ಬೆಂಗಳೂರು, ಮೇ 11: ವಿವಿಧ ಕ್ಷೇತ್ರಗಳಲ್ಲಿ ಭಾರತ ಹಾಗೂ ಭಾರತೀಯರು ಮಾಡುತ್ತಿರುವ ಸಾಧನೆ ಈಗ ಜಗತ್ತಿನ ಗಮನ ಸೆಳೆದಿರುವುದು ನಿಜ. ಇಂಥ ಸಂದರ್ಭದಲ್ಲಿ ಜಪಾನ್‌ನ (Japan) ಪ್ರಸಿದ್ಧ ಕಂಪನಿ ಟೆಕ್ ಜಪಾನ್‌ನ (Tech Japan) ಸಂಸ್ಥಾಪಕ ನೌಟಾಕ ನಿಶಿಯಾಮಾ (Naotaka Nishiyama), ‘ಜಗತ್ತಿಗೆ ಈಗ ಭಾರತದ (India) ನಾಯಕತ್ವ ಬೇಕಿದೆ. ನಾನೂ ಸಹ ಭಾರತದಲ್ಲಿ, ಬೆಂಗಳೂರಿನಲ್ಲಿ ನೆಲೆಸಿ ಹೊಸ ಅಧ್ಯಾಯ ಆರಂಭಿಸಲಿದ್ದೇನೆ’ ಎಂದು ಘೋಷಣೆ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಈ ವಿಚಾರವಾಗಿ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವ ನೌಟಾಕ ನಿಶಿಯಾಮಾ, ಇದು ಖಂಡಿತವಾಗಿಯೂ ನನ್ನ ಜೀವನದಲ್ಲಿ ದೊಡ್ಡ ಮತ್ತು ಹೊಸ ಅಧ್ಯಾಯವಾಗಿರಲಿದೆ ಎಂದು ಹೇಳಿದ್ದಾರೆ.
ಕೊನೆಗೂ ಸಮಯ ಬಂದಿದೆ. ನಾನು ಭಾರತಕ್ಕೆ ಸ್ಥಳಾಂತರಗೊಳ್ಳುತ್ತಿದ್ದೇನೆ ಮತ್ತು ಅಧಿಕೃತವಾಗಿ ಬೆಂಗಳೂರಿನಲ್ಲಿ ವಾಸಿಸಲು ಪ್ರಾರಂಭಿಸಲಿದ್ದೇನೆ. ನಾನು ಸುಮಾರು 10 ವರ್ಷಗಳಿಂದ ಭಾರತಕ್ಕೆ ಭೇಟಿ ನೀಡುತ್ತಿದ್ದೇನೆ, ಆದರೆ ನಾನು ಅಲ್ಲಿಯೇ ನೆಲೆಸಿ ವಾಸ ಮಾಡಲು ಇದೇ ಮೊದಲ ಬಾರಿಗೆ ನಿರ್ಧರಿಸಿದ್ದೇನೆ. ಇದು ಖಂಡಿತವಾಗಿಯೂ ನನ್ನ ಜೀವನದಲ್ಲಿ ಒಂದು ದೊಡ್ಡ ಹೊಸ ಅಧ್ಯಾಯವಾಗಿದೆ ಎಂದು ನೌಟಾಕ ನಿಶಿಯಾಮಾ ಉಲ್ಲೇಖಿಸಿದ್ದಾರೆ.
ವಾಸ್ತವದಲ್ಲಿ ನಿಶಿಯಾಮಾ ಬೆಂಗಳೂರಿಗೆ ಬಂದು ಒಂದು ತಿಂಗಳಾಗಿದೆ. ಲಿಂಕ್ಡ್‌ಇನ್‌ನಲ್ಲಿ ಭಾರತದಲ್ಲಿನ ತಮ್ಮ ಅನುಭವದ ಬಗ್ಗೆ ಇತ್ತೀಚೆಗೆ ಬರೆದುಕೊಂಡಿದ್ದರು.
‘ನಾನು ಭಾರತಕ್ಕೆ ಬಂದು ಒಂದು ತಿಂಗಳಾಗಿದೆ. ಭಾರತದಲ್ಲಿನ ಮೌಲ್ಯಗಳ ವೈವಿಧ್ಯತೆಯ ಬಗ್ಗೆ ಮತ್ತೊಮ್ಮೆ ಆಶ್ಚರ್ಯಚಕಿತನಾಗಿದ್ದೇನೆ. ವಿವಿಧ ಧರ್ಮಗಳು, ಜನಾಂಗಗಳು ಮತ್ತು ದೊಡ್ಡ ದೇಶವಾಗಿದ್ದರೂ ಭಾರತವು ಒಗ್ಗಟ್ಟಿನಿಂದ ಇರುವುದು ಅದ್ಭುತವಾಗಿದೆ. ಭಾರತವು ಈಗ ಚುನಾವಣಾ ಕಾಲದಲ್ಲಿರುವುದರಿಂದ ನಾಯಕತ್ವದ ಬಗ್ಗೆ ಯೋಚಿಸಲು ಇದು ಉತ್ತಮ ಅವಕಾಶವಾಗಿದೆ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಕೆಲಸ ಮಾಡುವುದು ಜಪಾನ್‌ಗಿಂತ ಹೇಗೆ ಉತ್ತಮ ಎಂಬುದನ್ನೂ ಅವರು ಬರೆದಿಕೊಂಡಿದ್ದಾರೆ. ಜಪಾನ್ನಲ್ಲಿ ಏಕರೂಪದ ವಾತಾವರಣವಿದೆ. ಏಕರೂಪದ ಮೌಲ್ಯಗಳ ಸಣ್ಣ ಚೌಕಟ್ಟಿನೊಳಗೆ ನಿರ್ಬಂಧಿಸಲ್ಪಟ್ಟಿದೆ. ಆದರೆ ಭಾರತ ಹಾಗಲ್ಲ. ವೈವಿಧ್ಯಮಯ ಪರಿಸರದಿಂದ, ವೈವಿಧ್ಯಮಯ ಮೌಲ್ಯಗಳನ್ನು ಒಳಗೊಳ್ಳುವ ದೊಡ್ಡ ಚೌಕಟ್ಟನ್ನು ಹೊಂದಿದೆ. ಇಂದು ಜಗತ್ತಿಗೆ ಭಾರತದ ನಾಯಕತ್ವ ಬೇಕಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಜಪಾನ್ನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಸೌರ ವಿದ್ಯುತ್ ಉತ್ಪಾದಕ ದೇಶವಾಗಿದೆ ಭಾರತ
ಸುಂದರ್ ಪಿಚೈ ಮತ್ತು ಸತ್ಯ ನಾಡೆಲ್ಲಾ ಅವರ ಸಾಧನೆಗಳ ಬಗ್ಗೆಯೂ ನಿಶಿಯಾಮಾ ಪ್ರಸ್ತಾಪಿಸಿದ್ದಾರೆ. ಅವರಿಬ್ಬರೂ ಭಾರತದಲ್ಲಿ ಜನಿಸಿದರು, ಭಾರತದಲ್ಲೇ ಶಿಕ್ಷಣ ಪಡೆದರು. ನಂತರ ಪದವಿಗೆ ಅಮೆರಿಕಕ್ಕೆ ಹೋದರು. ಬೇರೆ ರೀತಿಯಲ್ಲಿ ಹೇಳುವುದಾದರೆ, ಭಾರತವು ಸ್ಪರ್ಧೆ ಮತ್ತು ಸಹಯೋಗ ಎರಡನ್ನೂ ಸಾಕಾರಗೊಳಿಸುವುದರಿಂದ ಅದು ಜಾಗತಿಕ ನಾಯಕತ್ವಕ್ಕೆ ಸಮರ್ಥವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ