ಉದ್ಘಾಟನೆಗೂ ಮುನ್ನ ಕಟ್ಟಡದ ಗೋಡೆಗಳಲ್ಲಿ ನೀರು ಸೋರಿಕೆ; ಕಳಪೆ ಕಾಮಗಾರಿ ನಡುವೆ ಪಾರ್ಕಿಂಗ್ ನಿರ್ವಹಣೆ ಟೆಂಡರ್ ಕರೆದ ಬಿಬಿಎಂಪಿ
ಉದ್ಘಾಟನೆಗೂ ಮುನ್ನ ಪಾರ್ಕಿಂಗ್ ಕಟ್ಟಡದ ಗೋಡೆಗಳಲ್ಲಿ ನೀರು ಸೋರಿಕೆಯಾಗಲು ಪ್ರಾರಂಭವಾಗಿದೆ. ಈ ನಡುವೆ ಪಾರ್ಕಿಂಗ್ ನಿರ್ವಹಣೆಗಾಗಿ ಬಿಬಿಎಂಪಿ ಟೆಂಡರ್ ಕರೆದಿದ್ದು, ನೀರು ಸೋರಿಕೆ ವಿಚಾರ ತಿಳಿದು ಕಂಪನಿಗಳು ಅರ್ಜಿಗಳನ್ನು ಹಿಂಪಡೆದಿವೆ.
ಬೆಂಗಳೂರು: ಉದ್ಘಾಟನೆಗೂ ಮುನ್ನ ಕಟ್ಟಡದ ಗೋಡೆಗಳಲ್ಲಿ ಬಿರುಕು ಕಂಡು ನೀರು ಸೋರಿಕೆಯಾಗಲು ಪ್ರಾರಂಭವಾಗಿರುವುದನ್ನು ನೋಡಿದಾಗ ಬಿಬಿಎಂಪಿ ಕಾಮಗಾರಿ ಗುಣಮಟ್ಟ ಎಷ್ಟಿದೆ ಎಂಬುದನ್ನು ಪ್ರಶ್ನಿಸಬೇಕಿದೆ. ಪಾರ್ಕಿಂಗ್ ಕಟ್ಟಡ ನಿರ್ಮಾಣ ಹಿನ್ನೆಲೆ 80 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಬಹುಮಹಡಿ ಕಟ್ಟಡ ಕಾಮಗಾರಿ ಪೂರ್ಣಗೊಂಡು ತಿಂಗಳುಗಳೇ ಕಳೆದಿವೆ. ಇದೀಗ ಆ ಕಟ್ಟಡದಲ್ಲಿ ಸೋರಿಕೆ ಕಾಣಿಸಿಕೊಂಡಿದ್ದು, ಸೋರಿಕೆ ಆಗುತ್ತಿರುವ ಗೋಡೆಗಳಿಗೆ ಸಿಬ್ಬಂದಿಗಳಿಂದ ತೇಪೆ ಹಚ್ಚುವ ಕೆಲಸ ನಡೆಯುತ್ತಿದೆ.
ಸ್ವಾತಂತ್ರ್ಯ ಉದ್ಯಾನವನ (ಫ್ರೀಡಂ ಪಾರ್ಕ್) ಬಳಿ ಬಹುಮಹಡಿ ಕಟ್ಟಡ ನಿರ್ಮಾಣ ಮಾಡುವ ನಿಟ್ಟಿನಲ್ಲಿ 2015ರಲ್ಲಿ ಬಿಬಿಎಂಪಿ ಟೆಂಡರ್ ಕರೆದಿತ್ತು. ಅದರಂತೆ 80 ಕೋಟಿ ರೂಪಾಯಿಗೆ ಟೆಂಡರ್ ಪಡೆದುಕೊಂಡ ಖಾಸಗಿ ಕಂಪನಿ ಕೆ.ಎಂ.ವಿ ಪಾರ್ಕಿಂಗ್ ಕಟ್ಟಡ ನಿರ್ಮಾಣದ ಕಾಮಗಾರಿ ಆರಂಭಿಸಿತ್ತು. ಹೀಗೆ ಆರಂಭವಾದ ಕಟ್ಟಡ ಕಾಮಗಾರಿ ಕಳೆದ 8 ತಿಂಗಳ ಹಿಂದೆ ಪೂರ್ಣಗೊಂಡಿದ್ದು, ಈವರೆಗೆ ಉದ್ಘಾಟನೆಗೊಂಡಿರಲಿಲ್ಲ. ಈ ನಡುವೆ ಆ ಕಟ್ಟಡದಲ್ಲಿ ಸೋರಿಕೆ ಕಂಡುಬಂದು ಕಳಪೆ ಕಾಮಗಾರಿ ನಡೆದಿರುವುದು ತಿಳಿದುಬಂದಿದೆ.
ಕಾಮಗಾರಿ ಬಾಕಿ ಹಣ ಉಳಿಸಿಕೊಂಡ ಬಿಬಿಎಂಪಿ
ಬಹುಮಹಡಿ ಪಾರ್ಕಿಂಗ್ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಇದೀಗ ಸೋರಿಕೆ ಸಮಸ್ಯೆ ಕಂಡುಬಂದಿರುವ ಸಮಸ್ಯೆ ಒಂದೆಡೆಯಾದರೆ, ಇನ್ನೊಂದೆಡೆ ಬಿಬಿಎಂಪಿಯು ಕಟ್ಟಡ ಕಾಮಗಾರಿಯ ಬಾಕಿ ಹಣವನ್ನು ಉಳಿಸಿಕೊಂಡಿದೆ. ಎಲ್ಲವೂ ಸಿದ್ಧವಾಗಿದೆ ಬಣ್ಣ ಹೊಡೆದು ಕಟ್ಟಡದ ಕೀ ಹಸ್ತಾಂತರ ಒಂದೇ ಬಾಕಿ ಇದೆ. ಆದರೆ ಗುತ್ತಿಗೆದಾರರಿಗೆ ಬಿಬಿಎಂಪಿ ನೀಡಬೇಕಿದ್ದ 30 ಕೋಟಿ ಟೆಂಡರ್ನ ಹಣವನ್ನು ಬಾಕಿ ಇರಿಸಿದೆ. ಹೀಗಾಗಿ ಬಾಕಿ ನೀಡದ ಹೊರತಾಗಿ ನಾವು ಜಾಗ ಖಾಲಿ ಮಾಡಲ್ಲ ಎಂದು ಗುತ್ತಿಗೆದಾರರು ಪಟ್ಟುಹಿಡಿದಿದ್ದಾರೆ.
ಬಾಕಿ ಹಣ ಉಳಿಕೊಂಡಿರುವ ಬಗ್ಗೆ ಮಾತನಾಡಿದ ಕೆ.ಎಂ.ವಿ.ಕಂಪನಿಯ ವಿವೇಕ್, ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ, ಅದರ ಕೆಲಸಗಳು ನಡೆಯುತ್ತಿದೆ. ಪಾಲಿಕೆಯು ನಮಗೆ ಮೊದಲು ಬಾಕಿ ಹಣ ಪಾವತಿ ಮಾಡಲಿ. ಬಾಕಿ ಹಣ ಕೊಡದೇ ನಾವು ಕೀ ಕೊಡುವುದಿಲ್ಲ, ಕೋರ್ಟ್ ಮೊರೆ ಹೋಗುತ್ತೇವೆ ಎಂದು ಹೇಳಿದ್ದಾರೆ.
ಕಳಪೆ ಕಾಮಗಾರಿ ನಡುವೆ ಪಾರ್ಕಿಂಗ್ ನಿರ್ವಹಣೆ ಟೆಂಡರ್ ಕರೆದ BBMP
ಫ್ರೀಡಂಪಾರ್ಕ್ ಬಳಿಯಿರುವ ಬಹುಮಹಡಿ ಪಾರ್ಕಿಂಗ್ ಕಟ್ಟಡದ ಐದು ವರ್ಷಗಳ ಕಾಲ ನಿರ್ವಹಣೆಗಾಗಿ ಬಿಬಿಎಂಪಿಯು ಪಾರ್ಕಿಂಗ್ ನಿರ್ವಹಣೆಯ ಟೆಂಡರ್ ಕರೆದಿದೆ. 2 ಕೋಟಿ ರೂ. ಡೆಪಾಸಿಟ್ ನೀಡಿ 5 ವರ್ಷಗಳ ಕಾಲ ಪಾರ್ಕಿಂಗ್ ನಿರ್ವಹಣೆ ಮಾಡಲು ಟೆಂಡರ್ ಆಹ್ವಾನಿಸಲಾಗಿದ್ದು, 4 ಖಾಸಗಿ ಏಜೆನ್ಸಿ ಕಂಪನಿಗಳು ಅರ್ಜಿ ಸಲ್ಲಿಸಿವೆ. ಆದರೆ ಕಟ್ಟಡದಲ್ಲಿ ನೀರು ಸೋರಿಕೆಯಾಗುತ್ತಿರುವ ವಿಚಾರ ತಿಳಿದು ಕಂಪನಿಗಳು ಅರ್ಜಿಯನ್ನು ವಾಪಸ್ ಪಡೆದುಕೊಂಡಿವೆ.
Published On - 11:41 am, Sat, 23 July 22