ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ಶಿವಾನಂದ ತಗಡೂರು ಅವಿರೋಧ ಆಯ್ಕೆ
2018-2022 ಅವಧಿಯಲ್ಲಿ ಕೆಯುಡಬ್ಲ್ಯೂಜೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಶಿವಾನಂದ ಅವರು 2022-2025 ಅವಧಿಗೆ ಮತ್ತೆ ಅವಿರೋಧವಾಗಿ ಆಯ್ಕೆಯಾಗಿರುವುದು ಸಂಘಕ್ಕೆ ಅವರ ಮೇಲಿನ ವಿಶ್ವಾಸವನ್ನು ಸೂಚಿಸುತ್ತದೆ.
ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (KUWJ) ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ಶಿವಾನಂದ ತಗಡೂರು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷ ಸ್ಥಾನಕ್ಕೆ ಶಿವಾನಂದ ತಗಡೂರು ಮಾತ್ರ ಕಣದಲ್ಲಿ ಉಳಿದಿರುವುದರಿಂದ ಅವಿರೋಧ ಆಯ್ಕೆಯಾಗಿರುವ ಕುರಿತು ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಮೂರು ವರ್ಷಗಳ ಇನ್ನೊಂದು ಅವಧಿಗೆ ಶಿವಾನಂದ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
2018-2022 ಅವಧಿಯಲ್ಲಿ ಕೆಯುಡಬ್ಲ್ಯೂಜೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಶಿವಾನಂದ ಅವರು 2022-2025 ಅವಧಿಗೆ ಮತ್ತೆ ಅವಿರೋಧವಾಗಿ ಆಯ್ಕೆಯಾಗಿರುವುದು ಸಂಘಕ್ಕೆ ಅವರ ಮೇಲಿನ ವಿಶ್ವಾಸವನ್ನು ಸೂಚಿಸುತ್ತದೆ.
1990 ರಲ್ಲಿ ಜನಮಿತ್ರ ಪತ್ರಿಕೆಯ ಮೂಲಕ ಪತ್ರಿಕೋದ್ಯಮ ಪ್ರವೇಶಿಸಿದ ಅವರು, ಈ ವಾರ, ಜನವಾಹಿನಿ, ವಿಜಯ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದು ಪ್ರಸ್ತುತವಾಗಿ ವಿಜಯವಾಣಿ ಪತ್ರಿಕೆಯಲ್ಲಿ ಹಿರಿಯ ವಿಶೇಷ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ.
ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಾಮಾನ್ಯ ಸದಸ್ಯರಾಗಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಜಿಲ್ಲಾ ಸಂಘದ ಅಧ್ಯಕ್ಷರಾಗಿ, 2011 ರಿಂದ 2018 ತನಕ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಕೋವಿಡ್ ಸಂದರ್ಭದಲ್ಲಿ ಅವಿರತವಾಗಿ ಹೋರಾಟ ಮಾಡಿ ಮೃತಪಟ್ಟ ಪತ್ರಕರ್ತರಲ್ಲಿ, ತೀವ್ರ ಸಂಕಷ್ಟದಲ್ಲಿದ್ದ ಐವತ್ತಕ್ಕೂ ಹೆಚ್ಚು ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರವನ್ನು ಸರ್ಕಾರದಿಂದ ಕೊಡಿಸಿದ್ದು ಶಿವಾನಂದ ತಗಡೂರು ಅವರ ಸಾಂಘಿಕ ಶಕ್ತಿಗೆ ಹಿಡಿದ ಕನ್ನಡಿ.
ಶಿವಾನಂದ ತಗಡೂರು ಅವರಿಗೆ ನಾಡಿನ ಪತ್ರಕರ್ತ ಬಳಗ, ಸಂಘಟನೆಗಳು ಅಭಿನಂದಿಸಿವೆ.
ಇದನ್ನೂ ಓದಿ: BIFFES: ಮಾರ್ಚ್ 3ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಈ ಬಾರಿಯ ವಿಶೇಷಗಳೇನು? ಇಲ್ಲಿದೆ ಮಾಹಿತಿ