ತಮಿಳುನಾಡಿನವರಿಂದ ರಾಮೇಶ್ವರಂ ಕೆಫೆಯಲ್ಲಿ ಬಾಂಬ್​: ಶೋಭಾಗೆ ಹೈಕೋರ್ಟ್​ ಪ್ರಶ್ನೆ

ತಮೀಳುನಾಡಿನಲ್ಲಿ ತರಬೇತಿ ಪಡೆಯುತ್ತಾರೆ, ಇಲ್ಲಿ (ಕರ್ನಾಟಕ)ಕ್ಕೆ ಬಂದು ಬಾಂಬ್​ ಇಡುತ್ತಾರೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರು ಸಚಿವೆ​ ಶೋಭಾ ಕರಂದ್ಲಾಜೆ ಹೇಳಿದ್ದರು. ಈ ಹೇಳಿಕೆಗೆ ಸಂಬಂಧ ತಮಿಳುನಾಡಿನಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಎಫ್​ಐಆರ್ ದಾಖಲಾಗಿತ್ತು.

ತಮಿಳುನಾಡಿನವರಿಂದ ರಾಮೇಶ್ವರಂ ಕೆಫೆಯಲ್ಲಿ ಬಾಂಬ್​: ಶೋಭಾಗೆ ಹೈಕೋರ್ಟ್​ ಪ್ರಶ್ನೆ
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Follow us
|

Updated on:Jul 11, 2024 | 11:18 AM

ಚೆನ್ನೈ/ಬೆಂಗಳೂರು ಜುಲೈ 10: “ರಾಮೇಶ್ವರಂ ಕೆಫೆಯಲ್ಲಿ ಬಾಂಬ್ (Rameshwaram Cafe Blast)​ ಇಟ್ಟವರು ತಮಿಳುನಾಡಿನಲ್ಲಿ ತರಬೇತಿ ಪಡೆದಿದ್ದಾರೆ” ಎಂಬ ನಿಮ್ಮ ಹೇಳಿಕೆಗೆ ಏನು ಆಧಾರವಿದೆ ಎಂದು ಮದ್ರಾಸ್​​ ಹೈಕೋರ್ಟ್ (Madras High Court) ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರು ಸಚಿವೆ​ ಶೋಭಾ ಕರಂದ್ಲಾಜೆ (Shobha Karandlaje) ಅವರಿಗೆ ಪ್ರಶ್ನಿಸಿದೆ. ಬೆಂಗಳೂರಿನ ನಗರ್ತಪೇಟೆಯಲ್ಲಿ ಮೊಬೈಲ್​ ಅಂಗಡಿ ಮಾಲೀಕನ ಮೇಲೆ ಹಲ್ಲೆ ಪ್ರಕರಣ ಖಂಡಿಸಿ ಬಿಜೆಪಿ ಹಾಗೂ ಹಿಂದೂ ಜಾಗರಣಾ ವೇದಿಕೆ ಆಯೋಜಿಸಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿದ್ದ ಸಚಿವೆ ಶೋಭಾ ಕರಂದ್ಲಾಜೆ, “ತಮೀಳುನಾಡಿನಲ್ಲಿ ತರಬೇತಿ ಪಡೆಯುತ್ತಾರೆ, ಇಲ್ಲಿ (ಕರ್ನಾಟಕ)ಕ್ಕೆ ಬಂದು ಬಾಂಬ್​ ಇಡುತ್ತಾರೆ” ಎಂದು ಆರೋಪ ಮಾಡಿದ್ದರು.

ಈ ಹೇಳಿಕೆಯು ತಮಿಳುನಾಡಿನವರನ್ನು ಅವಮಾನಿಸುವಂತಹದ್ದು ಎಂಬ ಆಕ್ಷೇಪ ವ್ಯಕ್ತವಾಗಿತ್ತು. ಈ ಸಂಬಂಧ ಸಿ.ತ್ಯಾಗರಾಜನ್ ಎಂಬುವರು ಮಾರ್ಚ್ 20 ರಂದು ಮಧುರೈನ ಸೈಬರ್ ಕ್ರೈಂ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶೋಭಾ ಕರಂದ್ಲಾಜೆ ವಿರುದ್ಧ ಎಫ್​ಐಆರ್​​ ದಾಖಲಾಗಿತ್ತು. ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಶೋಭಾ ಕರಂದ್ಲಾಜೆ ಅವರು ಅರ್ಜಿ ಸಲ್ಲಿಸಿದರು. ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಜಿ.ಜಯಚಂದ್ರನ್ ಈ ಪ್ರಶ್ನೆಯನ್ನು ಕೇಳಿದರು.

ಬಾಂಬರ್‌ಗಳಿಗೆ ತಮಿಳುನಾಡಿನಲ್ಲಿ ತರಬೇತಿ ನೀಡಲಾಗಿದೆ ಎಂದು ಹೇಳುವ ಮೂಲಕ ಕನ್ನಡಿಗರನ್ನು ತಮಿಳರ ವಿರುದ್ಧ ಎತ್ತಿಕಟ್ಟಿದ್ದಾರೆ ಎಂಬ ಆರೋಪವನ್ನು ಶೋಭಾ ಕರಂದ್ಲಾಜೆ ತಳ್ಳಿಹಾಕಿದ್ದಾರೆ. ತಮಿಳುನಾಡಿನ ಆಂತರಿಕ ಭದ್ರತೆಯ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸುವುದು ನನ್ನ ಉದ್ದೇಶವಾಗಿತ್ತು ಹೊರತು ಬೇರೆ ಯಾವ ಉದ್ದೇಶವಿರಲಿಲ್ಲ ಎಂದು ನ್ಯಾಯ ಪೀಠದ ಮುಂದೆ ಹೇಳಿದರು.

ನನ್ನ ಹೇಳಿಕೆಯನ್ನು ಹಿಂಪಡೆದಿದ್ದೇನೆ. ಮಾರ್ಚ್ 19 ರಂದು ನನ್ನ ಎಕ್ಸ್ ಖಾತೆ ಮೂಲಕ ಟ್ವೀಟ್ ಮಾಡಿ ಮೂಲಕ ತಮಿಳುನಾಡಿನ ಜನರಲ್ಲಿ ಕ್ಷಮೆಯಾಚಿಸಿದ್ದೇನೆ. ಮಾಧ್ಯಮಗಳಿಗೆ ನೀಡಿದ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದೇನೆ. ಸ್ಪಷ್ಟೀಕರಣದ ಹೊರತಾಗಿಯೂ ಕ್ರಿಮಿನಲ್ ಪ್ರಕರಣ ದಾಖಲಿಸಿರುವುದು ಮೇಲ್ನೋಟಕ್ಕೆ ಕಾನೂನುಬಾಹಿರವಾಗಿದೆ ಎಂದು ವಾದಿಸಿದರು.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ: ಬೆಂಗಳೂರಿನಲ್ಲಿ ನೆಲೆಸಿದ್ದ ಬಂಧಿತ ಉಗ್ರರ ಮತ್ತಷ್ಟು ಸ್ಫೋಟಕ ಮಾಹಿತಿ ಬಹಿರಂಗ

ರಾಮೇಶ್ವರಂ ಕೆಫೆ ಸ್ಫೋಟದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಯಿಂದ ಅಪರಾಧದಲ್ಲಿ ಭಾಗಿಯಾಗಿರುವ ಆರೋಪಿಗಳ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಇನ್ನೂ ಹೊರ ಬಂದಿಲ್ಲ. ಆದರೂ, ಕೇಂದ್ರ ಸಚಿವರು ಎರಡು ಗುಂಪಿನ ಜನರ ನಡುವೆ ದ್ವೇಷವನ್ನು ಉತ್ತೇಜಿಸುವ ಉದ್ದೇಶದಿಂದ ಸಾರ್ವಜನಿಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮತ್ತು ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆ ವಿಡಿಯೋವನ್ನು ನ್ಯಾಯಾಲಯದಲ್ಲಿ ಪ್ಲೇ ಮಾಡಬೇಕೆಂದು ಸರ್ಕಾರಿ ವಕೀಲ ಕೆಎಂಡಿ ಮುಹಿಲನ್ ಅವರು ಹೇಳಿದರು.

ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಮುಂದೆ ವಿಡಿಯೋ ಕ್ಲಿಪ್ ಪ್ಲೇ ಮಾಡುವುದನ್ನು ವಿರೋಧಿಸಿದರು. ಪ್ರಾಸಿಕ್ಯೂಷನ್ ಪರವಾಗಿ ಅಡ್ವೊಕೇಟ್ ಜನರಲ್ ಪಿ.ಎಸ್.ರಾಮನ್ ಹಾಜರಾಗಲು ನ್ಯಾಯಾಲಯಕ್ಕೆ ಸರ್ಕಾರಿ ವಕೀಲರು ಸಮಯ ಕೋರಿದರು.

ನ್ಯಾಯಾಧೀಶರು ಅವರ ಮನವಿಯನ್ನು ಸ್ವೀಕರಿಸಿ ಎಫ್‌ಐಆರ್ ರದ್ದು ಅರ್ಜಿಯನ್ನು ಮುಂದಿನ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:07 am, Thu, 11 July 24