕ್ಕೆ ಹೆದರಿ ಜ್ಞಾನಭಾರತಿ ಮೆಟ್ರೋ ಸ್ಟೇಷನ್ನಲ್ಲಿ (Jnanabharathi Metro Station) ಮೆಟ್ರೋ ಟ್ರ್ಯಾಕಿಗೆ ಹಾರಿದ್ದರು. ಈ ವೇಳೆ ಅಲ್ಲಿನ ಸೆಕ್ಯುರಿಟಿ ಗಾರ್ಡ್ ಆಗಿರುವ ರಶ್ಮಿ ಅವರು ಸಿದ್ಧಾರ್ಥ್ ಅವರನ್ನು ರಕ್ಷಿಸಿದ್ದ ಘಟನೆ ನಡೆದಿತ್ತು. ಈ ಸಾಹಸ ಕ್ಷಣಗಳ ಸಂಬಂಧ ರಶ್ಮಿ ಅವರು ಕೆಲವು ಸಂಗತಿಗಳನ್ನು ಟಿವಿ9 ಜೊತೆ ಹಂಚಿಕೊಂಡಿದ್ದಾರೆ.
ನಿನ್ನೆ ಮಧ್ಯಾಹ್ನ 2.13 ಕ್ಕೆ ರೈಲು ಬರ್ತಿದ್ದ ವೇಳೆ ಸಿದ್ದಾರ್ಥ ಜೈನ್ ಟ್ರ್ಯಾಕ್ ಗೆ ಹಾರಿದ್ದರು. ಇದನ್ನು ಕಂಡ ರಶ್ಮಿ ಅವರು ಫ್ಲಾಟ್ ಫಾರಂ ನಲ್ಲಿದ್ದ ಇಎಸ್ಪಿ ಬಟನ್ (ಎಮರ್ಜೆನ್ಸಿ ಸ್ಟಾಪ್ ಪ್ಲಂಗರ್) ಬಟನ್ ಆಫ್ ಮಾಡಿದ್ರು. ಈ ಇಎಸ್ಪಿ ಬಟನ್ ಆಫ್ ಮಾಡಿದ್ರೆ ಮೆಟ್ರೋ ರೈಲು ಐದು ಸೆಕೆಂಡ್ ನಲ್ಲಿ ಸ್ಟಾಪ್ ಆಗುತ್ತದೆ. ಈ ಇಎಸ್ಪಿ ಬಟನ್ ಫ್ಲಾಟ್ ಫಾರಂನಲ್ಲಿ ಬಾಕ್ಸ್ ನಲ್ಲಿರುತ್ತದೆ. ಆ ಬಾಕ್ಸಿಗೆ ಗಾಜಿನ ಡೋರ್ ಅಳವಡಿಸಲಾಗಿರುತ್ತದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮೆಟ್ರೋ ಟ್ರ್ಯಾಕ್ಗೆ ಹಾರಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ: ಪ್ರಾಣಾಪಾಯದಿಂದ ಪಾರು
ಸೆಕ್ಯುರಿಟಿ ಗಾರ್ಡ್ ರಶ್ಮಿ ಸಿದ್ದಾರ್ಥ ಪ್ರಾಣ ಉಳಿಸಲು ಗಾಜಿನ ಡೋರ್ ಅನ್ನು ಕೈಯಲ್ಲಿ ಗುದ್ದಿ, ಆ ಬಟನ್ ಆಫ್ ಮಾಡಿದ್ದಾರೆ. ಈ ವೇಳೆ ರಶ್ಮಿ ಕೈಗೆ ಗಾಜಿನ ಚೂರುಗಳು ಹೊಕ್ಕು ರಕ್ತ ಸುರಿದಿದೆ. ಈ ಬಗ್ಗೆ ಟಿವಿ9 ಜೊತೆಗೆ ರಶ್ಮಿ ಅವರು ಮಾತನಾಡಿದ್ದಾರೆ. ನನಗೆ ಏನಾದರೂ ಪರವಾಗಿಲ್ಲ. ಆದರೆ ಆತನ ಪ್ರಾಣ ಕಾಪಾಡಬೇಕಿತ್ತು. ಅದು ನನ್ನ ಕೆಲಸ. ಆತನನ್ನು ರಕ್ಷಣೆ ಮಾಡುವ ವೇಳೆ ಗಾಬರಿಯಲ್ಲಿ ಬಾಕ್ಸ್ ಹೊಡೆಯಲು ಹ್ಯಾಮರ್ ಹುಡುಕಲು ಸಮಯವಿರಲಿಲ್ಲ. ಹಾಗಾಗಿ ಕೈಯಲ್ಲಿ ಗುದ್ದಿ ಬಟನ್ ಆಫ್ ಮಾಡಿದ್ದೀನಿ. ನಮ್ಮ ಮೆಟ್ರೋ ಅಧಿಕಾರಿಗಳು ನಮ್ಮ ಟ್ರೈನಿಂಗ್ ನಲ್ಲಿ ಇದನ್ನು ಹೇಳಿಕೊಟ್ಟಿದ್ರು. ದೇವರು ಇವತ್ತು ನನ್ನ ಪರವಾಗಿ ಇದ್ದಾನೆ ಅನ್ಸುತ್ತೆ. ಆತನ ಜೀವ ಉಳಿಸಿದ್ದು ತುಂಬಾ ಸಂತೋಷ ಆಗ್ತಿದೆ. ಸಣ್ಣಪುಟ್ಟ ಸಮಸ್ಯೆ ಗಳಿಗೆ ಸುಸೈಡ್ ಮಾಡಿಕೊಳ್ಳಬಾರದು. ಬದುಕಿ ಸಮಸ್ಯೆಗಳನ್ನು ಎದುರಿಸಬೇಕು ಎಂದು ತಿಳಿಸಿದ್ದಾರೆ.
ನಿನ್ನೆ ಮಧ್ಯಾಹ್ನ 2.13 ಕ್ಕೆ ವೈಟ್ ಫೀಲ್ಡ್ ಟು ಚೆಲ್ಲಘಟ್ಟ ಸಂಚಾರ ಮಾಡುತ್ತಿದ್ದ ರೈಲು, ಜ್ಞಾನಭಾರತಿ ಮೆಟ್ರೋ ಸ್ಟೇಷನ್ ಗೆ ಬರ್ತಿದ್ದಂತೆ ಬಿಹಾರ ಮೂಲದ ಸಿದ್ಧಾರ್ಥ ಜೈನ್ ಅನ್ನೋ 30 ವರ್ಷದ ಯುವಕ ಮೆಟ್ರೋ ಟ್ರ್ಯಾಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಈ ವೇಳೆ ಫ್ಲಾಟ್ ಫಾರಂ ನಲ್ಲಿದ್ದ ಸೆಕ್ಯೂರಿಟಿ ರಶ್ಮಿ ಇಟಿಎಸ್ ಬಾಕ್ಸ್ ಅನ್ನು ಕೈಯಲ್ಲಿ ಗುದ್ದಿ ಪವರ್ ಬಟನ್ ಆಫ್ ಮಾಡಿದ್ದಾರೆ, ಚೂರು ಏನಾದರೂ ರಶ್ಮಿ ಯಾಮಾರಿದ್ರು ಸಿದ್ಧಾರ್ಥ ಜೈನ್ ಬದುಕುತ್ತಿರಲಿಲ್ಲ ಅನ್ಸುತ್ತೆ. ಎಮರ್ಜೆನ್ಸಿ ಟ್ರಿಪ್ ಸಿಸ್ಟಮ್ ಬಟನ್ ಆಫ್ ಮಾಡಿದ್ದ ನಂತರ ಮೆಟ್ರೋ ಸಿಬ್ಬಂದಿಗಳು ಆತನನ್ನು ಮೆಟ್ರೋ ರೈಲಿನ ಕೆಳಗಿನಿಂದ ಕರೆದುಕೊಂಡು ಬಂದ್ರು. ಇಟಿಎಸ್ ಬಾಕ್ಸ್ ಅನ್ನು ಕೈಯಿಂದ ಗುದ್ದಿದ್ದರಿಂದ ಸೆಕ್ಯೂರಿಟೀ ಗಾರ್ಡ್ ರಶ್ಮಿ ಗೆ ಕೈಗೆ ಗಾಯಗಳಾಗಿದೆ. ಈಗಾಗಲೇ ಮೆಟ್ರೋ ಅಧಿಕಾರಿಗಳು ಜ್ಞಾನಭಾರತಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಪೋಲಿಸರು ಯುವಕನನ್ನ ವಶಕ್ಕೆ ಪಡೆದುಕೊಂಡರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:36 am, Wed, 18 September 24