ವ್ಯಾಪಕ ಭ್ರಷ್ಟಾಚಾರದಿಂದ ರಾಜ್ಯ ಸರ್ಕಾರ ಗಬ್ಬೆದ್ದು ನಾರುತ್ತಿದೆ, ಜನರ ರಕ್ತ ಹೀರುತ್ತಿದ್ದಾರೆ: ಮಾಜಿ ಸಿಎಂ ಸಿದ್ದರಾಮಯ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 13, 2022 | 3:50 PM

ವ್ಯಾಪಕ ಭ್ರಷ್ಟಾಚಾರದಿಂದ ರಾಜ್ಯ ಸರ್ಕಾರ ಗಬ್ಬೆದ್ದು ನಾರುತ್ತಿದೆ. ಸರ್ಕಾರದ ವಿರುದ್ಧ ಜನ, ಅಧಿಕಾರಿಗಳು, ಗುತ್ತಿಗೆದಾರರು ಬೇಸತ್ತಿದ್ದಾರೆ. ರಾಜ್ಯದ ಜನರಲ್ಲಿ ಜಾಗೃತಿ ಮೂಡಿಸಲು ಹೋರಾಟ ಮಾಡುತ್ತಿದ್ದೇವೆ.

ವ್ಯಾಪಕ ಭ್ರಷ್ಟಾಚಾರದಿಂದ ರಾಜ್ಯ ಸರ್ಕಾರ ಗಬ್ಬೆದ್ದು ನಾರುತ್ತಿದೆ, ಜನರ ರಕ್ತ ಹೀರುತ್ತಿದ್ದಾರೆ: ಮಾಜಿ ಸಿಎಂ ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ
Follow us on

ಬೆಂಗಳೂರು: ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮಿಷನ್ ಸರ್ಕಾರ. ರಾಜ್ಯ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಎಂದು ಕೆಪಿಸಿಸಿ ಕಚೇರಿಯಲ್ಲಿ ಸಿಎಲ್​ಪಿ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಸಿಎಂ, ಮಂತ್ರಿಮಂಡಲ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ವ್ಯಾಪಕ ಭ್ರಷ್ಟಾಚಾರದಿಂದ ರಾಜ್ಯ ಸರ್ಕಾರ ಗಬ್ಬೆದ್ದು ನಾರುತ್ತಿದೆ. ಭಾರತೀಯ ಜನತಾ ಪಕ್ಷದವರು ರಾಜ್ಯದ ಜನರ ರಕ್ತ ಹೀರುತ್ತಿದ್ದಾರೆ. ಕಮಿಷನ್​ ದಂಧೆಯಿಂದ ಬೇಸತ್ತು ಬಿಜೆಪಿ ಕಾರ್ಯಕರ್ತರ ಸಂತೋಷ್ ಪಾಟೀಲ್​ ಆತ್ಮಹತ್ಯೆಗೆ  ಶರಣಾಗಿದ್ದರು. 40 ಪರ್ಸೆಂಟ್​ ಕಮಿಷನ್ ಕೊಡದಿದ್ದರಿಂದ ಬಿಲ್ ಮಾಡಿರಲಿಲ್ಲ. ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಈಶ್ವರಪ್ಪ ಬಿಲ್​ ಮಾಡಿರಲಿಲ್ಲ. ಸಾಲಸೋಲ ಮಾಡಿ ಸಂತೋಷ್ ಪಾಟೀಲ್ ಕಾಮಗಾರಿ ಮಾಡಿದ್ದ. ಸಾಲಬಾಧೆ, ಜಿಗುಪ್ಸೆಯಿಂದ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ.

ವಿಧಾನಮಂಡಲ ಅಧಿವೇಶನದಲ್ಲಿ ವಿಚಾರ ಪ್ರಸ್ತಾಪ ಮಾಡಿದ್ದೆವು. ಸಚಿವ ಸ್ಥಾನಕ್ಕೆ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಿದ್ದರು. ಆದರೆ ಕೆ.ಎಸ್.ಈಶ್ವರಪ್ಪ ವಿರುದ್ಧ ಕೇಸ್ ಹಾಕಲಿಲ್ಲ, ಬಂಧಿಸಲಿಲ್ಲ. ತನಿಖೆ ಮಾಡುವ ಕಣ್ಣೊರೆಸುವ ತಂತ್ರ ಮಾಡಿ ಬಿರಿಪೋರ್ಟ್​ ಸಲ್ಲಿಕೆ ಮಾಡಲಾಯಿತು. ನ್ಯಾಯಾಂಗ ತನಿಖೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದೆವು. ಸಂತೋಷ್​ ಪತ್ನಿ ರಾಜ್ಯಪಾಲರಿಗೆ ಪತ್ರ ಬರೆದು ನ್ಯಾಯ ಕೇಳಿದ್ದರು.

ಭ್ರಷ್ಟಾಚಾರದಿಂದ ಸರ್ಕಾರ ಗಬ್ಬೆದ್ದು ನಾರುತ್ತಿದೆ

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಭೇಟಿಯಾಗಿದ್ದರು. 40 ಪರ್ಸೆಂಟ್​ ಕಮಿಷನ್​ ಇಲ್ಲದೆ ಯಾವುದೇ ಕೆಲಸ ನಡೆಯಲ್ಲ. ಮಠಗಳಿಗೆ ನೀಡುವ ದುಡ್ಡಿಗೂ ಕಮಿಷನ್​ ಕೇಳಿದ ಸರ್ಕಾರವಿದು. ಸರ್ಕಾರದ ವಿರುದ್ಧ ಜನ, ಅಧಿಕಾರಿಗಳು, ಗುತ್ತಿಗೆದಾರರು ಬೇಸತ್ತಿದ್ದಾರೆ. ರಾಜ್ಯದ ಜನರಲ್ಲಿ ಜಾಗೃತಿ ಮೂಡಿಸಲು ಹೋರಾಟ ಮಾಡುತ್ತಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ರಹಿತ ಆಡಳಿತದ ಭರವಸೆ ನೀಡುತ್ತೇವೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಸಿಎಲ್​ಪಿ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದರು.

ಸಿಎಂ ವಿರುದ್ಧ ಡಿ.ಕೆ.ಶಿವಕುಮಾರ್ ತೀವ್ರ ವಾಗ್ದಾಳಿ 

ಫಸ್ಟ್​ ರ್ಯಾಂಕ್​​ ಪಡೆದವರೇ PSI ಕೇಸ್​ನಲ್ಲಿ ಅರೆಸ್ಟ್​ ಆಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದರು. PSI ನೇಮಕಾತಿ ಹಗರಣದಲ್ಲಿ ಅಧಿಕಾರಿಯನ್ನೇ ಬಂಧಿಸಿದ್ದೀರಿ. ಕನಕಗಿರಿ ಶಾಸಕ ಸರ್ಕಾರಕ್ಕೆ 15 ಲಕ್ಷ ಕೊಟ್ಟಿದ್ದೀನಿ ಎಂದಿದ್ದಾರೆ. ಪ್ರಿಯಾಂಕ್ ಪ್ರಶ್ನಿಸಿದರೆ ನೋಟಿಸ್ ಕೊಟ್ಟು ಹೆದರಿಸುತ್ತೀರಾ ಎಂದು ಪ್ರಶ್ನಿಸಿದರು. 2,500 ಕೋಟಿ ಬಗ್ಗೆ ಬಿಜೆಪಿ ಶಾಸಕ ಯತ್ನಾಳ್ ಹೇಳಿದ್ದರು. ಯತ್ನಾಳ್​ಗೆ ಯಾಕೆ ನೋಟಿಸ್​ ಕೊಟ್ಟು ವಿಚಾರಣೆಗೆ ಕರೆಯಲಿಲ್ಲ ಎಂದರು. ಕೆ.ಎಸ್.ಈಶ್ವರಪ್ಪ, ರಮೇಶ್ ಜಾರಕಿಹೊಳಿ ವಿರುದ್ಧ ಆರೋಪವಿತ್ತು. ಕೇಸ್ ತನಿಖೆಗೂ ಮುನ್ನ ಅವರು ತಪ್ಪು ಮಾಡಿಲ್ಲ ಎಂದು ಹೇಳ್ತಿದ್ದೀರಿ.

ಸರ್ಕಾರ ಉಳಿಸಿಕೊಳ್ಳುವುದಕ್ಕಾಗಿ ಕಳಂಕಿತರನ್ನು ಕಾಪಾಡುತ್ತಿದ್ದೀರಿ. ಈಗ ನಮ್ಮ ಮೇಲೂ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಸಿಎಂ ಬೊಮ್ಮಾಯಿ ಏನೋ ಧಮ್ ಬಗ್ಗೆ ಮಾತನಾಡುತ್ತಿದ್ದರು. 3 ವರ್ಷದಿಂದ ತನಿಖೆ ಮಾಡಿಸದೇ ಏನು ಮಾಡುತ್ತಿದ್ದರು. ಈಗ ಏನೋ ಸಿಎಂ ಬೊಮ್ಮಾಯಿಗೆ ಧಮ್​ ಬಂದು ಬಿಟ್ಟಿದೆ ಎಂದು ಡಿ.ಕೆ.ಶಿವಕುಮಾರ್ ತೀವ್ರ ವಾಗ್ದಾಳಿ ಮಾಡಿದರು.


ಕರ್ನಾಟಕ ಈಗ ಕರಪ್ಶನ್ ಕ್ಯಾಪಿಟಲ್ ಆಫ್‌‌ ಇಂಡಿಯಾ ಆಗಿದೆ. ಡಬಲ್‌ ಇಂಜಿನ್ ಸರ್ಕಾರ ಬಂದ ಮೇಲೆ ಬೊಮ್ಮಾಯಿ ಸರ್ಕಾರದ ರೇಟ್ ಕಾರ್ಡ್ ಹಾಕಿ ಯಾವು ಯಾವುದಕ್ಕೆ ಎಷ್ಟೆಷ್ಟು ರೇಟ್ ಅಂತ ಹಾಕಿದೆ. 30% ಟ್ಯಾಕ್ಸ್ ಕಟ್ಟುವುದು ಬೆಂಗಳೂರಿನಿಂದ. ಸಬ್ ಅರ್ಬನ್ ರೈಲಿನ ದೊಡ್ಡ ಘೋಷಣೆ ಮಾಡಿದಿರಿ ಈಗ ಅದು ಏನಾಗಿದೆ ಎಂದರು. ಬರೀ ಭೂಮಿ ಪೂಜೆಯಲ್ಲೇ ಉಳಿದುಕೊಂಡಿದೆ ಹೊರತು ಡಬಲ್ ಇಂಜಿನ್ ಸರ್ಕಾರಕ್ಕೆ ಕೆಲಸ ಮಾಡಕ್ಕಾಗ್ತಿಲ್ಲ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 3:50 pm, Tue, 13 September 22