ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನ ಯುವಕರ ಗುಂಪೊಂದು ಕ್ಲಬ್ಹೌಸ್ನಲ್ಲಿ ಪಾಕಿಸ್ತಾನದ ರಾಷ್ಟ್ರಧ್ವಜವನ್ನು ಡಿಪಿ (Display Image – DP) ಮಾಡಿಕೊಂಡು, ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಹಾಕಿ ಸಂಭ್ರಮಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ‘ಪಾಕಿಸ್ತಾನ್ ಜಿಂದಾಬಾದ್ ಇಂಡಿಯಾ ಮುರ್ದಾಬಾದ್’ ಹೆಸರಿನಲ್ಲಿ ಗ್ರೂಪ್ ರಚಿಸಿಕೊಂಡಿದ್ದ ಒಂದಿಷ್ಟು ಯುವಕರು, ಅಶ್ಲೀಲವಾಗಿ ಮಾತನಾಡುತ್ತಾ ಪಾಕ್ ಪರ ಘೋಷಣೆಗಳನ್ನು ಕೂಗಿದ್ದಾರೆ. ಕ್ಲಬ್ಹೌಸ್ ಸಂವಾದದಲ್ಲಿ ಪಾಲ್ಗೊಂಡಿದ್ದವರ ಪೈಕಿಯೇ ಒಬ್ಬರು ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಮಾಧ್ಯಮಗಳಿಗೆ ಹರಿಬಿಟ್ಟ ನಂತರ ಘಟನೆ ಬಯಲಾಗಿದೆ.
ಈ ಗುಂಪಿನಲ್ಲಿ ಇರುವವರೆಲ್ಲರೂ ಕನ್ನಡದಲ್ಲೇ ಮಾತನಾಡಿದ್ದಾರೆ. ಗ್ರೂಪಿನ 10ಕ್ಕೂ ಹೆಚ್ಚು ಸದಸ್ಯರು ಪಾಕಿಸ್ತಾನದ ಬಾವುಟವನ್ನು ಡಿಪಿ ಮಾಡಿಕೊಂಡು, ‘ನಮ್ಮ ದೇಶ ಪಾಕಿಸ್ತಾನ’ ಎಂದು ಹೇಳಿಕೊಂಡಿದ್ದಾರೆ. ನಂತರ ಭಾರತದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ಯುವಕರು ತಮಾಷೆಗೆ ಹೀಗೆ ಮಾಡಿದ್ದೋ ಅಥವಾ ನಿಜವಾಗಿಯೂ ಇವರು ಪಾಕಿಸ್ತಾನದ ಪರ ಒಲವಿರುವವರೋ ಎನ್ನುವ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಈ ಖಾತೆಗಳು ಸಹ ಅಸಲಿಯೋ ನಕಲಿಯೋ ಎಂಬುದು ಬಹಿರಂಗಗೊಳ್ಳಬೇಕಿದೆ. ಭಾರತವನ್ನು ಅವಮಾನಿಸಿದ ಯುವಕರನ್ನು ಬಂಧಿಸಬೇಕೆಂದು ಹಿಂದೂಪರ ಸಂಘಟನೆಯ ಕಾರ್ಯಕರ್ತೆಯೊಬ್ಬರು ವಿಡಿಯೊ ಸಂದೇಶದಲ್ಲಿ ವಿನಂತಿಸಿದ್ದಾರೆ.
Published On - 1:03 pm, Tue, 16 August 22