ಮೊದಲು ಕೆಲಸ ಮಾಡಿ, 224 ಅಭ್ಯರ್ಥಿಗಳೂ ಸಿಎಂ ಕ್ಯಾಂಡಿಡೇಟ್ಗಳೇ: ಜಮೀರ್ ಅಹಮದ್ಗೆ ಡಿಕೆಶಿ ತಾಕೀತು
ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವ ಬಗ್ಗೆ ಜಮೀರ್ ಅಹಮದ್ ಹೇಳಿಕೆಯು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಿಟ್ಟು ತರಿಸಿದೆ.
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಘಟಕದಲ್ಲಿ ಭವಿಷ್ಯದ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆ ಗರಿಗೆದರಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ (DK Shivakumar) ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಗಳ ರೇಸ್ನಲ್ಲಿದ್ದಾರೆ. ಚುನಾವಣೆ ನಡೆಯುವ ವರ್ಷದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದವರನ್ನೇ (KPCC President) ಮುಖ್ಯಮಂತ್ರಿ ಸ್ಥಾನಕ್ಕೆ ತರುವುದು ಕಾಂಗ್ರೆಸ್ನ ರೂಢಿ. ಡಿ.ಕೆ.ಶಿವಕುಮಾರ್ ಅವರು ಇದನ್ನೇ ನೆಚ್ಚಿಕೊಂಡು ಮುಖ್ಯಮಂತ್ರಿ ಗಾದಿಯ ಕನಸು ಕಾಣುತ್ತಿದ್ದಾರೆ. ಆದರೆ ಈ ಹಿಂದೆ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದ ಮತ್ತು ಹಿಂದುಳಿದ ವರ್ಗಗಳಲ್ಲಿ ವ್ಯಾಪಕ ಜನಬೆಂಬಲ ಹೊಂದಿರುವ ಸಿದ್ದರಾಮಯ್ಯ (Siddaramiah) ಸಹ ತಾವು ಮತ್ತೊಮ್ಮೆ ಸಿಎಂ ಆಗಬೇಕು ಎನ್ನುವ ಆಸೆಯನ್ನು ಮುಚ್ಚುಮರೆಯಿಲ್ಲದೆ ವ್ಯಕ್ತಪಡಿಸುತ್ತಲೇ ಇದ್ದಾರೆ.
ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಬೇಕಿದ್ದ ಇಬ್ಬರು ನಾಯಕರ ನಡುವೆ ನಡೆಯುತ್ತಿರುವ ಹಗ್ಗಜಗ್ಗಾಟದಲ್ಲಿ ಸಹಜವಾಗಿಯೇ ಇತರ ನಾಯಕರೂ ಬೇಳೆಬೇಯಿಸಿಕೊಳ್ಳಲು ಮುಂದಾಗಿದ್ದು ದಿನಕ್ಕೊಬ್ಬರು ಒಂದೊಂದು ರೀತಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಚಾಮರಾಜಪೇಟೆ ಶಾಸಕ ಬಿ.ಝೆಡ್.ಜಮೀರ್ ಅಹಮದ್ ಖಾನ್ ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವ ಅವರ ಹೇಳಿಕೆಯು ಸಹಜವಾಗಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಿಟ್ಟು ತರಿಸಿದೆ.
‘ಚುನಾವಣೆ ಫಲಿತಾಂಶಕ್ಕೆ ಮುನ್ನವೇ ನಾನು ಸಿಎಂ, ನಾನು ಸಿಎಂ ಎಂದು ಹೇಳುವುದು ಸರಿಯಲ್ಲ. ಕರ್ನಾಟಕದ ಮುಖ್ಯಮಂತ್ರಿ ಯಾರಾಗಬೇಕು ಎಂಬುದು ಮೈಸೂರು, ಬೆಂಗಳೂರು ಅಥವಾ ಕಲಬುರ್ಗಿಯಲ್ಲಿ ತೀರ್ಮಾನವಾಗುವುದಿಲ್ಲ. ಪಕ್ಷದ ಹೈಕಮಾಂಡ್ ಅದನ್ನು ತೀರ್ಮಾನ ಮಾಡುತ್ತದೆ’ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಫಲಿತಾಂಶ ಪ್ರಕಟವಾದ ನಂತರ ಅಂದಿನ ಅವತ್ತಿನ ರಾಜಕೀಯ ಪರಿಸ್ಥಿತಿ ಆಧಾರದ ಮೇಲೆ ಹೈಕಮಾಂಡ್ ಯಾರಿಗೆ ನಾಯಕತ್ವಕ್ಕೆ ಕೊಡಬೇಕು ಎಂಬುದನ್ನು ತೀರ್ಮಾನ ಮಾಡುತ್ತದೆ. ಕಾಂಗ್ರೆಸ್ಗೆ ಸಾಮೂಹಿಕ ನಾಯಕತ್ವದಲ್ಲಿ ವಿಶ್ವಾಸವಿದೆ. ಅದು ಯಾವಾಗಲೂ ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆಗೆ ಹೋಗುವುದು. ಈ ಬಾರಿ ಆ ಬಾರಿ ಅಂತಲ್ಲ ನಮ್ಮದು ಯಾವಾಗಲೂ ಸಾಮೂಹಿಕ ನಾಯಕತ್ವ’ ಎಂದು ಹೇಳಿದರು.
ಒಂದು ಹಂತದಲ್ಲಿ ಜಮೀರ್ ಬಗ್ಗೆ ಸಿಟ್ಟಿನಲ್ಲಿ ಪ್ರತಿಕ್ರಿಯಿಸಿದ ಅವರು, ‘ನನ್ನ ಲೆವೆಲ್ಗೆ ಮಾತನಾಡುವವರು ಇದ್ದರೆ ಮಾತನಾಡುತ್ತೇನೆ. ಸುಮ್ಮನೆ ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕು. ಮೊದಲು ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಿ. ನಾನು ಎಲ್ಲರಿಗೂ ಹೇಳುತ್ತಿದ್ದೇನೆ. ಮೊದಲು ನಿಮ್ಮ ಸಮುದಾಯಗಳನ್ನು ಸೆಳೆಯರಿ. ವ್ಯಕ್ತಿ ಪೂಜೆ ಬಿಟ್ಟು ಪಕ್ಷಕ್ಕಾಗಿ ಕೆಲಸ ಮಾಡಿ. ಕಾಂಗ್ರೆಸ್ ಪಕ್ಷಕ್ಕೆ ವಿಧಾನಸಭೆ ಚುನಾವಣೆಗೆ ನಿಲ್ಲುವ ಎಲ್ಲ 224 ಅಭ್ಯರ್ಥಿಗಳೂ ಸಿಎಂ ಅಭ್ಯರ್ಥಿಗಳೇ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕಾಂಗ್ರೆಸ್ ಪಕ್ಷಕ್ಕೆ ಕೋಲಾರದಲ್ಲಿ ಯಾವ ಬಣಗಳೂ ಇಲ್ಲ. ನಾವೆಲ್ಲರೂ ಒಂದಾಗಿ ಸೋನಿಯಾ ಗಾಂಧಿ ರಕ್ಷಣೆಗಾಗಿ ಹೋರಾಟ ಮಾಡುತ್ತಿದ್ದೇವೆ. ಪ್ರತಿಜಿಲ್ಲೆಯಲ್ಲೂ ಮಾಡಬೇಕು ಅಂತಿದ್ದಾರೆ. ಅದಕ್ಕಾಗಿ ಒಂದಾಗಿ ಮಾಡುತ್ತಿದ್ದೇವೆ. ಯಾವುದೇ ಎರಡೆರೆಡು ಬಣವಿಲ್ಲ’ ಎಂದು ಸ್ಪಷ್ಟಪಡಿಸಿದರು.
ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಉದ್ದೇಶ: ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ನ ಇತ್ತೀಚಿನ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ‘ಮೊದಲು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಅದು ನಮ್ಮ ಮುಖ್ಯ ಉದ್ದೇಶ’ ಎಂದು ಹೇಳಿದರು. ರಾಜ್ಯ ರಾಜಕಾರಣಕ್ಕೆ ಮರಳುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಎಲ್ಲರೂ ಸೇರಿ ಅವಕಾಶ ಕೊಟ್ಟರೆ ನೋಡೋಣ’ ಎಂದರು.
ರಾಜಕಾರಣದಿಂದ ಯಡಿಯೂರಪ್ಪ ನಿವೃತ್ತರಾಗುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ’ಅದು ಅವರ ವೈಯಕ್ತಿಕ ನಿರ್ಧಾರ. ಅದರ ಬಗ್ಗೆ ನಾನೇನು ಮಾತನಾಡುವುದಿಲ್ಲ. ಎಲ್ಲರಿಗೂ ಅವರದೇ ಆದ ತೀರ್ಮಾನಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ಇರುತ್ತದೆ. ನಾವು ಯಾರೇ ಇರಲಿ ಬಿಡಲಿ ದೇಶ ಅಂತೂ ಇರುತ್ತದೆ. ನಾನಿಲ್ಲ ಎಂದರೆ ಇನ್ನೊಬ್ಬರು ಬರುತ್ತಾರೆ ಎಂದು ಯಡಿಯೂರಪ್ಪ ಯೋಚನೆ ಮಾಡಿರಬಹುದು’ ಎಂದು ಅಭಿಪ್ರಾಯಪಟ್ಟರು.
ಬೆಳಗಾವಿ: ಕಾಂಗ್ರೆಸ್ನಲ್ಲಿ ಭಿನ್ನಮತ, ಡಿಕೆಶಿ ಮಧ್ಯಪ್ರವೇಶ
ಬೆಳಗಾವಿ: ಜಿಲ್ಲೆಯ ಕಿತ್ತೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದೆ. ತಮ್ಮ ನಾಯಕನನ್ನು ಕಡೆಗಣಿಸಲಾಗುತ್ತಿದೆ ಎಂದು ಆಕ್ಷೇಪಿಸಿ ಮಾಜಿ ಸಚಿವ ಡಿ.ಬಿ.ಇನಾಮದಾರ ಬೆಂಬಲಿಗರು ಕಿತ್ತೂರಿನ ರಾಷ್ಟ್ರೀಯ ಹೆದ್ದಾರಿ 1ರ ಸರ್ವಿಸ್ ರಸ್ತೆಯಲ್ಲಿ ಧರಣಿ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಧರಣಿನಿರತರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅಸಮಾಧಾನಿತ ಕಾರ್ಯಕರ್ತರ ಅಹವಾಲು ಸ್ವೀಕರಿಸಿದರು. ಡಿ.ಬಿ.ಇನಾಮದಾರ ಅವರನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ. ಅವರಿಗೆ ಟಿಕೆಟ್ ಕೈತಪ್ಪಬಹುದು ಎನ್ನುವ ಸಂಶಯವೂ ಇದೆ ಎಂದು ಕಾರ್ಯಕರ್ತರು ದೂರಿದರು.
ಮಾಜಿ ಸಚಿವ ವಿನಯ್ ಕುಲಕರ್ಣಿ ನೇತೃತ್ವದಲ್ಲಿ ಟಿಕೆಟ್ ಹಂಚಿಕೆ ಬಗ್ಗೆ ಸಮಿತಿ ರಚಿಸಲಾಗುವುದು. ಏನೇ ಸಮಸ್ಯೆ, ಅಸಮಾಧಾನ ಇದ್ದರೂ ಬಗೆಹರಿಸುತ್ತೇನೆ. ಬೆಂಗಳೂರಿನಲ್ಲಿ 75ನೇ ಸ್ವಾತಂತ್ರ್ಯ ದಿನ ಆಚರಿಸೋಣ ಬನ್ನಿ. ಬೆಂಗಳೂರು ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಬಂದಿದ್ದೇನೆ ಎಂದು ಸ್ವಾಗತಿಸಿದರು. ಡಿಕೆಶಿ ಭರವಸೆ ಹಿನ್ನೆಲೆಯಲ್ಲಿ ಇನಾಮದಾರ ಬೆಂಬಲಿಗರು ಪ್ರತಿಭಟನೆ ಕೈಬಿಟ್ಟರು.