ಬೆಂಗಳೂರು, ಜುಲೈ.06: ರಾಜ್ಯ ಕಾಂಗ್ರೆಸ್ (Congress) ವಲಯದಲ್ಲಿ ಮತ್ತೊಂದು ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಿದ್ದವಾಗ್ತಿದೆ ಅನ್ನೋ ಸುದ್ದಿ ಚರ್ಚೆಯಾಗ್ತಿದೆ. ಕಳೆದ ಮೂರು ದಿನಗಳ ಹಿಂದೆ ಈ ರೀತಿಯ ಸಮಾವೇಶಕ್ಕೆ ವೇದಿಕೆ ಸಜ್ಜಾಗುತ್ತಿದೆ ಅಂತ ಟಿವಿ 9ಸಹ ವರದಿ ಪ್ರಸಾರ ಮಾಡಿತ್ತು. ಒಂದು ಕಡೆ ಹೆಚ್ಚುವರಿ ಡಿಸಿಎಂಗಳನ್ನ ಮಾಡಬೇಕು ಅನ್ನೋ ಸುದ್ದಿ ಬಿಸಿ ಬಿಸಿ ಚರ್ಚೆಯಾಗುತ್ತಿರುವಾಗಲೇ ಸಿಎಂ (Siddaramaiah) ಬದಲಾವಣೆ ಕೂಗ ಜೋರಾಗ್ತಿದೆ. ನಾಡಪ್ರಭ ಕೆಂಪೇಗೌಡ ದಿನಾಚರಣೆಯಲ್ಲಿ ಬಹಿರಂಗವಾಗಿಯೇ ಚಂದ್ರಶೇಖರ ಸ್ವಾಮೀಜಿ ಡಿಸಿಎಂ ಡಿಕೆಶಿವಕುಮಾರ್ (DK Shivakumar) ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕೆಂಬ ಮನವಿ ಕಾಂಗ್ರೆಸ್ ವಲಯದಲ್ಲಿ ಸಖತ್ ಸದ್ದು ಮಾಡ್ತಿದೆ.
ಸಿಎಂ ಬದಲಾವಣೆ ಕೂಗು ಮುನ್ನೆಲೆಗೆ ಬಂದ ಬೆನ್ನಲ್ಲೆ, ಸಿಎಂ ಸಿದ್ದರಾಮಯ್ಯ ಆಪ್ತ ಬಣ ಸಾಕಷ್ಟು ಸಿದ್ದತೆಗಳನ್ನ ಮಾಡಿಕೊಂಡಿದೆ. ಮತ್ತೊಂದು ಸಿದ್ದರಾಮೋತ್ಸವ ಮೂಲಕ ಅಹಿಂದ ಸಮಾವೇಶ ನಡೆಸಲು ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲಾಗ್ತಿದೆ ಎಂದು ಹೇಳಲಾಗ್ತಿದೆ. ಕಳೆದ ಮೂರು ವರ್ಷಗಳ ಹಿಂದೆ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದಾಗ ಸಿದ್ದರಾಮೋತ್ಸವ ನಡೆಸಿ ಶಕ್ತಿ ಪ್ರದರ್ಶನ ನಡೆಸಿ ಯಶಸ್ವಿಯಾಗಿದೆ. ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದ ಮೂಲಕ, ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಕೂಗು ಹೈಕಮಾಂಡ್ ನಾಯಕರಿಗೆ ಮುಟ್ಟುವಂತೆ ಮಾಡುವಲ್ಲಿ ಯಶಸ್ವಿಯಾದ್ರು.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಟಿವಿ9ಗೆ ಪ್ರತಿಕ್ರಿಯೆ ನೀಡಿದ ಅಹಿಂದ ಜಿಲ್ಲಾಧ್ಯಕ್ಷ ಮತ್ತಣ್ಣ ಶಿವಳ್ಳಿ, ವಿವಿಧ ರಂಗದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡ್ತಾ ಇದ್ದೀವಿ. ಸಿದ್ದರಾಮಯ್ಯ ನವರು ಕಾರ್ಯಕ್ರಮಕ್ಕೆ ಬರ್ತಾರೆ. ಅವರು ಡೇಟ್ ಕೊಟ್ಟ ದಿನವೇ ಕಾರ್ಯಕ್ರಮ ಮಾಡ್ತೀವಿ. ದಕ್ಷಿಣ ಭಾರತದ್ಯಾಂತ ಸಿದ್ದರಾಮಯ್ಯ ಅಭಿಮಾನಿಗಳಿದ್ದಾರೆ. ನೋಡೋ ಜನ ಶಕ್ತಿ ಪ್ರದರ್ಶನ ಅಂದು ಕೊಳ್ಳಬಹುದು. ಆದ್ರೆ ನಾವು ಅವರ ಅಭಿಮಾನಕ್ಕೆ ಕಾರ್ಯಕ್ರಮ ಮಾಡ್ತೀದಿವಿ. ಅಹಿಂದ ಹುಟ್ಟು ಹಾಕಿದ್ದು ಸಿದ್ದರಾಮಯ್ಯ. ಅಹಿಂದ ವರ್ಗವನ್ನು ಜಾಗೃತಿ ಮಾಡಿದ್ದು ಸಿದ್ದರಾಮಯ್ಯ. ಸಿದ್ದರಾಮಯ್ಯ ಅಹಿಂದ ರತ್ನ ಪ್ರಶಸ್ತಿ ನೋಡೋದೆ ಖುಷಿ. ಸಿದ್ದರಾಮಯ್ಯ ಎಲೆಕ್ಟೆಡ್ ಸಿಎಂ, ಸೆಲೆಕ್ಟಡ್ ಸಿಎಂ ಅಲ್ಲ. ಕಾಂಗ್ರೆಸ್ ಹುಚ್ಚು ಸಾಹಸಕ್ಕೆ ಕೈ ಹಾಕಲ್ಲ. ಅವರ ಬದಲಾವಣೆ ಮಾಡಿದ್ರೆ ಅನುಭವಿಸಲಾರದ ನಷ್ಟ ಅನುಭವಿಸ್ತಾರೆ. ಅಹಿಂದ ಅಂದ್ರೆ ಸಿದ್ದರಾಮಯ್ಯ, ಸಿದ್ದರಾಮಯ್ಯ ಅಂದ್ರೆ ಅಹಿಂದ. ಅಕಸ್ಮಾತ್ ಬದಲಾವಣೆ ಮಾಡಿದ್ರೆ ದಕ್ಷಿಣ ಭಾರತ ಬೆಂಕಿ ಹತ್ತಿ ಉರಿಯತ್ತೆ ಅಂತ ಮುತ್ತಣ್ಣ ತಿಳಿಸಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣ: ಮುಖ್ಯಮಂತ್ರಿ ಪತ್ನಿಯ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿ ಜಮೀನು ತನ್ನದು ಎಂದಿದ್ದಾರೆ: ಆರ್ಟಿಐ ಕಾರ್ಯಕರ್ತ
ಈ ಬಾರಿ ಸಿಎಂ ಸಿದ್ದರಾಮಯ್ಯ ಅವರ 76ನೇ ಹುಟ್ಟು ಹಬ್ಬದ ಹಿನ್ನೆಯಲ್ಲಿ, ಆಗಸ್ಟ್ ನಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಮಟ್ಟದ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಸಿದ್ದತೆಯಾಗ್ತಿದೆ. ಹುಬ್ಬಳ್ಳಿಯನ್ನೇ ಆಯ್ಕೆ ಮಾಡಿಕೊಳ್ಳೊದಕ್ಕೆ ಮುಖ್ಯ ಕಾರಣವು ಇದೆ. ಅಹಿಂದ ಸಂಘಟನೆ ಮಾಡುವಾಗಲೇ ಪಕ್ಷದಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ಜೆಡಿಎಸ್ ವರಿಷ್ಠ ದೇವೇಗೌಡರೊಂದಿಗೆ ಮನಸ್ತಾಪದಿಂದ ಪಕ್ಷದಿಂದ ಹೊರಬಂದು ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ಮಾಡಿ ಯಶಸ್ವಿಯಾಗಿರೋ ಕಾರಣ ಮತ್ತೆ ಹುಬ್ಬಳಿಯಲ್ಲೆ ಸಮಾವೇಶಕ್ಕೆ ನಡೆಸೋದಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗ್ತಿದೆ.
ಇನ್ನೂ ಸಿದ್ದರಾಮಯ್ಯ ಹುಟ್ಟು ಹಬ್ಬದ ಆಚರಣೆ ಹಿನ್ನೆಲೆ ಸಿದ್ದರಾಮೋತ್ಸವಕ್ಕೆ ಏನೆಲ್ಲಾ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಬೇಕು ಯಾರನ್ನೆಲ್ಲಾ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಅನ್ನೋದ್ರ ಬಗ್ಗೆ ಒಂದು ಸೂತ್ತಿನ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಮೂರು ನಾಲ್ಕು ದಿನಗಳಲ್ಲಿ ಸಲಹಾ ಸಮಿತಿ ಸಭೆ ಸೇರಿ ಎಲ್ಲಾ ರೀತಿಯ ಕಾರ್ಯಕ್ರಮಗಳ ಬಗ್ಗೆ ಅಂತಿಮ ರೂಪುರೇಷೆಗಳನ್ನು ಕೊಡಲು ನಿರ್ಧಾರವಾಗಿದೆ. ಈ ಸಂಬಂಧ ಇದೇ ಭಾನುವಾರ ಅಹಿತರ ಸಂಘಟನೆಯಿಂದ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಲಿದ್ದಾರೆ.
ಒಟ್ನಲ್ಲಿ ಮತ್ತೆ ಸಿದ್ದರಾಮಯ್ಯ ಅವರ ಹುಟ್ಟು ಹಬ್ಬಕ್ಕೆ ಅಹಿಂದ ಕಾರ್ಯಕ್ರಮ ನಡೆಸಿ ಪರೋಕ್ಷವಾಗಿ ಶಕ್ತಿ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಬಣ ಮುಂದಾಗಿದೆಯಾ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಶುರುವಾಗಿದೆ. ಈಗಾಗಲೇ ಅಹಿಂದ ಸಮಾವೇಶ ನಡೆಸಿ ಹಿಂದುಳಿದ ನಾಯಕ ಎಂಬ ಹೆಸರನ್ನ ಪಡೆದು ಯಶಸ್ವಿಯಾಗಿದ್ದಾರೆ ಸಿದ್ದರಾಮಯ್ಯ. ಈ ಶಕ್ತಿ ಪ್ರದರ್ಶನದ ಮೂಲಕ ಬದಲಾವಣೆ ಕೂಗಿಗೆ ಫುಲ್ ಸ್ಟಾಪ್ ಹಾಕ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ