GST: ಬಡವರ ಮೇಲೆ ಮತ್ತೊಂದು ಬರೆ ಎಳೆದ ಮೋದಿ ಸರ್ಕಾರ; ಆಹಾರ ಧಾನ್ಯಗಳ ಮೇಲಿನ ಜಿಎಸ್ಟಿಗೆ ಸಿದ್ದರಾಮಯ್ಯ ಟೀಕೆ
ಮೋದಿ ಸರ್ಕಾರ ಬಡ, ಮಧ್ಯಮ ವರ್ಗದ ಜನರ ರಕ್ತ ಹೀರುತ್ತಿದೆ. ಇದಕ್ಕೆ ಕರ್ನಾಟಕ ಬಿಜೆಪಿ ಸರ್ಕಾರ ಸಾಥ್ ನೀಡಿದೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದರು.
ಬೆಂಗಳೂರು: ಅಚ್ಚೇದಿನ್ ಅಂತಾ ಹೇಳಿಕೊಂಡು ಬಂದು, ಇವತ್ತು ಎಲ್ಲಾ ಅಗತ್ಯ ವಸ್ತುಗಳ ಬೆಲೆ ಜಾಸ್ತಿ ಮಾಡಿ ಮೋಸ ಮಾಡಿದ್ದಾರೆ. ಇವತ್ತಿನಿಂದ ಜಿಎಸ್ಟಿ (GST) ಕೂಡ ಹೆಚ್ಚಳ ಮಾಡಿದ್ದಾರೆ. ಮೊಸರು, ಮಜ್ಜಿಗೆ, ಲಸ್ಸಿ, ಝೀರೋ ಜಿಎಸ್ಟಿ ಇತ್ತು. ಆದರೆ ಅದಕ್ಕೆ ಶೇಕಡಾ 5ರಷ್ಟು ಜಿಎಸ್ಟಿ ಹಾಕಿದ್ದಾರೆ ಎಂದು ನಗರದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಆರೋಪಿಸಿದರು. ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ಬೆಲೆ ಏರಿಕೆ ಆಗಿತ್ತು. ಈಗ ಅಗತ್ಯ ವಸ್ತುಗಳ ಮೇಲೆ ಶೇ.5ರಷ್ಟು ಜಿಎಸ್ಟಿ ಹಾಕಿದೆ. ಬಡವರ ಮೇಲೆ ಮತ್ತೊಂದು ಬರೆ ಹಾಕುವ ಕೆಲಸ ಮಾಡಿದೆ. ಮೋದಿ ಸರ್ಕಾರ ಬಡ, ಮಧ್ಯಮ ವರ್ಗದ ಜನರ ರಕ್ತ ಹೀರುತ್ತಿದೆ. ಇದಕ್ಕೆ ಕರ್ನಾಟಕ ಬಿಜೆಪಿ ಸರ್ಕಾರ ಸಾಥ್ ನೀಡಿದೆ. ಬೆಲೆ ಏರಿಕೆಯಿಂದ ಸಾಮಾನ್ಯ ಜನ ಹೇಗೆ ಜೀವನ ನಡೆಸಬೇಕು ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ಇದನ್ನೂ ಓದಿ: ಮಂಡ್ಯದ ಐಬಿಯಲ್ಲಿ ಕುಳಿತು ಸ್ಥಳೀಯ ನಾಯಕರನ್ನು ತಮ್ಮ 75ನೇ ಹುಟ್ಟುಹಬ್ಬಕ್ಕೆ ಆಹ್ವಾನಿಸಿದರು ಸಿದ್ದರಾಮಯ್ಯ!
ಒಂದು ಸಾವಿರ ಬಾಡಿಗೆ ಇರುವ ಹೋಟೆಲ್ ಕೊಠಡಿಗಳಿಗೆ 12 ಪರ್ಸೆಂಟ್, ಸೋಲಾರ್ ಬಳಸುವ ಮಧ್ಯಮ ವರ್ಗದವರಿಗೆ 5 ಪರ್ಸೆಂಟ್ನಿಂದ 12 ಪರ್ಸೆಂಟ್, ಎಲ್ಇಡಿ ಬಲ್ಬ್ಗಳಿಗೆ 12 ರಿಂದ 18 ಪರ್ಸೆಂಟ್, ಬ್ಯಾಂಕ್ ಚೆಕ್ ಬುಕ್ಗಳಿಗೆ ಜೀರೋ ನಿಂದ 18 ಪರ್ಸೆಂಟ್, ಹಣ್ಣ ತರಕಾರಿ ಬೇರ್ಪಡಿಸಲು 5 ರಿಂದ 18 ಪರ್ಸೆಂಟ್, ಪಂಪ್ ಮೋಟಾರ್ಗಳಿಗೆ 12 ರಿಂದ 18 ಪರ್ಸೆಂಟ್, ಇಟ್ಟಿಗೆ ತಯಾರಿಸಲು 5 ರಿಂದ 12 ಪರ್ಸೆಂಟ್, ಮಕ್ಕಳು ವಿಧ್ಯಾಬ್ಯಾಸಕ್ಕೆ ಬಳಸುವ ಭೂಪಟಗಳು ಜೀರೋನಿಂದ 12 ಪರ್ಸೆಂಟ್ ಇದು ಇವತ್ತಿನಿಂದ ಜಾರಿಗೆ ತರ್ತಿದ್ದಾರೆ. ಶ್ರೀಮಂತರ ತೆರಿಗೆ 30 ಪರ್ಸೆಂಟ್ನಿಂದ 22ಕ್ಕೆ ಇಳಿಸಿದ್ದೀರಿ. ಆದರೆ ಬಡವರು ಮಧ್ಯಮವರ್ಗದವರು ಬಳಸುವ ವಸ್ತುಗಳ ಬೆಲೆ ಜಾಸ್ತಿ ಮಾಡಿದ್ದೀರಾ ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿಯವರು 8 ವರ್ಷಗಳ ಸಾಧನೆ ಮಾಡಿದರೆ, ಬೊಮ್ಮಾಯಿ 1 ವರ್ಷದ ಸಾಧನೆ ಅಂತಾ ಮಾಡುತ್ತಿದ್ದಾರೆ. ನಿರುದ್ಯೋಗ, ಬೆಲೆ ಏರಿಕೆ ರಸಗೊಬ್ಬರಗಳ ಬೆಲೆ ಏರಿಕೆ ಮಾತಾಡಲ್ಲ. ಇವರು ಜಿಎಸ್ಟಿ ಮಾಡಿದರೆ ಸಣ್ಣ ಮತ್ತು ಗುಡಿ ಕೈಗಾರಿಕೆಗಳು ಬದುಕುತ್ತಾವಾ. ಆಗ ಗ್ರಾಹಕ ಖರೀದಿ ಮಾಡಲ್ಲ ಅದರಿಂದ ಸಣ್ಣ ಕೈಗಾರಿಕೆ ಮುಚ್ಚು ಹೋಗುತ್ತವೆ. ಎಂಎಸ್ ಎಂಇಗಳು 10 ಕೋಟಿ ಉದ್ಯೋಗ ಕೊಡುತ್ತಿವೆ. ಈಗ 2.5 ಕೋಟಿ ಕೊಡುತ್ತವೆ. 2019 ರಲ್ಲಿ ರೈಲ್ವೇ ಇಲಾಖೆಯಲ್ಲಿ ಸಿ ಅಂಡ್ ಡಿ ಗ್ರೂಪ್ಗೆ ಕರೆದಿದ್ರು. ಆಗ ಪಿಹೆಚ್ಡಿಯಿಂದ ಹಿಡಿದು ಎಸ್ಎಸ್ಎಲ್ಸಿ ಓದಿದ ಸುಮಾರು 1 ಕೋಟಿ 26 ಲಕ್ಷ ಅರ್ಜಿ ಹಾಕಿದ್ರು. ಕೇವಲ 31 ಸಾವಿರ ಪೋಸ್ಟ್ಗಳಿಗೆ ಅಷ್ಟೊಂದು ಮಂದಿ ಹಾಕಿದ್ರು. ಈ ಬಿಜೆಪಿಯವರು ಒಂದು ಕಡೆ ಬೆಲೆ ಏರಿಕೆ ಮಾಡಿ ಜನರ ಜೀವನ ಹಸ್ತವ್ಯಸ್ತ ಮಾಡುತ್ತಿದ್ದಾರೆ. ಜೊತೆಗೆ ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿದ್ದಾರೆ ಎಂದು ಹೇಳಿದರು.