ವಿಕ್ಟೋರಿಯಾ, ವಾಣಿ ವಿಲಾಸ್ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಕೊರತೆ: ನೇಮಕಕ್ಕೆ ಆಸಕ್ತಿ ತೋರದ ಸರ್ಕಾರ, ರೋಗಿಗಳಿಗೆ ಸಂಕಷ್ಟ

| Updated By: Ganapathi Sharma

Updated on: Jan 24, 2025 | 7:34 AM

ಅವು ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳು.‌ ಅಲ್ಲಿಗೆ ನಿತ್ಯ ಸಾವಿರಾರು ಜನರು ಚಿಕಿತ್ಸೆ ಬರುತ್ತಾರೆ.‌ ಉತ್ತಮ ಚಿಕಿತ್ಸೆ ನೀಡುವ ಈ ಆಸ್ಪತ್ರೆಗಳಲ್ಲಿ ಈಗ ವೈದ್ಯರು ಸಿಗುವುದಿಲ್ಲ! ಆಡಳಿತ ಮಂಡಳಿ ಹಾಗೂ ಸಿಬ್ಬಂದಿ‌ ಇಲ್ಲದೆ ಸಮಸ್ಯೆ ಎದುರಾಗಿದೆ. ವಿಕ್ಟೋರಿಯಾ, ವಾಣಿ ವಿಲಾಸ್ ಆಸ್ಪತ್ರೆಗಳ ಅವಸ್ಥೆಯ ಬಗ್ಗೆ ಇಲ್ಲಿದೆ ಮಾಹಿತಿ.

ವಿಕ್ಟೋರಿಯಾ, ವಾಣಿ ವಿಲಾಸ್ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಕೊರತೆ: ನೇಮಕಕ್ಕೆ ಆಸಕ್ತಿ ತೋರದ ಸರ್ಕಾರ, ರೋಗಿಗಳಿಗೆ ಸಂಕಷ್ಟ
ವಿಕ್ಟೋರಿಯಾ, ವಾಣಿ ವಿಲಾಸ್ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಕೊರತೆ
Follow us on

ಬೆಂಗಳೂರು, ಜನವರಿ 24: ವಿಕ್ಟೋರಿಯಾ, ವಾಣಿ ವಿಲಾಸ್ ಆಸ್ಪತ್ರೆಗಳು ಸರ್ಕಾರಿ ಆಸ್ಪತ್ರೆಗಳಲ್ಲೇ ದೊಡ್ಡವು. ‌ಇಲ್ಲಿ ಸಾಮಾನ್ಯವಾಗಿ ಎಲ್ಲಾ ರೀತಿಯ ಚಿಕಿತ್ಸೆಗಳು ಸಿಗುತ್ತವೆ. ಇದರ ಜೊತೆಗೆ ಗ್ಯಾಸ್ಟ್ರೋಎಂಟ್ರಾಲಜಿ, ಸ್ಕಿನ್‌ ಡಿಪಾರ್ಟ್ಮೆಂಟ್, ಟ್ರಾಮ ಕೇರ್ ಸೆಂಟರ್, ಸೇರಿದಂತೆ ವಿವಿಧ ಪ್ರಮುಖ ಚಿಕಿತ್ಸೆಗಳನ್ನು ಕಡಿಮೆ‌ ವೆಚ್ಚದಲ್ಲಿ ನೀಡಲಾಗುತ್ತದೆ. ಅದರಲ್ಲೂ ವಾಣಿ ವಿಲಾಸ್‌ ಆಸ್ಪತ್ರೆ ಹೆರಿಗೆ, ತಾಯಿ ಮಗುವಿನ ಆರೈಕೆಯಲ್ಲಿ ಮುಂದು. ಇದೇ ಕಾರಣದಿಂದ ಕೇವಲ‌ ಕರ್ನಾಟಕವಲ್ಲದೆ ಬೇರೆ ರಾಜ್ಯಗಳಿಂದಲೂ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ.‌ ಆದರೆ ಇಲ್ಲಿ ರೋಗಿಗಳ ಸಂಖ್ಯೆಗೆ ತಕ್ಕಂತೆ‌ ವೈದ್ಯರು, ಸಿಬ್ಬಂದಿ ಮಾತ್ರ ಇಲ್ಲ.

ರಾಜಧಾನಿಯ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯಕೀಯ ಸಿಬ್ಬಂದಿ ಕೊರತೆ ಎದುರಾಗಿದೆ. ಹೆಸರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು. ಆದರೆ ವೈದ್ಯಕೀಯ ಸಿಬ್ಬಂದಿಗಳೇ ಸಾಕಷ್ಟು ಇಲ್ಲ. ಸಾಕಷ್ಟು ಪ್ರಮಾಣದಲ್ಲಿ ವೈದ್ಯರು, ಸಿಬ್ಬಂದಿ ಇಲ್ಲದೆ ಬಡ ರೋಗಿಗಳ ಪರದಾಟ ಶುರುವಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಅಸ್ಪತ್ರೆ, ವಾಣಿ ವಿಲಾಸ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ವೈದ್ಯಕೀಯ ಸಿಬ್ಬಂದಿಯೇ ಇಲ್ಲ. ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಾನದಂಡದ ಪ್ರಕಾರ ಇರಬೇಕಾದಷ್ಟು ವೈದ್ಯರೇ ಈ ಆಸ್ಪತ್ರೆಗಳಲ್ಲಿ ಇಲ್ಲ. ರೋಗಿಗಳ ಸಂಖ್ಯೆಗೆ ಅನುಗುಣವಾಗಿ ವೈದ್ಯರ ಹುದ್ದೆಗಳನ್ನು ಸೃಷ್ಟಿಸಲಾಗಿಲ್ಲ. ಈಗಾಗಲೇ ಮಂಜೂರಾಗಿರುವ ಹುದ್ದೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗದ ಪರಿಣಾಮ ರೋಗಿಗಳ ದಟ್ಟಣೆಯ ನಿರ್ವಹಣೆಗೆ ಇರುವ ವೈದ್ಯರು ಪರದಾಡುವಂತಾಗಿದೆ.

ಎನ್‌ಎಂಸಿ ಗೈಡ್ ಲೈನ್ಸ್ ಪ್ರಕಾಣ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದಲ್ಲಿ ಮೂರು ಸಹಾಯಕ ಪ್ರಾಧ್ಯಾಪಕರು ಹಾಗೂ ಎರಡು ಹಿರಿಯ ಸ್ಥಾನಿಕ ವೈದ್ಯಾಧಿಕಾರಿ ಹುದ್ದೆಗಳು ಸೃಷ್ಟಿಯಾಗಬೇಕಿದೆ ಎಂದು ವಿಕ್ಟೋರಿಯಾ ಆಸ್ಪತ್ರೆ ಡೀನ್ ಹಾಗೂ ನಿರ್ದೇಶಕ ಡಾ. ರಮೇಶ್ ಕೃಷ್ಣ ತಿಳಿಸಿದ್ದಾರೆ.

ರೋಗಿಗಳ ಸಂಖ್ಯೆ ಹೆಚ್ಚಳ: ವೈದ್ಯರ, ಸಿಬ್ಬಂದಿ ಸಂಖ್ಯೆ ಇಳಿಕೆ

ಇದೇ ರೀತಿ ಪ್ಲಾಸ್ಟಿಕ್ ಸರ್ಜರಿ, ಹೃದ್ರೋಗ ವಿಜ್ಞಾನ, ನರ ವಿಜ್ಞಾನ ಸೇರಿ ವಿವಿಧ ವಿಭಾಗಗಳಲ್ಲಿ ಹುದ್ದೆಗಳ ಕೊರತೆ ಹಾಗೂ ಮಂಜೂರಾಗಿರುವ ಹುದ್ದೆಗಳಲ್ಲಿ ಕೆಲವು ಖಾಲಿ ಇರುವುದರಿಂದ ರೋಗಿಗಳ ನಿರ್ವಹಣೆಗೆ ಕರ್ತವ್ಯನಿರತ ವೈದ್ಯರು ಒದ್ದಾಡುವಂತಾಗಿದೆ. ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಕೊಠಡಿ ಸೇರಿ ವಿವಿಧ ಸೌಲಭ್ಯವನ್ನು ಆಸ್ಪತ್ರೆ ಹೊಂದಿದೆ. ಯಕೃತ್‌ ಕಸಿ ಮತ್ತು ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ, ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ, ಸೀಳು ತುಟಿ ಮತ್ತು ಅಂಗುಳಿನ ಚಿಕಿತ್ಸೆ, ಕೈ ಶಸ್ತ್ರಚಿಕಿತ್ಸೆ, ಆ್ಯಂಜಿಯೋಪ್ಲ್ಯಾಸ್ಟಿ, ವಾಲ್ವುಲೋಪ್ಲ್ಯಾಸ್ಟಿ, ಪೇಸ್‌ಮೇಕರ್ ಸೇರಿ ವಿವಿಧ ಸೌಲಭ್ಯಗಳಿವೆ. ಆದರೆ, ಚಿಕಿತ್ಸೆ ನೀಡಲು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಇಲ್ಲವಾಗಿದ್ದಾರೆ. ರೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಆದರೆ ವೈದ್ಯರು ಹಾಗೂ ಹಾಸಿಗೆಗಳ ಸಂಖ್ಯೆ ರೋಗಿಗಳ ಅನುಪಾತಕ್ಕೆ ಅನುಗುಣವಾಗಿ ಹೆಚ್ಚಳವಾಗಿಲ್ಲ.

ಇದನ್ನೂ ಓದಿ: ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಒಟ್ಟಿನಲ್ಲಿ ವೈದ್ಯರ ನೇಮಕಾತಿಗಾಗಿ ಆಸ್ಪತ್ರೆಗಳು ಸರ್ಕಾರಕ್ಕೆ ಪತ್ರ ಬರೆದು ಮಾನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಬಡ ರೋಗಿಗಳು ವೈದ್ಯರು ಇಲ್ಲದೆ ಉತ್ತಮ ಚಿಕಿತ್ಸೆ ಸಿಗದೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ