ಬೆಂಗಳೂರು: ನಾಡಿನೆಲ್ಲೆಡೆ ಇಂದು ಶ್ರೀರಾಮನವಮಿ(Rama Navami 2022) ಸಂಭ್ರಮ ಮನೆ ಮಾಡಿದೆ. ವಿಶೇಷ ಪೂಜೆ, ಅಲಂಕಾರಗಳಿಂದ ಶ್ರೀರಾಮ ಮಂದಿರಗಳು ಕಂಗೊಳಿಸುತ್ತಿವೆ. ಬೆಂಗಳೂರಿನ ಶ್ರೀರಾಮ ಮಂದಿರಗಳಲ್ಲಿ, ರಾಮ ಭಕ್ತ ಹನುಮನ ಮಂದಿರಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಾನಕ, ಕೋಸಂಬರಿ ವಿತರಣೆ ಮಾಡಲಾಗುತ್ತಿದೆ. ವಿವಿಧ ವೃತ್ತಗಳಲ್ಲಿ, ಆಟೋ ಚಾಲಕರ ಸಂಘ ಸೇರಿದಂತೆ ಅನೇಕರು ಹಿಂದೂ-ಮುಸ್ಲಿಂ ಎಂಬ ಧರ್ಮ ಮರೆತು ರಾಮ ಮಂದಿರ ದೇವಸ್ಥಾನಗಳ ಬಳಿ ಪಾನಕ ಮಜ್ಜಿಗೆ ವಿತರಣೆ ಮಾಡುತ್ತಿದ್ದಾರೆ. ಇಂದು ಶ್ರೀರಾಮನವಮಿ ಹಿನ್ನೆಲೆ ಬೆಂಗಳೂರಿನಲ್ಲಿ ಹಲವೆಡೆ ಶೋಭಾಯಾತ್ರೆ ನಡೆಯಲಿದೆ. ಹೊಸಕೆರೆಹಳ್ಳಿ ಭವಾನಿ ಶಂಕರ ದೇವಸ್ಥಾನದಿಂದ ಹರೆಹಳ್ಳಿಯ ಹನುಮಗಿರಿವರೆಗೆ ಶೋಭಾಯಾತ್ರೆ ನಡೆಯಲಿದೆ. ಉಡುಪಿ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಶೋಭಾಯಾತ್ರೆ ನಡೆಯಲಿದೆ. ಯಾತ್ರೆಯಲ್ಲಿ ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ ಹಾಗೂ ವಿವಿಧ ಜಾನಪದಕಲಾತಂಡಗಳೊಂದಿಗೆ ಎಜಿಎಸ್ ಬಡಾವಣೆ ಮುಖ್ಯ ರಸ್ತೆ ಇಟ್ಟಮಡು ರಸ್ತೆಯಿಂದ ಹನುಮಗಿರಿ ಬೆಟ್ಟ ತಲುಪುತ್ತದೆ. ಬೆಳಿಗ್ಗೆ ಎಂಟು ಗಂಟೆಗೆ ವೀರಾಂಜನೇಯ ಮತ್ತು ಅರ್ಕೇಶ್ವರ ಸ್ವಾಮಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನೇರವೇರಿಸಲಾಗುತ್ತದೆ.
ಸುಮಾರು 800 ವರ್ಷಗಳ ಇತಿಹಾಸವುಳ್ಳ ಬಸವನಗುಡಿಯ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸೀತಾ, ರಾಮ, ಲಕ್ಷ್ಮಣರಿಗೆ ಬೆಳಿಗ್ಗೆ 6 ಗಂಟೆಯಿಂದ ವಿಶೇಷ ಮಹಾಭಿಷೇಕ, ವಜ್ರವಸ್ತ್ರಾಲಂಕಾರ ಮಾಡಲಾಗಿದೆ. ಸಂಜೆ ನಾಲ್ಕು ಗಂಟೆಗೆ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದಿಂದ ಅಶ್ವತ್ ನಗರದ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯದಿಂದ ಪ್ರಾರಂಭವಾಗಿ ಸಂಜಯ ನಗರದ ಮುಖ್ಯ ರಸ್ತೆಯ ಮೂಲಕ ಶೋಭಾಯಾತ್ರೆ ಮೆರವಣಿಗೆ ನಡೆಯಲಿದೆ. ಭೂಪಸಂದ್ರದಲ್ಲಿ ವೇದಿಕೆ ಕಾರ್ಯಕ್ರಮದೊಂದಿಗೆ ಮುಕ್ತಾಯವಾಗುತ್ತದೆ. ಈ ಶೋಭಾಯಾತ್ರೆಯಲ್ಲಿ ಭಜರಂಗದಳದ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯ ನಾರಾಯಣ ಮತ್ತು ಗುರುಭಕ್ತ ದಾಸ್ ಸ್ವಾಮಿ ಹಾಗೂ ಬೆಂಗಳೂರು ನಗರದ ಆರ್ಎಸ್ಎಸ್ ಕಾರ್ಯವಾಹಕ ಕರುಣಾಕರ ರೈ ಭಾಗಿಯಾಗಲಿದ್ದಾರೆ.
ಬೆಂಗಳೂರಲ್ಲಿ ಟೈಟ್ ಸೆಕ್ಯೂರಿಟಿ
ಇಂದು ರಾಮನವಮಿ ಹಿನ್ನೆಲೆ ಬೆಂಗಳೂರಲ್ಲಿ ಟೈಟ್ ಸೆಕ್ಯೂರಿಟಿ ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಲಿದ್ದಾರೆ. ಬಿಗಿ ಭದ್ರತೆ ಕೈಗೊಳ್ಳುವಂತೆ ಡಿಸಿಪಿಗಳಿಗೆ ಕಮಿಷನರ್ ಸೂಚನೆ ನೀಡಿದ್ದಾರೆ. ಆಯಾ ಠಾಣೆ ಇನ್ಸ್ಪೆಕ್ಟರ್ಗಳಿಗೆ ಡಿಸಿಪಿಗಳು ಹೊಣೆ ಹೊರಿಸಿದ್ದಾರೆ. ಪ್ರತಿ ಠಾಣಾ ವ್ಯಾಪ್ತಿಯಲ್ಲೂ ಸಿಬ್ಬಂದಿ ರೌಂಡ್ಸ್ ಹಾಕಬೇಕು. ನಗರದಲ್ಲಿ ಶ್ರೀರಾಮ ಮಂದಿರ ಇರುವ ಕಡೆಗಳಲ್ಲಿ ಹೆಚ್ಚು ನಿಗಾ ವಹಿಸಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ಹದ್ದಿನ ಕಣ್ಣು ಇಟ್ಟಿರಬೇಕೆಂದು ಪೊಲೀಸರಿಗೆ ಸೂಚಿಸಲಾಗಿದೆ.
161 ಅಡಿ ಎತ್ತರದ ಪಂಚಮುಖಿ ಆಂಜನೇಯ ಮೂರ್ತಿ ಉದ್ಘಾಟನೆ
ಇಂದು ಕುಣಿಗಲ್ಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಲಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಬಿದನಗೆರೆ ಗ್ರಾಮದಲ್ಲಿ ನಿರ್ಮಾಣವಾಗಿರುವ 161 ಅಡಿ ಎತ್ತರದ ಪಂಚಮುಖಿ ಆಂಜನೇಯ ಸ್ವಾಮಿ ಮೂರ್ತಿಯನ್ನು ಉದ್ಘಾಟನೆ ಮಾಡಲಿದ್ದಾರೆ. ಬೆಳಿಗ್ಗೆ 9.30 ಕ್ಕೆ ಕುಣಿಗಲ್ನ ಸ್ಟೆಡ್ ಫಾರಂ ಹೆಲಿಪ್ಯಾಡ್ ಗೆ ಸಿಎಂ ಆಗಮಿಸಲಿದ್ದು ಸ್ಟೆಡ್ ಫಾರಂ ನಿಂದ ರಸ್ತೆ ಮೂಲಕ ಬಿದನಗೆರೆಗೆ ತೆರಳಲಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಈ ವೇಳೆ ಸಿಎಂ ಜೊತೆ ಹಲವು ಸಚಿವರು ಭಾಗಿಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: Ram Navami 2022: ರಾಮನ ಕಾಣಲು ರಾಮನೇ ಕೊಟ್ಟ ಉಪಾಯ
Ram Navami 2022 Quiz: ಶ್ರೀ ರಾಮನವಮಿ ಪ್ರಯುಕ್ತ ಒಂದು ಚಿಕ್ಕ- ಚೊಕ್ಕ ಕ್ವಿಜ್ ಇಲ್ಲಿದೆ
Published On - 7:20 am, Sun, 10 April 22