ಬೆಂಗಳೂರು, ಸೆಪ್ಟೆಂಬರ್ 17: ನೂರಾರು ಸಮಸ್ಯೆಗಳನ್ನು ಹೊತ್ತು ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಬರುವ ಜನರಿಗೆ ಇದೀಗ ನಾಯಿ ಕಾಟ ಶುರುವಾಗಿದೆ. ಫ್ರೀಡಂ ಪಾರ್ಕ್ನಲ್ಲಿ ಬೀಡುಬಿಟ್ಟಿರುವ ಶ್ವಾನಪಡೆ, ಪ್ರತಿಭಟನೆಗೆ ಬಂದವರಿಗೆ ಭಯ ಹುಟ್ಟಿಸುತ್ತಿದೆ. ಮೊದಲೇ ಮೂಲಸೌಕರ್ಯ ಇಲ್ಲದೇ ಕಂಗಾಲಾಗಿದ್ದ ಜನರಿಗೆ ಇದೀಗ ನಾಯಿ ಕಾಟ ಕೂಡ ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಪ್ರತಿಭಟನೆಗೆ ಬರುವ ಜನರು ಫ್ರೀಡಂ ಪಾರ್ಕ್ ಒಳಗೆ ಎಂಟ್ರಿಯಾದರೆ ಸಾಕು, ಗುಂಪು ಗುಂಪಾಗಿ ಶ್ವಾನಪಡೆ ಅತ್ತ ಬರುತ್ತದೆ. ಇದಕ್ಕೆ ಹೆದರಿರುವ ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಫ್ರೀಡಂ ಪಾರ್ಕ್ನ ಶಿಲ್ಪಕಲೆ ಗ್ಯಾಲರಿ ಬೀದಿನಾಯಿಗಳ ಅಡ್ಡೆಯಾಗಿದ್ದು, ಓಲ್ಡ್ ಸೆಂಟ್ರಲ್ ಜೈಲನ್ನ ನೋಡಲು ಬರುವ ಪ್ರವಾಸಿಗರಿಗೂ ಬೀದಿನಾಯಿಗಳ ಭಯ ಶುರುವಾಗಿದೆ. ಎಲ್ಲೆಂದರಲ್ಲಿ ಮಲಗಿ ನಿದ್ದೆ ಮಾಡುತ್ತಿರುವ ಶ್ವಾನಪಡೆ, ಪಾರ್ಕ್ ಸುತ್ತಮುತ್ತ ಯಾರಾದರೂ ಕಾಣಿಸಿಕೊಂಡ್ರೆ ಗ್ಯಾಂಗ್ ಕಟ್ಟಿಕೊಂಡು ಸುತ್ತುವರಿದು ಭಯಪಡಿಸುತ್ತಿವೆ. ಇದು ಜನರಿಗೆ ಓಡಾಡಲೂ ಭಯ ಹುಟ್ಟುವಂತೆ ಮಾಡಿದೆ. ಇತ್ತ ರಾಜಧಾನಿಯ ಬೀದಿನಾಯಿಗಳ ಕಾಟವನ್ನು ಕಂಡು ಸುಸ್ತಾದ ಜನರು ಬೀದಿನಾಯಿಗಳಿಗೆ ಬಿಬಿಎಂಪಿ ಕಡಿವಾಣ ಹಾಕಲಿ ಎಂದು ಆಗ್ರಹಿಸುತ್ತಿದ್ದಾರೆ.
ಒಟ್ಟಿನಲ್ಲಿ ಬೀದಿನಾಯಿಗಳಿಂದ ಅದೆಷ್ಟೋ ಅವಾಂತರ ಸೃಷ್ಟಿಯಾದರೂ ಪಾಲಿಕೆಯ ಪಶುಪಾಲನಾ ವಿಭಾಗ ಮಾತ್ರ ಹೆಲ್ಪ್ಲೈನ್ ಆರಂಭ ಮಾಡಿದ್ದು ಬಿಟ್ಟರೆ ಹೆಚ್ಚಿನದ್ದೇನೂ ಮಾಡಿಲ್ಲ ಎಂಬುದು ಸಾರ್ವಜನಿಕರ ಆರೋಪ. ಇದರಿಂದಾಗಿ ರಾಜಧಾನಿಯ ಬೀದಿನಾಯಿಗಳ ಕಾಟಕ್ಕೆ ಬ್ರೇಕ್ ಬೀಳದಂತಾಗಿದೆ. ಸದ್ಯ ಬೇರೆ ಬೇರೆ ಊರುಗಳಿಂದ ಬೆಂಗಳೂರಿಗೆ ಬರುವ ಜನರಿಗೂ ಇದೀಗ ಬೌಬೌ ಗ್ಯಾಂಗ್ ಭೀತಿ ಶುರುವಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಬೀದಿನಾಯಿಗಳ ಕಾಟ: ಟಿವಿ9 ಅಭಿಯಾನ ಬೆನ್ನಲ್ಲೇ ಸಹಾಯವಾಣಿ ಬಿಡುಗಡೆ ಮಾಡಿದ ಬಿಬಿಎಂಪಿ
ಬೆಂಗಳೂರಿನ ಬೀದಿನಾಯಿಗಳ ಕಾಟದ ಬಗ್ಗೆ ‘ಟಿವಿ9’ ಕಳೆದ ಕೆಲವು ದಿನಗಳಿಂದ ನಿರಂತರ ವರದಿ ಮಾಡಿತ್ತು. ಪರಿಣಾಮವಾಗಿ ಕೆಲವು ದಿನಗಳ ಹಿಂದೆ ಬಿಬಿಎಂಪಿ ಪಶುಪಾಲನಾ ವಿಭಾಗದ ಮೂಲಕ ಬೀದಿನಾಯಿ ಕಡಿತ ಪ್ರಕರಣಗಳ ನಿರ್ವಹಣೆಗೆ ಹೆಲ್ಪ್ ಲೈನ್ ಬಿಡುಗಡೆ ಮಾಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ