ರಾಜ್ಯದ ಪಶ್ಚಿಮಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ವಿಚಾರ; ಕೇಂದ್ರದ ಅಧಿಸೂಚನೆಗೆ ಶಾಸಕರ ವಿರೋಧ
ರಾಜ್ಯದ ಪಶ್ಚಿಮಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ವಿಚಾರವಾಗಿ ಕೇಂದ್ರ ಅರಣ್ಯ ಸಚಿವಾಲಯ ಹೊರಡಿಸಿದ ಅಧಿಸೂಚನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ರಾಜ್ಯದ ಪಶ್ಚಿಮ ಘಟ್ಟ (Western Ghats) ಪರಿಸರ ಸೂಕ್ಷ್ಮ ಪ್ರದೇಶ ವಿಚಾರವಾಗಿ ಕೇಂದ್ರ ಅರಣ್ಯ ಸಚಿವಾಲಯ ಹೊರಡಿಸಿದ ಅಧಿಸೂಚನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ (Araga jnanendra) ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 56,826 ಚದರ ಕಿಲೋ ಮೀಟರ್ ಪರಿಸರ ಸೂಕ್ಷ್ಮ ಪ್ರದೇಶವಾಗಿದೆ. ಇದು ಪಶ್ಚಿಮಘಟ್ಟ ಪ್ರದೇಶದ ಜನರ ಭವಿಷ್ಯಕ್ಕೆ ಮಾರಕವಾಗಿದೆ. ಇದರಿಂದ ಮಲೆನಾಡು ನಿವಾಸಿಗಳ ಬದುಕು ಬೀದಿಗೆ ಬೀಳುತ್ತದೆ. ಅಭಿವೃದ್ಧಿ ಕುಂಠಿತ, ಆರ್ಥಿಕ ಸಂಕಷ್ಟ ಎದುರಾಗಲಿದೆ ಎಂದು ಕೇಂದ್ರದ ಅಧಿಸೂಚನೆ ವಿರುದ್ಧ ಸಭೆಯಲ್ಲಿ ಶಾಸಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಭೆ ಬಳಿಕ ಆರಗ ಜ್ಞಾನೇಂದ್ರ ಸುದ್ದಿಗೋಷ್ಠಿ ನಡೆಸಿ ಕಸ್ತೂರಿ ರಂಗನ್ ವರದಿಯ 5ನೇ ನೋಟಿಫಿಕೇಶನ್ನ್ನು ಜುಲೈ 6 2022 ರಂದು ಹೊರಡಿಸಿದ್ದೇವೆ. ಹೀಗಾಗಿ ಸಿಎಂ ನೇತೃತ್ವದಲ್ಲಿ ಸಭೆ ನಡೆಸಿದ್ದೇವೆ. ನಮ್ಮ ಸರ್ಕಾರ ಇದನ್ನು ಒಪ್ಪಿಕೊಳ್ಳುತ್ತದೆ. 2019 ಹಾಗೂ 2020 ರಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರಕ್ಕೆ ಪತ್ರ ಬರೆದಿದ್ದರು. ನಾವೂ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ್ಮೇಲೆ ಇದನ್ನು ರದ್ದುಮಾಡುವಂತೆ ಕೇಂದ್ರ ಹೋಗಿ ಹೇಳಿದ್ದೇವು. ಆದರೂ ಕೂಡ ಐದನೇ ನೋಟಿಫಿಕೇಶನ್ ಹೊರಡಿಸಿದ್ದಾರೆ. ಹೀಗಾಗಿ ಕ್ಯಾಬಿನೆಟ್ ನಲ್ಲೂ ಇದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.
ದಿನಾಂಕ 25 ಅಥವಾ 26 ರಂದು ಮುಖ್ಯಮಂತ್ರಿ ಬೊಮ್ಮಾಯಿ ಅವರ ನೇತೃತ್ವದಲ್ಲಿ ಪಶ್ಚಿಮ ಘಟ್ಟದ ಶಾಸಕರ ನಿಯೋಗದಿಂದ ಕೇಂದ್ರದ ಪರಿಸರ ಸಚಿವರ ಭೇಟಿ ಮಾಡಿ, ಈ ವರದಿ ಅವೈಜ್ಞಾನಿಕವಾಗಿದೆ ಇದನ್ನು ಕೈ ಬಿಡುವಂತೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು.