ಬೆಂಗಳೂರಲ್ಲಿ ಮೂರುವರೆ ಗಂಟೆಗೆ ಒಂದು ಆತ್ಮಹತ್ಯೆ: ಬೆಚ್ಚಿ ಬೀಳಿಸುವಂತಿದೆ ಅಂಕಿ-ಅಂಶ

ಬೆಂಗಳೂರಿನಲ್ಲಿ ಆತ್ಮಹತ್ಯೆ ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಏರಿಕೆ ಕಂಡಿವೆ. ಪ್ರತೀ ಮೂರೂವರೆ ಗಂಟೆಗೆ ಒಂದು ಸಾವು ಸಂಭವಿಸುತ್ತಿದ್ದು, ಮಾನಸಿಕ ಆರೋಗ್ಯ ಸಮಸ್ಯೆಗಳು, ಕುಟುಂಬ ಕಲಹ, ಆರ್ಥಿಕ ಸಂಕಷ್ಟ ಹಾಗೂ ಸಂಬಂಧಗಳ ಬಿಕ್ಕಟ್ಟು ಪ್ರಮುಖ ಕಾರಣಗಳಾಗಿವೆ. ಕಳೆದ ನಾಲ್ಕು ವರ್ಷಗಳಲ್ಲಿ 9,450ಕ್ಕೂ ಹೆಚ್ಚು ಆತ್ಮಹತ್ಯೆಗಳು ದಾಖಲಾಗಿವೆ.

ಬೆಂಗಳೂರಲ್ಲಿ ಮೂರುವರೆ ಗಂಟೆಗೆ ಒಂದು ಆತ್ಮಹತ್ಯೆ: ಬೆಚ್ಚಿ ಬೀಳಿಸುವಂತಿದೆ ಅಂಕಿ-ಅಂಶ
ಸಾಂದರ್ಭಿಕ ಚಿತ್ರ
Image Credit source: Google

Updated on: Feb 11, 2026 | 4:06 PM

ಬೆಂಗಳೂರು, ಫೆಬ್ರವರಿ 11: ಐಟಿ ಸಿಟಿ ಬೆಂಗಳೂರಲ್ಲಿ ಆತ್ಮಹತ್ಯೆ ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಏರಿಕೆ ಕಾಣುತ್ತಿದ್ದು, ಅಂಕಿ-ಅಂಶಗಳು ಬೆಚ್ಚಿಬೀಳಿಸುವಂತಿವೆ. ವರದಿಗಳ ಪ್ರಕಾರ, ನಗರದಲ್ಲಿ ಸರಾಸರಿ ಮೂರುವರೆ ಗಂಟೆಗೆ ಒಂದು ಆತ್ಮಹತ್ಯೆ ನಡೆಯುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 9,450 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, ವರ್ಷಕ್ಕೆ ಸರಾಸರಿ ಎರಡು ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಗೃಹ ಇಲಾಖೆಯ ಮಾಹಿತಿಯಂತೆ, ಪ್ರತಿದಿನವೂ ಸುಮಾರು ಆರುರಿಂದ ಏಳು ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ.

ಬೆಂಗಳೂರಲ್ಲಿ ನಡೆದ ಆತ್ಮಹತ್ಯೆ ಕೇಸ್​​ಗಳ ಅಂಕಿ-ಅಂಶ

ವರ್ಷ ಪ್ರಕರಣಗಳ ಸಂಖ್ಯೆ
2022 2,370
2023 2,313
2024 2,403
2025 2,300+

ಇದನ್ನೂ ಓದಿ: ಬೆಂಗಳೂರಿನಲ್ಲಿ ಶಾಲಾ ಬಸ್​ ಹರಿದು ಮಕ್ಕಳಿಬ್ಬರು ಸಾವು; ಹಾಲು ತರಲು ಹೊರಟ್ಟಿದ್ದವರು ದುರಂತ ಅಂತ್ಯ

ಆತ್ಮಹತ್ಯೆ ಪ್ರಕರಣ ಏರಿಕೆಗೆ ಕಾರಣಗಳೇನು?

ತಜ್ಞರ ಅಭಿಪ್ರಾಯದಂತೆ, ಮಾನಸಿಕ ಆರೋಗ್ಯ ಸಮಸ್ಯೆಗಳು, ಕುಟುಂಬ ಕಲಹಗಳು, ಆರ್ಥಿಕ ಸಂಕಷ್ಟ, ಸಂಬಂಧಗಳ ಭಂಗ ಹಾಗೂ ಭಾವನಾತ್ಮಕ ಒತ್ತಡಗಳು ಆತ್ಮಹತ್ಯೆ ಕೇಸ್​​ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿವೆ. ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (NIMHANS) ನೀಡಿದ ಮಾಹಿತಿಯಂತೆ, ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಸುಮಾರು ಮೂರನೇ ಒಂದು ಭಾಗ ಜನರಿಗೆ ಮಾನಸಿಕ ಅಸ್ವಸ್ಥತೆಗಳ ಹಿನ್ನೆಲೆ ಇದೆ. ಉಳಿದವರಲ್ಲಿ ಆರ್ಥಿಕ ಸಮಸ್ಯೆಗಳು, ರಿಲೇಶನ್​​ಸೀಪ್​​ ಬ್ರೇಕಪ್​​ ಹಾಗೂ ತೀವ್ರ ಭಾವನಾತ್ಮಕ ಒತ್ತಡ ಪ್ರಮುಖ ಕಾರಣಗಳಾಗಿವೆ.

ನಗರದಲ್ಲಿ ನಡೆದ ಬಹುತೇಕ ಆತ್ಮಹತ್ಯೆ ಪ್ರಕರಣಗಳನ್ನು ಗಮನಿಸಿದಾಗ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟವರ ಸಂಖ್ಯೆಯೇ ಬಹಳ ದೊಡ್ದದಿದೆ. ಒಟ್ಟು ಪ್ರಕರಣಗಳಲ್ಲಿ ಶೇಕಡಾ 86ರಷ್ಟು ಮಂದಿ ಪ್ರಾಣ ಕಳೆದುಕೊಳ್ಳಲು ಈ ವಿಧಾನವನ್ನೇ ಆಯ್ದುಕೊಂಡಿದ್ದಾರೆ. ವಿಷ ಸೇವನೆ ಮತ್ತು ಎತ್ತರದ ಕಟ್ಟಡಗಳಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಕೇಸ್​​ಗಳು ನಂತರದ ಸ್ಥಾನದಲ್ಲಿವೆ. ರೈಲು ಹಳಿಗಳ ಮೇಲೆ ಜಿಗಿಯುವುದು, ಬೆಂಕಿಯಿಂದ ಸುಟ್ಟುಕೊಂಡು ಮೃತಪಟ್ಟ ಪ್ರಕರಣಗಳೂ ಹೆಚ್ಚಿವೆ ಎನ್ನಲಾಗಿದೆ.

ಸಹಾಯವಾಣಿ ಆರಂಭ

ಆತ್ಮಹತ್ಯೆ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, NIMHANS ವತಿಯಿಂದ ಟೆಲಿ-ಮನಸ್ (Tele-MANAS) ಹೆಲ್ಪ್‌ಲೈನ್ ಆರಂಭಿಸಲಾಗಿದೆ. ಆತ್ಮಹತ್ಯೆ ಯೋಚನೆಗಳು ಅಥವಾ ಮಾನಸಿಕ ಸಂಕಷ್ಟ ಎದುರಿಸುತ್ತಿರುವವರು ತಕ್ಷಣ ಸಹಾಯಕ್ಕಾಗಿ 14416 / 1800-891-4416 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಟೈಮ್ಸ್​​ ನೌ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 4:05 pm, Wed, 11 February 26