
ಬೆಂಗಳೂರು, ಏಪ್ರಿಲ್ 5: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯ ಕಾರಣ ಹೌರಾ ಮತ್ತು ಯಶವಂತಪುರ ನಡುವೆ ವಾರಕ್ಕೊಮ್ಮೆ ವಿಶೇಷ ರೈಲು ಸಂಚಾರ ನಡೆಸಲಿದೆ ಎಂದು ಆಗ್ನೇಯ ರೈಲ್ವೆ (South Eastern Railway) ತಿಳಿಸಿದೆ. ರೈಲು ಸಂಖ್ಯೆ 02863 ಹೌರಾ-ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಏಪ್ರಿಲ್ 11 ರಂದು ಮಧ್ಯಾಹ್ನ 12.40 ಕ್ಕೆ ಹೌರಾದಿಂದ ಹೊರಟು ಏಪ್ರಿಲ್ 14 ರಂದು ಬೆಳಿಗ್ಗೆ 12.15 ಕ್ಕೆ ಯಶವಂತಪುರ ತಲುಪಲಿದೆ.
ರೈಲು ಸಂಖ್ಯೆ 02864 ಯಶವಂತಪುರ-ಹೌರಾ ವೀಕ್ಲಿ ಎಕ್ಸ್‌ಪ್ರೆಸ್ ಏಪ್ರಿಲ್ 6 ಮತ್ತು 13 ರಂದು ಬೆಳಿಗ್ಗೆ 5 ಗಂಟೆಗೆ ಯಶವಂತಪುರದಿಂದ ಹೊರಟು ಕ್ರಮವಾಗಿ ಏಪ್ರಿಲ್ 15 ಮತ್ತು 22 ರಂದು ಮಧ್ಯಾಹ್ನ 1.25 ಕ್ಕೆ ಹೌರಾವನ್ನು ತಲುಪಲಿದೆ.
ರೈಲು ಸಂಖ್ಯೆ 06532 ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್ಮೆಂಟ್ ರೈಲಿನ ಸಂಚಾರದ ಸಮಯ ಬದಲಾಗಿದೆ. ಈ ರೈಲು ಚಿಕ್ಕಬಳ್ಳಾಪುರದಿಂದ ಸಂಜೆ 6.45ಕ್ಕೆ ಹೊರಟು ರಾತ್ರಿ 9 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ. ಇದು ನಂದಿ ಹಾಲ್ಟ್, ವೆಂಕಟಗಿರಿ ಕೋಟೆ, ಆವತಿಹಳ್ಳಿ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರೈಲು ನಿಲ್ದಾಣ, ದೊಡ್ಡಜಾಲ, ಬೆಟ್ಟಹಲಸೂರು, ಯಲಹಂಕ ಮತ್ತು ಬೈಯಪ್ಪನಹಳ್ಳಿಯಲ್ಲಿ ನಿಲುಗಡೆ ಹೊಂದಿದೆ.
ಸೇಲಂ ರೈಲ್ವೇ ವಿಭಾಗದಲ್ಲಿ ನಿಗದಿತ ಸಮಯದ ಕಾಮಗಾರಿಗಳ ಕಾರಣ ಈ ಕೆಳಗಿನ ರೈಲುಗಳ ಮಾರ್ಗ ಏಪ್ರಿಲ್‌ನಲ್ಲಿ ಬದಲಾವಣೆಯಾಗಿದೆ. ಏಪ್ರಿಲ್ 6, 9, 11, 13, 21, ಮತ್ತು 24 ರಂದು ಎರ್ನಾಕುಲಂನಿಂದ ಹೊರಡುವ ರೈಲು ಸಂಖ್ಯೆ 12678 ಎರ್ನಾಕುಲಂ-ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್, ಕೊಯಮತ್ತೂರು ಜಂಕ್ಷನ್‌ನಲ್ಲಿ ನಿಲುಗಡೆಯನ್ನು ಬಿಟ್ಟು ಪೊದನೂರ್-ಇರುಗೂರ್ (ಏಕ ಮಾರ್ಗ) ಮೂಲಕ ಸಂಚರಿಸಲಿದೆ.
ಬೆಂಗಳೂರಿನ ಮೂಲಕ ಮೈಸೂರು ಮತ್ತು ಚೆನ್ನೈಗೆ ಸಂಪರ್ಕ ಕಲ್ಪಿಸುವ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಶುಕ್ರವಾರದಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದೆ. ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದ ಈ ರೈಲು ಮಾರ್ಚ್ 14 ರಿಂದ ಈವರೆಗೆ ಬೆಂಗಳೂರಿನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ) ಬೈಯಪ್ಪನಹಳ್ಳಿ ಮತ್ತು ಚೆನ್ನೈ ಮಧ್ಯೆ ಸಂಚರಿಸುತ್ತಿತ್ತು.
ಇದನ್ನೂ ಓದಿ: ಮೈಸೂರು ಚೆನ್ನೈ ಮಧ್ಯೆ ಇಂದಿನಿಂದ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್
ವಂದೇ ಭಾರತ್ ರೈಲುಗಳನ್ನು ನಿರ್ವಹಿಸಲು ಮೈಸೂರಿನಲ್ಲಿ ಸೌಲಭ್ಯದ ಕೊರತೆಯ ಕಾರಣ ರೈಲು ಬೆಂಗಳೂರಿನಿಂದ ತೆರಳುತ್ತಿತ್ತು. ಇದೀಗ ಮೈಸೂರಿನಲ್ಲಿ ಪ್ರೀಮಿಯಂ ರೈಲನ್ನು ನಿರ್ವಹಿಸಲು ಅಗತ್ಯ ಸೌಲಭ್ಯಗಳನ್ನು ಸಿದ್ಧ ಮಾಡಿಕೊಂಡ ಬಳಿಕ ಸಂಚಾರ ಆರಂಭವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ