ಜೈಲುಗಳ ಸುರಕ್ಷತೆ ವಿಚಾರದಲ್ಲಿ SOP ಅನುಷ್ಠಾನ ಮಾಡಿ: ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಶೊಭಾ ಕರಂದ್ಲಾಜೆ ಪತ್ರ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರ ಸ್ಮಾರ್ಟ್‌ಫೋನ್ ಬಳಸುತ್ತಿರುವ ವಿಡಿಯೋ ವೈರಲ್ ಆಗಿದೆ. ಕೈದಿಗಳಿಗೆ ಸಿಗುವ ರಾಜಾತಿಥ್ಯದಿಂದಾಗಿ ಜೈಲುಗಳು ಉಗ್ರ ಚಟುವಟಿಕೆಗಳ ಕೇಂದ್ರಗಳಾಗುತ್ತಿವೆ. ಈ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಅಮಿತ್ ಶಾಗೆ ಪತ್ರ ಬರೆದು, ರಾಷ್ಟ್ರೀಯ ಮಾನದಂಡ ಕಾರ್ಯಾಚರಣಾ ಕ್ರಮ (SOP) ಅನುಷ್ಠಾನಕ್ಕೆ ಆಗ್ರಹಿಸಿದ್ದಾರೆ. ಇದು ಜೈಲುಗಳ ಭದ್ರತೆ ಬಲಪಡಿಸಿ, ಭಯೋತ್ಪಾದನಾ ಚಟುವಟಿಕೆಗಳನ್ನು ತಡೆಗಟ್ಟಲು ಸಹಕಾರಿ ಎಂದಿದ್ದಾರೆ.

ಬೆಂಗಳೂರು, ನವೆಂಬರ್ 10: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಅತ್ಯಾಚಾರಿ ಸೇರಿ ಉಗ್ರನ ಕೈಯಲ್ಲೂ ಮೊಬೈಲ್ ಕಂಡುಬಂದಿರೋದು ಜೈಲಿನಲ್ಲಿ ಕೈದಿಗಳಿಗೆ ಸಿಗುತ್ತಿರುವ ರಾಜಾತಿಥ್ಯವನ್ನ ಬಹಿರಂಗಪಡಿಸಿತ್ತು. ಈ ಬೆನ್ನಲ್ಲೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ. ಜೈಲುಗಳ ಸುರಕ್ಷತೆ ವಿಚಾರದಲ್ಲಿ SOP ಅನುಷ್ಠಾನಕ್ಕೆ ಅವರು ವಿನಂತಿಸಿದ್ದಾರೆ.
ಶೋಭಾ ಕರಂದ್ಲಾಜೆ ಬರೆದ ಪತ್ರದಲ್ಲಿ ಏನಿದೆ?
ಇತ್ತೀಚೆಗೆ ಹೊರಬಂದ ವಿಡಿಯೋದ ಮಾಹಿತಿ ಪ್ರಕಾರ ಐಸಿಸ್‌ಗೆ ಸದಸ್ಯರನ್ನು ಸೇರ್ಪಡೆಗೊಳಿಸುತ್ತಿದ್ದ ಆರೋಪದ ಮೇಲೆ ಎನ್‌ಐಎ ಬಂಧಿಸಿದ್ದ ಹಮೀದ್ ಶಕೀಲ್ ಮನ್ನಾ ಕಾರಾಗೃಹದಲ್ಲಿ ಸ್ಮಾರ್ಟ್‌ಫೋನ್ ಬಳಸುತ್ತಿರೋದು ಗೊತ್ತಾಗಿದೆ. ಹೀಗಾಗಿ ಆತ ನ್ಯಾಯಾಂಗ ಬಂಧನದಲ್ಲಿದ್ದರೂ ತನ್ನ ಉಗ್ರ ಚಟುವಟಿಕೆಗಳನ್ನು ಮುಂದುವರಿಸಲು ಸಾಧ್ಯವಾಗಿರುವು ಜಗಜ್ಜಾಹಿರವಾಗಿದೆ. ಇದು ಪ್ರಸ್ತುತ ಕಾರಾಗೃಹ ನಿರ್ವಹಣಾ ವ್ಯವಸ್ಥೆಯಲ್ಲಿನ ಗಂಭೀರ ದೌರ್ಬಲ್ಯವನ್ನು ತೋರಿಸುತ್ತದೆ. ಈ ಘಟನೆಗೆ ಮೊದಲು ಎನ್‌ಐಎ ನಡೆಸಿದ ತನಿಖೆಯು ಮತ್ತೊಬ್ಬ ಉಗ್ರ ನಜೀರ್ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿಯೇ ಉಗ್ರ ಜಾಲದ ತಾತ್ವಿಕ ಮತ್ತು ಕಾರ್ಯಾತ್ಮಕ ಕಮಾಂಡ್ ಸೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂಬುದನ್ನು ಬಹಿರಂಗಪಡಿಸಿತ್ತು. ನಜೀರ್ ಕಾರಾಗೃಹದೊಳಗೆ ಮೊಬೈಲ್ ಫೋನ್‌ಗಳನ್ನು ಕಳ್ಳಸಾಗಣೆ ಮಾಡಿಸಿಕೊಂಡು, ಹೊರಗಿನ ಉಗ್ರರೊಂದಿಗೆ ಸಂಪರ್ಕದಲ್ಲಿರಲು ಅವುಗಳನ್ನು ಬಳಸುತ್ತಿದ್ದ ಎಂಬುದು ಬಹಿರಂಗಗೊಂಡಿತ್ತು.
ಇದನ್ನೂ ಓದಿ: ಜೈಲಲ್ಲಿ ಎಣ್ಣೆ ಪಾರ್ಟಿ ಕೇಸ್ಗೆ ಸ್ಫೋಟಕ ಟ್ವಿಸ್ಟ್: ಬಾಟಲಿಯಲ್ಲಿ ಇದ್ದಿದ್ದು ಮದ್ಯವಲ್ಲ, ಮೂತ್ರ?
ಇವು ಕಾರಾಗೃಹ ವ್ಯವಸ್ಥೆಯೊಳಗಿನ ಭ್ರಷ್ಟಾಚಾರ ಮತ್ತು ಉಗ್ರಗಾಮಿ ನುಸುಳಿಕೆಯ ಸಂಘಟಿತ ಜಾಲವನ್ನು ಸೂಚಿಸುತ್ತವೆ. ರಾಷ್ಟ್ರದ ಭದ್ರತೆಯನ್ನು ಕಾಪಾಡುವ ಹೊಣೆ ಹೊತ್ತಿರುವ ಅಧಿಕಾರಿಗಳೇ ಉಗ್ರ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿರುವುದು ವಿಷಾದನೀಯ. ಪುನರ್ವಸತಿ ಮತ್ತು ಸುಧಾರಣೆಯ ಕೇಂದ್ರಗಳಾಗಬೇಕಾದ ಕಾರಾಗೃಹಗಳು ಉಗ್ರಗಾಮಿ ಚಿಂತನೆಗಳ ವಿಸ್ತಾರ ಕೇಂದ್ರಗಳಾಗಿ ಮಾರ್ಪಟ್ಟಿರುವುದು ದೇಶದ ಒಳಭದ್ರತೆಗೆ ಗಂಭೀರ ಬೆದರಿಕೆ. ನಜೀರ್‌ನ ಪ್ರಕರಣದಿಂದ ಹಿಡಿದು ಹಮೀದ್ ಶಕೀಲ್ ಮನ್ನಾನ ಸ್ಮಾರ್ಟ್‌ಫೋನ್ ಪ್ರಕರಣದವರೆಗೆ ನಡೆದ ಘಟನೆಗಳು ಇದು ಸಂಘಟಿತ ಮತ್ತು ನಿರಂತರ ಪ್ರಯತ್ನ ಎಂಬುದನ್ನು ಸಾಬೀತುಪಡಿಸುತ್ತವೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಗೃಹ ವ್ಯವಹಾರಗಳ ಸಚಿವಾಲಯವು ದೇಶದಾದ್ಯಂತದ ಎಲ್ಲ ಕಾರಾಗೃಹಗಳಿಗೆ ಅನ್ವಯವಾಗುವ ರಾಷ್ಟ್ರೀಯ ಮಾನದಂಡ ಕಾರ್ಯಾಚರಣಾ ಕ್ರಮ (SOP) ಹೊರಡಿಸುವುದು ಅತ್ಯಂತ ಅಗತ್ಯವಾಗಿದೆ. ಈ ಕ್ರಮ ಉಗ್ರ ಕೈದಿಗಳು ಮತ್ತು ಉಗ್ರರೆಂದು ಸಂಶಯ ಇರುವವರನ್ನು ಸಾಮಾನ್ಯ ಕೈದಿಗಳಿಂದ ಪ್ರತ್ಯೇಕವಾಗಿ ಇರಿಸುವ ವ್ಯವಸ್ಥೆ, ಸಂವಹನ ಸಾಧನಗಳ ಕಳ್ಳಸಾಗಣೆಯನ್ನು ಪತ್ತೆಹಚ್ಚಲು ಮತ್ತು ತಡೆಗಟ್ಟಲು ತಾಂತ್ರಿಕ ನಿಗಾ ಮತ್ತು ಇ-ಆಡಿಟ್ ಕ್ರಮಗಳು, ಸಿಬ್ಬಂದಿಯ ನಿಯಮಿತ ಬದಲಾವಣೆ ಮತ್ತು ಪರಿಶೀಲನೆ ಹಾಗೂ ತಜ್ಞರ ಮೇಲ್ವಿಚಾರಣೆ ಒಳಗೊಂಡಿರಬೇಕು. ಇಂತಹ ಕ್ರಮಗಳಿಂದ ಕಾರಾಗೃಹಗಳ ಭದ್ರತೆ ಬಲವಾಗಲಿದೆ. ಕರ್ನಾಟಕದಲ್ಲಿ ನಡೆದ ಇತ್ತೀಚಿನ ಘಟನೆಗಳು ತುರ್ತು ಸುಧಾರಣೆ ಅಗತ್ಯವನ್ನು ಸೂಚಿಸುತ್ತಿದ್ದು, ಈಗಲೇ ಕ್ರಮ ಕೈಗೊಳ್ಳದಿದ್ದರೆ ಕಾರಾಗೃಹಗಳು ಉಗ್ರಗಾಮಿ ಚಟುವಟಿಕೆಗಳಿಗೆ ಸುರಕ್ಷಿತ ಆಶ್ರಯಗಳಾಗಿ ಉಳಿಯುವ ಅಪಾಯ ಇದೆ ಎಂದು ಶೋಭಾ ಕರಂದ್ಲಾಜೆ ಪತ್ರದಲ್ಲಿ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:08 pm, Mon, 10 November 25




