“ನಾನು ವಿಷ್ಣುವಿನ ಮಗ, ಸತ್ಯ ಹುಡುಕಲು ಹೋಗುತ್ತಿದ್ದೇನೆ” ಪತ್ರ ಬರೆದಿಟ್ಟು ಬಾಲಕ ನಾಪತ್ತೆ
ಬೆಂಗಳೂರಿನ ವಿದ್ಯಾರಣ್ಯಪುರದ 17 ವರ್ಷದ ಮೋಹಿತ್ ಋಷಿ ಎಂಬ ಬಾಲಕ ಜನವರಿ 16 ರಂದು ಮನೆ ಬಿಟ್ಟು ಹೋಗಿದ್ದಾನೆ. "ಸತ್ಯ ಹುಡುಕಲು ಹೋಗುತ್ತಿದ್ದೇನೆ" ಎಂದು ಪತ್ರ ಬರೆದಿಟ್ಟು ಹೋಗಿದ್ದಾನೆ. ತನ್ನನ್ನು ಹುಡುಕಬೇಡಿ ಎಂದು ಕೋರಿದ್ದಾನೆ. ಪೋಷಕರು ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮೋಹಿತ್‌ನ ಚಿತ್ರ ಹಂಚಿಕೊಳ್ಳಲಾಗಿದೆ.
ಜನವರಿ 24: ಸತ್ಯ ಹುಡುಕಲು ಹೋಗುತ್ತಿದ್ದೇನೆ, ನನ್ನನ್ನು ಹುಡುಕಬೇಡಿ ಎಂದು ಪತ್ರ ಬರೆದಿಟ್ಟು ಬೆಂಗಳೂರಿನ (Bengaluru) ವಿದ್ಯಾರಣ್ಯಪುರದ ಬಾಲಕನೋರ್ವ ರಾತ್ರೋರಾತ್ರಿ ಮನೆಬಿಟ್ಟು ಹೋಗಿದ್ದಾನೆ. ಮೋಹಿತ್ ಋಷಿ (17) ನಾಪತ್ತೆಯಾಗಿರುವ ಬಾಲಕ. ಮೋಹಿತ್ ಋಷಿ ಪೋಷಕರು ವಿದ್ಯಾರಣ್ಯಪುರ ನಿವಾಸಿಯಾಗಿದ್ದಾರೆ. ಮೋಹಿತ್ ಋಷಿ ಬಿಇಎಲ್ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದನು.
ಈತ, ಜ.16ರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಇದ್ದಕ್ಕಿದ್ದ ಹಾಗೆ ಮನೆ ಬಿಟ್ಟು ಹೋಗಿದ್ದಾನೆ. ಮನೆ ಬಿಟ್ಟು ಹೋಗುವ ಮುನ್ನ “ಅಸತ್ಯದ ಪ್ರಪಂಚದಲ್ಲಿ ಸತ್ಯ ಹುಡುಕಲು ಸತ್ಯದ ಪ್ರಪಂಚದ ಕಡೆ ಹೋಗುತ್ತಿದ್ದೇನೆ. ನಾನು ವಿಷ್ಣುವಿನ ಮಗ ನನ್ನ ಹುಡುಕಲು ಪ್ರಯತ್ನ ಪಡಬೇಡಿ. ಜಗತ್ತಿನ ಜನರ ಕಲ್ಯಾಣಕ್ಕಾಗಿ ದೇವರು ನನ್ನನ್ನ ಆರಿಸಿಕೊಂಡಿದ್ದಾನೆ. ಈ ರಾಜಜೀವನವನ್ನ ತೊರೆದು ಸತ್ಯದ ಪ್ರಪಂಚದ ಕಡೆ ಹೋಗುತ್ತಿದ್ದಾನೆ” ಎಂದು ಪತ್ರ ಬರೆದಿಟ್ಟು ಮೊಬೈಲ್ ಮನೆಯಲ್ಲೇ ಬಿಟ್ಟು ಹೋಗಿದ್ದಾನೆ.
ಪುತ್ರ ನಾಪತ್ತೆಯಾಗಿರುವ ಬಗ್ಗೆ ಮೋಹಿತ್ ಋಷಿಯ ತಂದೆ ಅರ್ಜುನ್ ಕುಮಾರ್ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಮೋಹಿತ್ಗಾಗಿ ಹುಡುಕಾಟ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮೋಹಿತ್ ಭಾವಚಿತ್ರವನ್ನು ಪೋಷಕರು ಹಂಚಿಕೊಂಡಿದ್ದು, ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟೆ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:01 am, Fri, 24 January 25