
ಬೆಂಗಳೂರು: ಈ ವಾರಾಂತ್ಯದಲ್ಲಿ ಬೆಂಗಳೂರಿಗರಿಗೆ ಸ್ವಿಗಿ ಆ್ಯಪ್ ಮೂಲಕ ಫುಡ್ ಡೆಲಿವರಿ (Swiggy Delivery App) ಸಿಗುವುದಿಲ್ಲ. ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಸ್ವಿಗಿ ಡೆಲಿವರಿ ಬಾಯ್ಸ್ ಪ್ರತಿಭಟನೆಗೆ ಮುಂದಾಗಿದ್ದಾರೆ. ಬೇಡಿಕೆ ಈಡೇರುವವರೆಗೂ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಘೋಷಿಸಿದ್ದಾರೆ. ಬೆಂಗಳೂರಿನ ಹಲವೆಡೆ ಹೊಟೆಲ್ಗಳ ಮುಂಭಾಗದಲ್ಲಿ ನಿನ್ನೆ ಬೆಳಗ್ಗೆಯಿಂದಲೇ (ಜುಲೈ 22) ಸ್ವಿಗಿ ಡೆಲಿವರಿ ಬಾಯ್ಗಳು ಪ್ರತಿಭಟನೆ ಆರಂಭಿಸಿದ್ದಾರೆ.
ಮೊದಲು ಪ್ರತಿ ಆರ್ಡರ್ಗೆ 8 ರೂಪಾಯಿ ಕೊಡುತ್ತಿದ್ದರು. ಆದರೆ ಈಗ 4 ರೂಪಾಯಿಗೆ ಇಳಿಸಿದ್ದಾರೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು. ಮಲ್ಲೇಶ್ವರಂ, ಸಹಕಾರನಗರ, ಯಲಹಂಕ ಸೇರಿದಂತೆ ನಗರದ ಹಲವೆಡೆ ಪ್ರತಿಭಟನೆ ನಡೆಯುತ್ತಿದೆ.
ರ‍್ಯಾಪಿಡೊ, ಸ್ಯಾಡೊ ಫ್ಯಾಕ್ಸ್ ಥರ್ಡ್ ಪಾರ್ಟಿಗಳಿಗೆ ಅರ್ಡರ್ ಸಿಗುತ್ತಿದೆ. ಸ್ವಿಗಿ ಬಾಯ್ಸ್ಗೆ ಅರ್ಡರ್ ಸಮರ್ಪಕವಾಗಿ ಸಿಗುತ್ತಿಲ್ಲ. ನಮಗೆ ನೀಡಿರುವ ಅರ್ಡರ್ ಟಾರ್ಗೆಟ್ಗಳನ್ನು ಕೂಡಲೇ ತೆಗೆಯಬೇಕು. ಇದರಿಂದ ತುಂಬಾ ಅಪಘಾತಗಳಾಗುತ್ತಿವೆ. ಇನ್ಸ್ಟಾ ಮಾರ್ಟ್ (ಗ್ರಾಸರಿ) ಐಡಿ ತೆಗೆಯಬೇಕು. ಲೇಟ್ ನೈಟ್ ಡೆಲಿವರಿ ಕೊಡುವ ಸಂದರ್ಭದಲ್ಲಿ ಸುರಕ್ಷೆಗೆ ಗಮನ ನೀಡಬೇಕು. ಗ್ರಾಹಕರು ನಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಂಡಾಗಲೂ ನಮ್ಮನ್ನೇ ಹೊಣೆಯಾಗಿಸಿ ದಂಡ ವಿಧಿಸುವ ಕ್ರಮ ನಿಲ್ಲಬೇಕು ಎಂದು ಒತ್ತಾಯಿಸಿದರು.
ನಾವು ಮಾಡಿದ ಕೆಲಸಕ್ಕೆ ಡೆಲಿವರಿ ಚಾರ್ಜಸ್ ಸರಿಯಾಗಿ ಕೊಡುತ್ತಿಲ್ಲ. ಇದು ತಪ್ಪಬೇಕಿದೆ. ಅರ್ಡರ್ ಮತ್ತು ರಿಟರ್ನ್ ಅರ್ಡರ್ಗಳು ಸಮರ್ಪಕವಾಗಿ ಅಪ್ಡೇಟ್ ಆಗಬೇಕು. ಆ್ಯಪ್ನಲ್ಲಿ ರೈನ್ ಚಾರ್ಜ್ (ಮಳೆ ಶುಲ್ಕ) ತೋರಿಸಿದರೂ ನಮಗೆ ಹಣ ಸಿಗುತ್ತಿಲ್ಲ. ತಡರಾತ್ರಿಯಲ್ಲಿ 30 ರೂಪಾಯಿ ಶುಲ್ಕ ಕೊಡುತ್ತಿದ್ದರು. ಈಗ ಅದನ್ನೂ ಕೊಡುತ್ತಿಲ್ಲ. ಇತ್ತೀಚೆಗೆ ನಿಲ್ಲಿಸಿರುವ ತಿಂಗಳ ಇನ್ಸೆಂಟೀವ್ ಅನ್ನು ಮತ್ತೆ ಆರಂಭಿಸಬೇಕು ಎಂದು ಆಗ್ರಹಿಸಿದರು.
ಬ್ಲಾಕ್ ಮಾಡಿರುವ ಐಡಿ ಅಕೌಂಟ್ಗಳನ್ನು ಮತ್ತೆ ತೆರೆಯಬೇಕು. ಮೊಬೈಲ್, ದುಡ್ಡು, ಗಾಡಿ ರಾಬರಿ ಆಗಿದೆ ಅಂತ ಕಂಪ್ಲೇಂಟ್ ಕೊಟ್ಟರೂ ಪೊಲೀಸರು ನಮಗೆ ಸ್ಪಂದಿಸುತ್ತಿಲ್ಲ. ಇತ್ತ ಸ್ವಿಗಿ ಕಂಪನಿಯಿಂದಲೂ ಬೆಂಬಲ ಸಿಗುತ್ತಿಲ್ಲ. ನಮಗೆ ಕಷ್ಟ ಬಂದಾಗ ಪೊಲೀಸರು ಮತ್ತು ಕಂಪನಿ ನಮ್ಮ ಬೆಂಬಲಕ್ಕೆ ಬರಬೇಕು ಎಂದು ಒತ್ತಾಯಿಸಿದರು.
Published On - 12:40 pm, Sat, 23 July 22