ಬೆಂಗಳೂರು, ಜುಲೈ 11: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸದಾ ಟ್ರಾಫಿಕ್ ಜಾಮ್ ಸ್ಪಾಟ್ ಅಂದರೆ ಸಿಲ್ಕ್ ಬೋರ್ಡ್ ಜಂಕ್ಷನ್. ಈ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಟ್ರಾಫಿಕ್ ಕಡಿಮೆ ಮಾಡಿ ವಾಹನಗಳ ಓಡಾಟಕ್ಕೆ ಅನಕೂಲ ಮಾಡಿಕೊಡುವ ದೃಷ್ಟಿಕೋನದಿಂದ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ನಿರ್ಮಾಣವಾದ ಹಾಗೂ ದಕ್ಷಿಣ ಭಾರತದ ಮೊದಲ ಡಬಲ್ ಡೆಕ್ಕರ್ ಫ್ಲೈ ಓವರ್ ಉದ್ಘಾಟನೆಗೆ ಸಿದ್ಧಗೊಂಡಿದೆ. ಜೂನ್ ಕೊನೆಯಲ್ಲೇ ಎಲ್ಲ ಕೆಲಸಗಳು ಮುಗಿದಿದ್ದು, ಮೇಲ್ಸೇತುವೆ ಉದ್ಘಾಟನೆ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಡೆಕ್ಕರ್ ಫ್ಲೈ ಓವರ್ ಉದ್ಘಾಟನೆಗೆ ಪ್ರಸ್ತಾವನೆ ಸಲ್ಲಿಸಿದ ಬಗ್ಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚವಾಣ್ ಮಾಹಿತಿ ನೀಡಿದ್ದಾರೆ.
3.36-ಕಿಮೀ ಉದ್ದದ ಈ ಫ್ಲೈಓವರ್ ರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲಿ ಪ್ರಾರಂಭವಾಗುತ್ತದೆ. ಮೇಟ್ರೊ ಹಳದಿ ರೇಖೆಯ ಕೆಳಗೆ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ಸಾಗಿದೆ. ಸರ್ಕಾರ ಸೂಚನೆ ಕೊಟ್ಟರೆ ಉದ್ಘಾಟನೆಗೊಂಡು ಸಾರ್ವಜನಿಕರಿಗೆ ಮುಕ್ತವಾಗಲಿದೆ. ಅತ್ತ ಮೆಟ್ರೋ ಹಳದಿ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ನಡೆಯುತ್ತಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಮೆಟ್ರೋಗೆ ಚಾಲನೆ ಸಾಧ್ಯತೆ ಇದೆ.
ಈ ಮೇಲ್ಸೇತುವೆ ಒಟ್ಟು ಐದು ರ‍್ಯಾಂಪ್‌ಗಳನ್ನು ಹೊಂದಿದ್ದು, ಎರಡು ರ‍್ಯಾಂಪ್‌ಗಳ (ಡಿ ಮತ್ತು ಇ) ಕೆಲಸ ಇನ್ನೂ ನಡೆಯುತ್ತಿದೆ. ಅದು 2025 ರ ಮೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ.
ಒಟ್ಟಿನಲ್ಲಿ ಅಂದುಕೊಂಡಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುಮತಿ ನೀಡಿ ಡಬಲ್ ಡೆಕ್ಕರ್ ರಸ್ತೆ ಉದ್ಘಾಟನೆಗೊಂಡರೆ ಶೀಘ್ರದಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ವಾಹನ ಸಂಚಾರ ಸುಗಮವಾಗಲಿದೆ.
ಡಬಲ್ ಡೆಕ್ಕರ್ ಫ್ಲೈಓವರ್ನ ಕೆಳ ಸ್ತರದಲ್ಲಿ ವಾಹನಗಳು ಸಂಚರಿಸಲಿವೆ. ಮೇಲ್ಸ್ತರದಲ್ಲಿ ಮೆಟ್ರೋ ರೈಲು ಸಂಚರಿಸುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಹೆಚ್ಚುವರಿಯಾಗಿ, ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಐದು ಲೂಪ್‌ಗಳು ಮತ್ತು ರ‍್ಯಾಂಪ್‌ಗಳನ್ನು ನಿರ್ಮಿಸಲಾಗುತ್ತಿದೆ. ಇವುಗಳನ್ನು ಎ, ಬಿ, ಸಿ, ಡಿ, ಮತ್ತು ಇ ರ‍್ಯಾಂಪ್‌ಗಳೆಂದು ಗುರುತಿಸಲಾಗಿದ್ದು, ಎ, ಬಿ ಮತ್ತು ಸಿ ರಾಗಿಗುಡ್ಡ/ ಬಿಟಿಎಂ ಲೇಔಟ್ ಕಡೆಯಿಂದ ಕೆಆರ್ ಪುರಂ ಮತ್ತು ಹೊಸೂರು ರಸ್ತೆಯನ್ನು ಸಂಪರ್ಕಿಸಲಿವೆ. ಡಿ ಮತ್ತು ಇ ಕೆಆರ್ ಪುರಂ ಅನ್ನು ಬಿಟಿಎಂ ಲೇಔಟ್ ಮತ್ತು ರಾಗಿಗುಡ್ಡ ರಸ್ತೆಯನ್ನು ಸಂಪರ್ಕಿಸಲಿವೆ.
ಇದನ್ನೂ ಓದಿ: ಟ್ರಾಫಿಕ್ನಿಂದ ಬಳಲುತ್ತಿದ್ದವರಿಗೆ ಗುಡ್ ನ್ಯೂಸ್; ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಸಿದ್ಧ
ಎ, ಬಿ, ಸಿ, ರ‍್ಯಾಂಪ್‌ಗಳ ಪ್ರಮುಖ ಕಾಮಗಾರಿ ಮುಕ್ತಾಯದ ಹಂತದಲ್ಲಿವೆ ಮತ್ತು ಜೂನ್ ಅಂತ್ಯದ ಒಳಗೆ ಕಾರ್ಯಾರಂಭಕ್ಕೆ ಸಿದ್ಧವಾಗಿದೆ. ಆದರೆ ಡಿ ಮತ್ತು ಇ ರ‍್ಯಾಂಪ್‌ಗಳು 2025 ರ ಜೂನ್ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:35 am, Thu, 11 July 24