ನಾಯಿಗಳ ಹಾವಳಿ: ವಿಧಾನಸೌಧದೊಳಗೆ ಶ್ವಾನಗಳಿಗೆ ಶೆಲ್ಟರ್, ಇತಿಹಾಸದಲ್ಲೇ ಮೊದಲ

| Updated By: ರಮೇಶ್ ಬಿ. ಜವಳಗೇರಾ

Updated on: Feb 04, 2025 | 8:37 PM

ಹಾದಿ ಬೀದಿ, ರಸ್ತೆಗಳಲ್ಲಿ ನಾಯಿಗಳ ಕಾಟ ಕಾಮನ್. ಆದ್ರೆ ಶಕ್ತಿಸೌಧ ವಿಧಾನಸೌಧದಲ್ಲಿ ಶ್ವಾನಗಳ ಹಾವಳಿ ಹೆಚ್ಚಾಗಿದ್ದು, ದೊಡ್ಡ ತಲೆನೋವಾಗಿದೆ. ಇದೀಗ ಶ್ವಾನಗಳ ಕಂಟ್ರೋಲ್‌ ಮಾಡಲು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಏನೆಲ್ಲಾ ಚರ್ಚೆಯಾಯಿತು? ಇನ್ನು ಸ್ಪೀಕರ್ ಯುಟಿ ಖಾದರ್ ಈ ಬಗ್ಗೆ ಏನು ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ.

ನಾಯಿಗಳ ಹಾವಳಿ: ವಿಧಾನಸೌಧದೊಳಗೆ ಶ್ವಾನಗಳಿಗೆ ಶೆಲ್ಟರ್, ಇತಿಹಾಸದಲ್ಲೇ ಮೊದಲ
Vidhana Soudha
Follow us on

ಬೆಂಗಳೂರು, (ಫೆಬ್ರವರಿ 04): ರಾಜಧಾನಿ ಬೆಂಗಳೂರಲ್ಲಿ ಬೀದಿನಾಯಿಗಳ ಕಾಟಕ್ಕೆ ಸದ್ಯಕ್ಕೆ ಕಡಿವಾಣ ಬೀಳುವ ಲಕ್ಷಣ ಕಾಣುತ್ತಿಲ್ಲ. ರಾಜಧಾನಿಯ ಬೀದಿಗಳಿರಲಿ ಇಡೀ ರಾಜಧಾನಿಯ ಶಕ್ತಿಕೇಂದ್ರ ವಿಧಾನಸೌಧದಲ್ಲೇ ಬೀದಿನಾಯಿಗಳ ಕಾಟ ಶುರುವಾಗಿಬಿಟ್ಟಿದೆ. ಸಾರ್ವಜನಿಕರ ಎಂಟ್ರಿಗೆ ಪಾಸ್ ಕೇಳೋ ಸರ್ಕಾರ, ಇಡೀ ವಿಧಾನಸೌಧದಲ್ಲಿ ಬೌಬೌ ಪಡೆ ಓಡಾಡುತ್ತಿದ್ದು, ಅಧಿಕಾರಿಗಳು, ಶಾಸಕರಿಗೆ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕಲು ಖುದ್ದು ಸ್ವೀಕರ್ ಯುಟಿ ಖಾದರ್ ಅವರೇ, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ವಿಧಾನಸೌಧದಲ್ಲೇ ಶ್ವಾನಗಳಿಗೆ ಶೆಲ್ಟರ್ ನಿರ್ಮಿಸಲು ತೀರ್ಮಾನಿಸಲಾಗಿದೆ.

ಅಂದಹಾಗೆ ಕಳೆದ ಬಿಜೆಪಿ‌ ಸರ್ಕಾರದ ಅವಧಿಯಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ಕೇಂದ್ರ‌ ಗೃಹ ಸಚಿವ ಅಮಿತ್ ಶಾ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ಗೆ ಆಗಮಿಸಿದ್ದ ವೇಳೆ ಶ್ವಾನಗಳನ್ನ ಹಿಡಿಯಲು ಸರ್ಕಾರ ಸರ್ಕಸ್ ನಡೆಸಿತ್ತು. ಆಗ ಏನೂ ವರ್ಕೌಟ್ ಆಗಿಲ್ಲ. ಇಷ್ಟಾದರೂ ವಿಧಾನಸೌಧದ ಆವರಣ, ವಿಕಾಸಸೌಧ ಹಾಗೂ ಉದ್ಯಾನವನದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ನಿಟ್ಟಿನಲ್ಲಿ ಇಂದು ಸಭಾಧ್ಯಕ್ಷ ಯು.ಟಿ ಖಾದರ್ ನೇತೃತ್ವದಲ್ಲಿ ಸಭೆ ನಡೆಸಲಾಯ್ತು. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ವಿಧಾನಸಭೆ ಸಭಾಧ್ಯಕ್ಷ ಯು.ಟಿ ಖಾದರ್, ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಬೆಂಗಳೂರಲ್ಲಿ ಆರ್‌ಟಿಒ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ತೆರಿಗೆ ಪಾವತಿಸದ 30 ಐಷಾರಾಮಿ ಕಾರುಗಳು ಸೀಜ್‌

ಶ್ವಾನಗಳ ಸ್ಥಳಾಂತರ ಬೇಡವೆಂದ ತಜ್ಞರು

ಇನ್ನೂ ತಜ್ಞರಿಗೆ ವರದಿ ನೀಡುವಂತೆ ವಿಧಾನಸಭೆ ಸಭಾಧ್ಯಕ್ಷರು ಸೂಚನೆ ನೀಡಿದ್ದಾರೆ. ಇಂದಿನ ಸಭೆಯಲ್ಲಿ ಶ್ವಾನಗಳ ಸ್ಥಳಾಂತರ ಬೇಡವೆಂದು ತಜ್ಞರು ಸಲಹೆ‌ ನೀಡಿದ್ದಾರೆ. ಹೀಗಾಗಿ ವಿಧಾನಸೌಧದ ಆವರಣದಲ್ಲೇ ಶ್ವಾನಗಳಿಗೆ ಶೆಲ್ಟರ್ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ. ಇದು ಇತಿಹಾಸದಲ್ಲೇ ಐತಿಹಾಸಿಕ ನಿರ್ಧಾರಕ್ಕೆ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಮುಂದಾಗಿದ್ದಾರೆ.

ಅಂದಾಜಿನ ಪ್ರಕಾರ ವಿಧಾನಸೌಧದಲ್ಲಿ 100ಕ್ಕೂ ಹೆಚ್ಚು ಶ್ವಾನಗಳಿವೆ. ಆದರೆ ಅಧಿಕೃತವಾಗಿ 54 ಶ್ವಾನಗಳಿರುವ ಮಾಹಿತಿ ಸಿಕ್ಕಿದೆ. ಆ ಶ್ವಾನಗಳಿಗೆ ಲೋಕೋಪಯೋಗಿ ಇಲಾಖೆಯೊಂದಿಗೆ ಚರ್ಚಿಸಿ ಶೆಲ್ಟರ್ ವ್ಯವಸ್ಥೆ ಮಾಡಲು ನಿರ್ಧಾರ ಮಾಡಲಾಗಿದೆ. ಪ್ರಾಣಿ‌ದಯಾ ಸಂಘಕ್ಕೆ ಈ ಶ್ವಾನಗಳ ಶೆಲ್ಟರ್ ನಿರ್ವಹಣೆ ಉಸ್ತುವಾರಿ ನೀಡಲಿದ್ದಾರೆ. ಶ್ವಾನಗಳಿಗೆ ರೇಬಿಸ್ ಔಷಧಿ ನೀಡಿವ ಕುರಿತಾಗಿಯೂ ಚರ್ಚೆಯಾಗಿದೆ.

ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಿಷ್ಟು

ಇನ್ನು ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸ್ಪೀಕರ್ ಯು.ಟಿ.ಖಾದರ್ , ಪ್ರಾಣಿಗಳಿಗೆ ಮಾತನಾಡಲು ಆಗುತ್ತಾ, ಅವುಗಳ ಕಷ್ಟ ನೋಡಬೇಕು. ವಿಧಾನಸೌಧ ವ್ಯಾಪ್ತಿಯಲ್ಲಿ ವಾಕಿಂಗ್ ಮಾಡುವಾಗ ನಾಯಿ ಹಾವಳಿ ಹೆಚ್ಚಾಗಿದೆ. ಇದರಿಂದ ವಿಧಾನಸೌಧ ನೋಡಲು ಮಕ್ಕಳು ಬಂದಾಗ ಭಯಭೀತರಾಗುತ್ತಾರೆ. ವಿಧಾನಸೌಧದ ಆವರಣದಿಂದ ಸ್ಥಳಾಂತರದ ಬಗ್ಗೆ ಚರ್ಚಿಸಿದ್ದೇವೆ. ಸಭಾಪತಿ, ಆರೋಗ್ಯ ಸಚಿವರು, ಸಿಎಸ್, ಡಿಪಿಎಆರ್, ಪೊಲೀಸ್. ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜೊತೆ ಸಭೆ ಮಾಡಿದ್ದು, ನಾಯಿಗಳನ್ನು ಎಲ್ಲಿ ಬಿಡುತ್ತಾರೆ ಎನ್ನುವ ಬಗ್ಗೆ ಪರ, ವಿರೋಧ ಚರ್ಚೆ ಆಯ್ತು ಎಂದರು.

ವಿಧಾನಸೌಧದ ಸುತ್ತಮುತ್ತ ಸುಮಾರು 54 ನಾಯಿಗಳಿವೆ. ಮಳೆಗಾಲ, ಬೇಸಿಗೆ ಕಾಲದಲ್ಲಿ ಎಲ್ಲಿ ಜಾಗ ಸಿಗುತ್ತೋ ಅಲ್ಲಿಗೆ ಬರುತ್ತವೆ. ವಿಧಾನಸೌಧ ಸುತ್ತಮುತ್ತ ಇರುವ ನಾಯಿಗಳನ್ನು ಸ್ಥಳಾಂತರಿಸಲಾಗಲ್ಲ. ವಿಧಾನಸೌಧದ ಆವರಣದಲ್ಲೇ ನಾಯಿಗಳಿಗೆ ಸ್ಥಳ ನಿಗದಿ ಮಾಡುವುದು. ಅವುಗಳನ್ನು ನೋಡಿಕೊಳ್ಳಲು NGOಗೆ ನೀಡಿದ್ರೆ ಯೋಗಕ್ಷೇಮ ನೋಡಿಕೊಳ್ಳುತ್ತಾರೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡುತ್ತಾರೆ. 15 ದಿನದೊಳಗೆ ಟೆಂಡರ್ ಕರೆಯುತ್ತೇವೆ ಎಂದು ಮಾಹಿತಿ ನೀಡಿದರು.

ವಿಧಾನಸೌಧದೊಳಗಿನ ಶ್ವಾನಗಳು‌ ಈವರೆಗೆ ಯಾರ ಮೇಲೂ ದಾಳಿ ನಡೆಸಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಶ್ವಾನಗಳಿಗೆ ಶೆಲ್ಟರ್ ನಿರ್ಮಿಸುವ ಸಂಬಂಧ ಚರ್ಚೆ ನಡೆದಿದೆ. ಇತಿಹಾಸದಲ್ಲೇ ಇದು ಮೊದಲ ವಿಧಾನಸೌಧ ಅಚ್ವರಿಯ ಸಂಗತಿಗೆ ಸಾಕ್ಷಿಯಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:34 pm, Tue, 4 February 25