ಸ್ಟಿಂಗ್ ಆಪರೇಷನ್ ಕೇಸ್​​: ಸಿಸಿಬಿ ತನಿಖೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್​ಚಿಟ್

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ವೀಡಿಯೋ ಕಟ್ಟುಕಥೆ ಎಂದು ಸಿಸಿಬಿ ಸೈಬರ್ ಪೊಲೀಸರು ದೃಢಪಡಿಸಿದ್ದು, ತನಿಖೆಯಲ್ಲಿ ಸಿದ್ದರಾಮಯ್ಯ ಅವರಿಗೆ ಅಧಿಕೃತವಾಗಿ ಕ್ಲೀನ್ ಚಿಟ್ ನೀಡಲಾಗಿದೆ. ರಾಜ್ಯದಲ್ಲಿ ಜವಾಬ್ದಾರಿಯುತ ಸ್ಥಾನಗಳನ್ನು ಹೊಂದಿರುವ ವ್ಯಕ್ತಿಗಳ ತೇಜೋವಧೆ ಮಾಡುವ, ಅವರ ಘನತೆ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆ ತರುವ ಉದ್ದೇಶದಿಂದ ಈ ವಿಡಿಯೋ ಪ್ರಸಾರ ಮಾಡಿರುವ ಸಾಧ್ಯತೆ ಬಗ್ಗೆ ಸುಳಿವು ಸಿಕ್ಕಿರೋದಾಗಿಯೂ ತಿಳಿಸಲಾಗಿದೆ.

ಸ್ಟಿಂಗ್ ಆಪರೇಷನ್ ಕೇಸ್​​: ಸಿಸಿಬಿ ತನಿಖೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್​ಚಿಟ್
ಮಾಜಿ ಸಿಎಂ ಸಿದ್ದರಾಮಯ್ಯ
Edited By:

Updated on: Oct 29, 2026 | 4:29 PM

ಬೆಂಗಳೂರು, ಅಕ್ಟೋಬರ್​ 29: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಸ್ಟಿಂಗ್​​ ಪ್ರಕರಣ ಸಂಬಂಧ ಸಿಸಿಬಿ ಸೈಬರ್​​ ಪೊಲೀಸರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಸ್ಟಿಂಗ್ ಆಪರೇಷನ್​​ನಲ್ಲಿ ಬರುವ ಎಲ್ಲ ವಿಚಾರಗಳು ಕಟ್ಟುಕಥೆ ಎಂದು ಸಿಸಿಬಿ ತಿಳಿಸಿದ್ದು, ತನಿಖೆಯಲ್ಲಿ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ನೀಡಲಾಗಿದೆ. ಈ ಬಗ್ಗೆ ಸಿಸಿಬಿ ಅಧಿಕೃತ ಪ್ರಕಟಣೆಯ ಮೂಲಕ ತಿಳಿಸಿದೆ.

ಸಿಸಿಬಿ ಪ್ರಕಟಣೆಯಲ್ಲಿ ಏನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಿಂಗ್ ಎನ್ನಲಾದ ವಿಡಿಯೋದಲ್ಲಿ ಬಿಂಬಿಸಿರುವಂತೆ ಲೈಂಗಿಕ ದೌರ್ಜನ್ಯದ ಆರೋಪಗಳು ಕಟ್ಟುಕಥೆಯ ಭಾಗವಾಗಿದ್ದು, ಉದ್ದೇಶಪೂರ್ವಕವಾಗಿ ಸೃಷ್ಟಿಸಲಾದ ನಿರೂಪಣೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ವಿಡಿಯೋದಲ್ಲಿ ಚಿತ್ರಿಸಿರುವ ರೀತಿಯಲ್ಲಿ ಯಾವುದೇ ಘಟನೆ ನಡೆದಿರುವ ಬಗ್ಗೆ ಈವರೆಗಿನ ತನಿಖೆಯಲ್ಲಿ ದಾಖಲಿಸಲಾದ ಹೇಳಿಕೆಗಳು ಹಾಗೂ ಸಂಗ್ರಹಿಸಲಾದ ಸಾಕ್ಷಾಧಾರಗಳು ದೃಢಪಡಿಸುವುದಿಲ್ಲ.

ಇದನ್ನೂ ಓದಿ: ಮತ್ತೆ ಆ್ಯಕ್ಟೀವ್​​ ಆದ ಸಿದ್ದರಾಮಯ್ಯ: ಕಾವೇರಿ ನಿವಾಸದಲ್ಲಿ ಸಚಿವರು, ಶಾಸಕರ ಜತೆ ಬ್ರೇಕ್​​ಫಾಸ್ಟ್​​​​​ ಮೀಟಿಂಗ್​

ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಎಲ್ಲಾ ವ್ಯಕ್ತಿಗಳನ್ನು ಗುರುತಿಸಲಾಗಿದ್ದು, ಅವರ ವಿಚಾರಣೆಯನ್ನು ಸಮಗ್ರವಾಗಿ ನಡೆಸಲಾಗಿದ್ದು, ಕೆಲವರನ್ನು ಒಂದಕ್ಕಿಂತ ಹೆಚ್ಚು ಬಾರಿ ವಿಚಾರಣೆಗೊಳಪಡಿಸಲಾಗಿದೆ. ಅವರ ಹೇಳಿಕೆಗಳು ಹಾಗೂ ಈವರೆಗೆ ಸಂಗ್ರಹಿಸಲಾದ ಸಾಕ್ಷಾಧಾರಗಳ ಆಧಾರದ ಮೇರೆಗೆ, ವಿಡಿಯೋದಲ್ಲಿ ಉಲ್ಲೇಖಿಸಲಾದ ಅಥವಾ ಸೂಚ್ಯವಾಗಿ ಆರೋಪಿಸಲಾದ ವ್ಯಕ್ತಿಗಳ ವಿರುದ್ಧದ ಆರೋಪಗಳು ಸುಳ್ಳು ಹಾಗೂ ಕಟ್ಟುಕಥೆಯಿಂದ ಕೂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಎಲ್ಲ ಅಂಶಗಳ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ವಿಡಿಯೋ ಚಿತ್ರೀಕರಿಸಿದ್ದ ಮೊಬೈಲ್​​ FSLಗೆ

ವಿಡಿಯೋವನ್ನು ಚಿತ್ರೀಕರಿಸಲು ಬಳಸಲಾಗಿದೆ ಎನ್ನಲಾದ ಮೂಲ ಮೊಬೈಲ್ ಫೋನ್ ಅನ್ನು ಪತ್ತೆಹಚ್ಚಿ, ಜಪ್ತಿ ಮಾಡಲಾಗಿದೆ. ವಿಡಿಯೋದ ನೈಜತೆ, ಸಮಗ್ರತೆ ಹಾಗೂ ಚಿತ್ರೀಕರಣಕ್ಕೆ ಸಂಬಂಧಿಸಿದ ಇತರೆ ತಾಂತ್ರಿಕ ಅಂಶಗಳನ್ನು ದೃಢಪಡಿಸುವ ಉದ್ದೇಶದಿಂದ ಮೊಬೈಲ್ ಫೋನ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಇನ್ನಷ್ಟೇ ಬರಬೇಕಾಗಿದೆ. ಗಮನಾರ್ಹ ಸಂಗತಿಯೆಂದರೆ, 2011ರಲ್ಲಿ ನಡೆದಿದೆ ಎನ್ನಲಾದ ಘಟನೆಯೊಂದಕ್ಕೆ ಸಂಬಂಧಿಸಿದಂತೆ ಈ ವಿಡಿಯೋವನ್ನು ಸುಮಾರು 12 ವರ್ಷಗಳ ನಂತರ, ಅಂದರೆ 2023ರಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗುತ್ತಿದೆ. ತಪ್ಪುದಾರಿಗೆಳೆಯುವಂತಹ ನಿರೂಪಣೆಯನ್ನು ಸೃಷ್ಟಿಸುವ ಹಾಗೂ ದುರುದ್ದೇಶಗಳನ್ನು ಈಡೇರಿಸುವ ಉದ್ದೇಶದಿಂದ ವಿಡಿಯೋವನ್ನು ಪೂರ್ವಯೋಜಕವಾಗಿ ಚಿತ್ರೀಕರಿಸಲಾಗಿದೆಯೇ, ಕೃತಕವಾಗಿ ಸೃಷ್ಟಿಸಲಾಗಿದೆಯೇ? ತಿರುಚಲಾಗಿದೆಯೇ? ಎಂಬುದನ್ನು ಪತ್ತೆಹಚ್ಚುವುದು ತನಿಖೆಯ ಪ್ರಮುಖ ಅಂಶವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಡಿಯೋ ಚಿತ್ರೀಕರಣಗೊಂಡ ನಂತರ ಯಾರ ವಶದಲ್ಲಿತ್ತು.? ಯಾರಿಂದ ಯಾರಿಗೆ ವರ್ಗಾಯಿಸಲಾಯಿತು? ಹಾಗೂ ಅಂತಿಮವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ ವ್ಯಕ್ತಿಗಳ ಕೈಗೆ ಹೇಗೆ ತಲುಪಿತು? ಎಂಬ ಅಂಶಗಳ ಕುರಿತು ತನಿಖೆ ನಡೆಸಲಾಗುತ್ತಿದೆ. 2023ರಲ್ಲಿ ವಿಡಿಯೋ ಚಿತ್ರೀಕರಣಗೊಂಡ ಸಮಯದಿಂದ 2026ರ ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಲ್ಲಿ ಅಂತರ್ಜಾಲದಲ್ಲಿ ಪ್ರಸಾರವಾಗುವವರೆಗಿನ ವಿಡಿಯೋದ ಸಂಪೂರ್ಣ ಹಸ್ತಾಂತರದ ಲಿಂಕ್‌ಗಳನ್ನು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ.

ವಿಡಿಯೋ ಅಪ್‌ಲೋಡ್ ಮಾಡಲು ಅನಾಮಧೇಯ ಖಾತೆಗಳನ್ನು ಬಳಸಲಾಗಿದ್ದು, ತಮ್ಮ ಗುರುತು ಮತ್ತು ಸ್ಥಳವನ್ನು ಮರೆಮಾಚಲು ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್‌ಗಳು (VPN), ಮರೆಮಾಚಲಾದ ಐಪಿ ವಿಳಾಸಗಳು, ವರ್ಚುವಲ್ ಹಾಗೂ ನಕಲಿ ಗುರುತು ಪ್ರದರ್ಶಿಸುವ ಮೊಬೈಲ್ ಸಂಖ್ಯೆಗಳು ಮತ್ತು ಇತರ ಸುಧಾರಿತ ಅನಾಮಧೇಯ ಡಿಜಿಟಲ್ ತಂತ್ರಗಳನ್ನು ಬಳಸಿರುವುದು ಕಂಡುಬಂದಿರುತ್ತದೆ. ಪ್ರಾಥಮಿಕ ತನಿಖೆಯ ಪ್ರಕಾರ, ಬಂಧಿತ ಆರೋಪಿಯು ಸ್ವತಂತ್ರ ಸಾಮಾಜಿಕ ಜಾಲತಾಣ ವಿಷಯ ಸೃಷ್ಟಿಕರ್ತನಾಗಿ (Freelance Social Media Content Creator) ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿರುವುದಲ್ಲದೇ, ನವದೆಹಲಿಯಲ್ಲಿ ನೆಲೆಸಿರುವ ಪ್ರಭಾವಿ ರಾಜಕೀಯ ಸಂಪರ್ಕಗಳನ್ನು ಹೊಂದಿರುವ ಕೆಲವು ವ್ಯಕ್ತಿಗಳೊಂದಿಗೆ ಸಂಬಂಧಗಳಿರುವ ಸಾಧ್ಯತೆಯೂ ಕಂಡುಬಂದಿದೆ.

ಮುಖ್ಯವಾಗಿ, ರಾಜ್ಯದಲ್ಲಿ ಜವಾಬ್ದಾರಿಯುತ ಸ್ಥಾನಗಳನ್ನು ಹೊಂದಿರುವ ವ್ಯಕ್ತಿಗಳ ತೇಜೋವಧೆ ಮಾಡುವ, ಅವರ ಘನತೆ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆ ತರುವ, ಸಾರ್ವಜನಿಕ ಅಭಿಪ್ರಾಯವನ್ನು ಪ್ರಭಾವಿಸುವ ಹಾಗೂ ರಾಜಕೀಯ ವಿವಾದ ಮತ್ತು ಸಾರ್ವಜನಿಕರಲ್ಲಿ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುವ ಉದ್ದೇಶದಿಂದ ಈ ವಿಡಿಯೋವನ್ನು ಯೋಜಿತವಾಗಿ ಪ್ರಸಾರ ಮಾಡಿರುವ ಸಾಧ್ಯತೆಯನ್ನು ಸೂಚಿಸುವ ಮಹತ್ವದ ಸುಳಿವುಗಳು ತನಿಖೆಯಲ್ಲಿ ಲಭ್ಯವಾಗಿವೆ ಎಂದು ತಿಳಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 4:23 pm, Thu, 29 October 26

ವಿಕಾಸ್​ ಬಿಎಂ

ವಿಕಾಸ್​ ಬಿಎಂ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ. ಮೈಸೂರು ಯೂನಿವರ್ಸಿಟಿ ಯಲ್ಲಿ ಶಿಕ್ಷಣ ಮುಗಿಸಿ, 2014 ರಿಂದ ಎಲೆಕ್ಟ್ರಾನಿಕ್ ಮಾದ್ಯಮದಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ಸದ್ಯ ಬೆಂಗಳೂರು ಕ್ರೈಂ ವರದಿಗಾರನಾಗಿ 11 ವರ್ಷ ಸೇವೆ ಸಲ್ಲಿಸಿದ್ದಾರೆ. ಕ್ರೈಂ ರಿಪೋರ್ಟಿಂಗ್ ಹಾಗು ಇನ್ವೆಷ್ಟಿಗೇಟಿವ್ ವರದಿಗಾರರಾಗಿ ಹಾಗು ಸ್ಟಿಂಗ್ ಆಪರೇಷನ್​ಗಳನ್ನ ಮಾಡಿದ್ದಾರೆ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಸುದ್ದಿ ಮೊದಲು ಬ್ರೇಕ್ ಮಾಡಿದ್ದಲ್ಲದೆ, ಶಂಕಿತರ ಸಿಸಿ ಕ್ಯಾಮರಾ ವಿಡಿಯೋಗಳನ್ನ ಪ್ರಸರಣ ಮಾಡಿ ಸಂಸ್ಥೆಯಿಂದ ಪ್ರಶಂಸೆಗೆ ಪಾತ್ರನಾಗಿದ್ದಾರೆ. ಅಲ್ಲದೇ ಬೆಂಗಳೂರಲ್ಲಿ ಟೈಡಾಲ್ ಡ್ರಗ್ ಸೇವನೆಯ ಸ್ಟಿಂಗ್ ಆಪರೇಷನ್ ಮಾಡಿ, ಮೆಡಿಕಲ್ ಗಳಲ್ಲಿ ಟೈಡಾಲ್ ಮಾತ್ರೆಯ ಮಾರಟ ನಿಯಂತ್ರಣಕ್ಕೆ ಬರುವಂತೆ ಮಾಡಿದ್ದಾರೆ. ನೊಂದವರ ಪರವಾಗಿ ನಿಂತು ವಸ್ತುನಿಷ್ಠವಾಗಿ ಸುದ್ದಿಗಳನ್ನ ನೀಡಿ ನ್ಯಾಯ ಕೊಡಿಸುವುದು ಇವರ ಮೊದಲ ಉದ್ದೇಶ. ಸದ್ಯ ಟಿವಿ9 ಸಂಸ್ಥೆಯಲ್ಲಿ ಬೆಂಗಳೂರು ಕ್ರೈಂ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ರೋಡ್ ಟ್ರಿಪ್, ಕ್ರಿಕೆಟ್‌, ವಾಲಿಬಾಲ್ ಆಡುವುದು, ಕ್ರೈಂ ಇನ್ವೆಷ್ಟಿಗೇಷನ್ ಪುಸ್ತಕ ಓದುವುದು ಮತ್ತು ಕ್ರೈಂ ತ್ರಿಲ್ಲರ್ ಸಿನಿಮಾಗಳನ್ನ ನೋಡುವುದು ಇವರ ಹವ್ಯಾಸಗಳು.

Read More
Loading...
Unable to load recommendations.
Follow Us