ಆನೇಕಲ್: ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿ ಟೋಲ್ ಬಳಿ ಎಸ್ಯುವಿ ಕಾರು ಡಿಕ್ಕಿಯಾಗಿ ಅಪರಿಚಿತ ಪಾದಚಾರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹೊಸೂರು ಮುಖ್ಯ ರಸ್ತೆಯ ಅತ್ತಿಬೆಲೆ ಟೋಲ್ ಬಳಿ (attibele toll gate) ಎಸ್ಯುವಿ ಕಾರು ಡಿಕ್ಕಿಯಾಗಿ ಪಾದಚಾರಿ (pedestrian) ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಎಸ್ಯುವಿ ಕಾರು ಮತ್ತು ಅದರ ಚಾಲಕನನ್ನು ಅತ್ತಿಬೆಲೆ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸುಮಾರು 30 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ರಸ್ತೆ ದಾಟುವ ವೇಳೆ ಮಹೀಂದ್ರಾ ಎಸ್ಯುವಿ ಕಾರಿಗೆ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ. KA-03 NK-6988 ನಂಬರಿನ ಮಹೀಂದ್ರಾ ಎಸ್ ಯುವಿ ಕಾರು ಇದಾಗಿದೆ. ಕಾರು ಡಿಕ್ಕಿ (SUV Car Accident) ಹೊಡೆದ ರಭಸಕ್ಕೆ ಪಾದಚಾರಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಹೊಸೂರು: ಗ್ರಾಮಕ್ಕೆ ನುಗ್ಗಿದ 10 ಅಡಿ ಉದ್ದದ ಹೆಬ್ಬಾವು -ಗ್ರಾಮಸ್ಥರು ಶಾಕ್
ತಮಿಳುನಾಡು (ಹೊಸೂರು): ಹೊಸೂರು ಸಮೀಪದ ಸೂಳಗಿರಿ ಪಟ್ಟಣದ ತೆಕ್ಕಪಲ್ಲಿ ಗ್ರಾಮಕ್ಕೆ 10 ಅಡಿ ಉದ್ದದ ಹೆಬ್ಬಾವು ನುಗ್ಗಿದೆ. ಇದನ್ನು ಕಂಡು ಗ್ರಾಮಸ್ಥರು ಶಾಕ್ ಆಗಿದ್ದಾರೆ. ಕೊನೆಗೆ ಗ್ರಾಮಸ್ಥರು ಹೆಬ್ಬಾವನ್ನು ಹಿಡಿದು ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಪಂಚಾಯತ್ ಯೂನಿಯನ್ ಪ್ರಾಥಮಿಕ ಶಾಲೆ ಬಳಿ ಹೆಬ್ಬಾವು ಆಗಾಗ ಕಾಣಿಸಿಕೊಂಡಿದೆ ಎಂದು ಕೆಲ ಗ್ರಾಮಸ್ಥರು ಈಗ ಹೇಳಿದ್ದಾರೆ. ಹೆಬ್ಬಾವು ಈ ಹಿಂದೆ, ಶಾಲಾ ಮಕ್ಕಳಿಗೂ ಹಲವು ಬಾರಿ ಕಾಣಿಸಿಕೊಂಡಿತ್ತು, ಮಕ್ಕಳ ಭಯ ಹೋಗಲಾಡಿಸಲು ಅರಣ್ಯ ಇಲಾಖೆ ಮುಂದಾಗಬೇಕು ಎಂದೂ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದರು. ಆದರೆ ಅರಣ್ಯಾಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಸ್ಥಳೀಯ ಯುವಕರು ತಾವೇ ಹಾವು ಹಿಡಿದು ಇಲಾಖೆಗೆ ಒಪ್ಪಿಸಿದ್ದಾರೆ.
ಕುಡಿದು ಚಿತ್ ಆಗಿ, ಪೆಟ್ರೋಲ್ ಬಂಕ್‌ನಲ್ಲಿ ಕೆಳಗೆ ಬಿದ್ದಿದ್ದ ಕೆಇಬಿ ನೌಕರ: ಹಿಂಬಾಲಿಸಿ ಬಂದು ಆತನಿಂದ 11 ಲಕ್ಷ ಎಗರಿಸಿದರು!
ಹಾಸನ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬರು ಪೆಟ್ರೋಲ್ ಬಂಕ್‌ನಲ್ಲಿ ಹಣ ಇಟ್ಟು, ಕೆಳಗೆ ಬಿದ್ದಿದ್ದರು. ಆದರೆ ಅವರನ್ನು ಹಿಂಬಾಲಿಸಿ ಬಂದಿದ್ದ ಖದೀಮರು ಅವರಿಂದ 11 ಲಕ್ಷ ರೂಪಾಯಿ ಎಗರಿಸಿ, ಪರಾರಿಯಾಗಿದ್ದರು. ಕೊನೆಗೆ ಅವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಯಾತನಹಳ್ಳಿ ಗ್ರಾಮದ ಪ್ರಸನ್ನ ಹಾಗೂ ಜೋಡಿ ಕೃಷ್ಣಾಪುರ ಗ್ರಾಮದ ಮಂಜುನಾಥ್ ಬಂಧಿತ ಆರೋಪಿಗಳು. ಆರೋಪಿಗಳು ಕೆಇಬಿ ನೌಕರ ಸಂತೋಷ್ ಎಂಬುವವರಿಗೆ ಸೇರಿದ ಹಣವನ್ನು ಎಗರಿಸಿದ್ದರು.
ಕೆಇಬಿ ನೌಕರ ಸಂತೋಷ್ ಜನವರಿ 27 ರಂದು ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಮನೆಗೆ ಹೊರಟಿದ್ದರು. ನಡುವೆ ಹಣದ ಸಮೇತ ಬಾರ್‌ಗೆ ತೆರಳಿ ಕಂಠಪೂರ್ತಿ ಕುಡಿದಿದ್ದರು. ಸಂತೋಷ್ ಬಳಿ ಹಣ ಇರುವುದನ್ನು ಬಾರ್‌ನಲ್ಲಿ ಗಮನಿಸಿದ್ದ ಪ್ರಸನ್ನ, ತನ್ನ ಸ್ನೇಹಿತ ಮಂಜುನಾಥ್‌ಗೆ ಕರೆ ಮಾಡಿ ಸಂತೋಷ್‌ನನ್ನು ಹಿಂಬಾಲಿಸಿದ್ದರು.
ಹಣದ ಸಮೇತ ಪೆಟ್ರೋಲ್ ಹಾಕಿಸಲು ಸಂತೋಷ್ ಹಾಸನದ ಬಿ. ಕಾಟಿಹಳ್ಳಿಯ ಅರಸೀಕೆರೆ ರಸ್ತೆಯ ಪೆಟ್ರೋಲ್ ಬಂಕ್ಗೆ ತೆರಳಿದ್ದ. ಆದರೆ ಕುಡಿದ ಮತ್ತಿನಲ್ಲಿ ಪೆಟ್ರೋಲ್ ಬಂಕ್‌ನಲ್ಲೇ ಹಣ ಇಟ್ಟು, ಕೆಳಗೆ ಬಿದ್ದುಬಿಟ್ಟಿದ್ದ. ಕಂಠಪೂರ್ತಿ ಕುಡಿದಿದ್ದರಿಂದ ಬಂಕ್‌ನಲ್ಲೇ ನಿದ್ರೆಗೆ ಜಾರಿದ್ದ ಸಂತೋಷ್! ಆದರೆ ಆತನನ್ನು ಹಿಂಬಾಲಿಸಿದ್ದ ಕಳ್ಳರು ಪೆಟ್ರೋಲ್ ಬಂಕ್ ಹೊರಗೆ ಕಾಯುತ್ತಿದ್ದರು. ಸುಮಾರು 45 ನಿಮಿಷ ಆದರೂ ಸುಖನಿದ್ರೆಯಲ್ಲಿದ್ದ ಸಂತೋಷ ಪೆಟ್ರೋಲ್ ಬಂಕ್‌ನಿಂದ ಹೊರಗೆ ಬಂದಿರಲಿಲ್ಲ.
ಆಗ ಪ್ರಸನ್ನ ಮತ್ತು ಮಂಜುನಾಥ್ ಬಂಕ್ ಒಳಗೆ ಪ್ರವೇಶಿಸಿದ್ದಾರೆ. ಬಂದವರೇ ಕೆಳಗೆಬಿದ್ದಿದ್ದ ಸಂತೋಷನಿಂದ ಹಣ ಎಗರಿಸಿ ಎಸ್ಕೇಪ್ ಆಗಿದ್ದಾರೆ. ಇಡೀ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಎಚ್ಚೆತ್ತ ಸಂತೋಷ, ಬಡಾವಣೆ ಪೊಲೀಸ್ ಠಾಣೆಗೆ ತೆರಳಿ ಹಿಂಗಿಂಗೆಲ್ಲಾ ಆಯ್ತು ಅಂತಾ ದೂರು ನೀಡಿದ್ದಾನೆ. ಸಿಸಿಟಿವಿ ನೆರವಿನೊಂದಿಗೆ ಪ್ರಕರಣ ಭೇದಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 9,12,000 ಲಕ್ಷ ರೂ ನಗದು, ಎರಡು ಮೊಬೈಲ್ ಹಾಗೂ ಒಂದು ಪಲ್ಸರ್ ಬೈಕ್ ವಶ ಪಡಿಸಿಕೊಂಡಿದ್ದಾರೆ.
Published On - 11:56 am, Sat, 5 February 22