ಕೊಡಗು ಜಿಲ್ಲೆಯಲ್ಲಿ ಮತ್ತೆ ಭಾರಿ ಭೂಕುಸಿತ! 18 ಕುಟುಂಬಗಳು ಸ್ಥಳಾಂತರ
ಕೆಸರು ಮಿಶ್ರಿತ ನೀರು ಕೊಚ್ಚಿಕೊಂಡು ಜೋಡುಪಾಲದವರೆಗೂ ಬಂದಿದೆ. ಈ ಹಿನ್ನೆಲೆ ಬೆಟ್ಟದ ತಪ್ಪಲಿನಲ್ಲಿದ್ದ 18 ಕುಟುಂಬಗಳನ್ನ ಸ್ಥಳಾಂತರ ಮಾಡಲಾಗಿದೆ.
ಕೊಡಗು: ಜಿಲ್ಲೆಯಲ್ಲಿ ಮಳೆ (Rain) ನಿಂತರೂ, ಮಳೆ ಅವಾಂತರಗಳು ಇನ್ನು ಕಡಿಮೆ ಆಗಿಲ್ಲ. ಕ್ಷಣ ಕ್ಷಣಕ್ಕೂ ಭೂಕುಸಿತದ (Landslide) ಆತಂಕ ಹೆಚ್ಚಾಗುತ್ತಿದೆ. ಇಂದು (ಜುಲೈ 23) ಮಡಿಕೇರಿ ತಾಲೂಕಿನ ಮದೆನಾಡು ಸಮೀಪದ ಸೀಮೆಹುಲ್ಲುಕಜೆ ಬೆಟ್ಟದಲ್ಲಿ ಭೂಕುಸಿತ ಆಗಿದ್ದು, ಭೂಮಿಯೊಳಗೆ ಭಾರಿ ಶಬ್ದದೊಂದಿಗೆ ಕೆಸರು ಕೊಚ್ಚಿ ಬಂದಿದೆ. ಕೆಸರು ಮಿಶ್ರಿತ ನೀರು ಕೊಚ್ಚಿಕೊಂಡು ಜೋಡುಪಾಲದವರೆಗೂ ಬಂದಿದೆ. ಈ ಹಿನ್ನೆಲೆ ಬೆಟ್ಟದ ತಪ್ಪಲಿನಲ್ಲಿದ್ದ 18 ಕುಟುಂಬಗಳನ್ನ ಸ್ಥಳಾಂತರ ಮಾಡಲಾಗಿದೆ. ದಟ್ಟ ಮಂಜುಕವಿದ ವಾತಾವರಣದ ನಡುವೆ ಭೂಕುಸಿತದ ತೀವ್ರತೆ ಗೋಚರಿಸಿದ್ದು, ಮದೆನಾಡು, ಜೋಡುಪಾಲ, ಮೊಣ್ಣಂಗೇರಿ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.
ಇನ್ನು ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿಯ ಮೊಗಳ್ಳಿಯಲ್ಲಿ ಪ್ರವಾಹದಿಂದ ಲಕ್ಷಾಂತರ ರೂ. ಸಾಲ ಮಾಡಿ ಬೆಳೆದಿದ್ದ ಬೆಳೆ ನೀರುಪಾಲಾಗಿದೆ. ಭತ್ತ, ಅನಾನಸ್, ಜೋಳ, ಕಬ್ಬು, ಮೆಕ್ಕೆಜೋಳ ಬೆಳೆ ನಾಶವಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ರೈತರು ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಉದ್ಘಾಟನೆಗೂ ಮುನ್ನ ಕಟ್ಟಡದ ಗೋಡೆಗಳಲ್ಲಿ ನೀರು ಸೋರಿಕೆ; ಕಳಪೆ ಕಾಮಗಾರಿ ನಡುವೆ ಪಾರ್ಕಿಂಗ್ ನಿರ್ವಹಣೆ ಟೆಂಡರ್ ಕರೆದ ಬಿಬಿಎಂಪಿ
ಮನೆಗಳಿಗೆ ನುಗ್ಗಿದ ನೀರು: ಬೀದರ್ನಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಬೀದರ್ನ ಓಂನಗರ ಬಡಾವಣೆ ಸಂಪೂರ್ಣ ರಸ್ತೆ ಜಲಾವೃತವಾಗಿದ್ದು, 10ಕ್ಕೂ ಹೆಚ್ಚು ಕುಟುಂಬಗಳು ಹೊರಗೆ ಬಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ತಗ್ಗು ಪ್ರದೇಶದ 4-5 ಮನೆಗಳಿಗೆ ನೀರು ನುಗ್ಗಿದೆ. ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆ ಶಾಲೆಗಳಿಗೆ ರಜೆ ನೀಡಲಾಗಿದೆ. ಅಂಗನವಾಡಿ, 1-5ನೇ ತರಗತಿವರೆಗಿನ ಶಾಲೆಗೆ ರಜೆ ನೀಡಿ ಬೀದರ್ ಡಿಸಿ ಗೋವಿಂದರೆಡ್ಡಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಫೋನ್ ಕಳೆದುಕೊಂಡರೆ ಅದರಲ್ಲಿದ್ದ ಫೋನ್ ಪೇ, ಗೂಗಲ್ ಪೇ ಅಕೌಂಟ್ ಬ್ಲಾಕ್ ಮಾಡುವುದು ಹೇಗೆ?
Published On - 11:46 am, Sat, 23 July 22