ಅತ್ಯಂತ ದುಬಾರಿ ನಮ್ಮ ಮೆಟ್ರೋ: ದೆಹಲಿ ಮೆಟ್ರೋ ದರ ಏರಿಕೆ ಜತೆ ಹೋಲಿಸಿ ಸರ್ಕಾರದ ವಿರುದ್ಧ ತೇಜಸ್ವಿ ಸೂರ್ಯ ವಾಗ್ದಾಳಿ

ಬೆಂಗಳೂರು ನಮ್ಮ ಮೆಟ್ರೋದ ದರ ಶೇಕಡಾ 136ರಷ್ಟು ಏರಿಕೆಯಾಗಿದ್ದು, ಇದು ದೇಶದಲ್ಲೇ ಅತಿ ದುಬಾರಿಯಾಗಿದೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ದೆಹಲಿ ಮೆಟ್ರೋದ ದರ ಏರಿಕೆ ಜತೆ ಬೆಂಗಳೂರು ಮೆಟ್ರೋ ದರ ಹೆಚ್ಚಳ ಹೋಲಿಕೆ ಮಾಡಿ ಅಂಕಿಅಂಶಗಳನ್ನು ನೀಡಿದ ಅವರು, ಸಾರ್ವಜನಿಕರ ಹಿತದೃಷ್ಟಿಯಿಂದ ದರ ಇಳಿಕೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ತೇಜಸ್ವಿ ಸೂರ್ಯ ಮಾತನಾಡಿರುವ ವಿಡಿಯೋ ಹಾಗೂ ನೀಡಿದ ಅಂಕಿಅಂಶ ಇಲ್ಲಿದೆ.

ಅತ್ಯಂತ ದುಬಾರಿ ನಮ್ಮ ಮೆಟ್ರೋ: ದೆಹಲಿ ಮೆಟ್ರೋ ದರ ಏರಿಕೆ ಜತೆ ಹೋಲಿಸಿ ಸರ್ಕಾರದ ವಿರುದ್ಧ ತೇಜಸ್ವಿ ಸೂರ್ಯ ವಾಗ್ದಾಳಿ
ದೆಹಲಿ ಮತ್ತು ಬೆಂಗಳೂರು ಮೆಟ್ರೋ ದರ ಏರಿಕೆ ವಿವರ (ಕೃಪೆ: ತೇಜಸ್ವಿ ಸೂರ್ಯ ಎಕ್ಸ್ ಸಂದೇಶ)

Updated on: Sep 05, 2025 | 11:28 AM

ಬೆಂಗಳೂರು, ಸೆಪ್ಟೆಂಬರ್ 5: ಪ್ರತಿದಿನ ಸರಾಸರಿ 10 ಲಕ್ಷ ಜನರು ಪ್ರಯಾಣಿಸುವ ನಮ್ಮ ಮೆಟ್ರೋ (Namma Metro) ದೇಶದಲ್ಲೇ ಅತ್ಯಂತ ದುಬಾರಿಯಾಗಿದೆ. ರಾಜ್ಯ ಸರ್ಕಾರ ತಕ್ಷಣವೇ ದರ ಇಳಿಕೆ ಮಾಡಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejasvi Surya) ಆಗ್ರಹಿಸಿದ್ದಾರೆ. ದೆಹಲಿ ಮೆಟ್ರೋ ಕೂಡ ಇತ್ತೀಚೆಗೆ ದರ ಏರಿಕೆ ಮಾಡಿದೆ. ಆದರೆ, ಕನಿಷ್ಠ 1 ರೂ.ನಿಂದ ಗರಿಷ್ಠ 4 ರೂ. ವರೆಗೆ ದರ ಏರಿಕೆ ಮಾಡಲಾಗಿದೆ. ಇಷ್ಟು ಪ್ರಮಾಣದಲ್ಲಿ ದರ ಹೆಚ್ಚಳ ಮಾಡಿದರೆ ಯಾರೂ ವಿರೋಧಿಸುವುದಿಲ್ಲ. ಸರ್ಕಾರಕ್ಕೆ ಆದಾಯದ ಅಗತ್ಯವಿದೆ ಎಂಬುದನ್ನು ಅರ್ಥ ಮಾಡಿಕೊಂಡು ಸುಮ್ಮನಾಗುತ್ತಾರೆ. ಆದರೆ, ಬೆಂಗಳೂರಿನಲ್ಲಿ (Bengaluru) ನಮ್ಮ ಮೆಟ್ರೋ ದರ ಸುಮಾರು ಶೇ 136 ರಷ್ಟು ಹೆಚ್ಚಳ ಮಾಡಿದ್ದಾರೆ. 25 ರೂ.ನಷ್ಟು ದರ ಏರಿಕೆ ಮಾಡಲಾಗಿದೆ. ಇದನ್ನು ಯಾರು ಸಹಿಸುತ್ತಾರೆ ಎಂದು ಸೂರ್ಯ ಪ್ರಶ್ನಿಸಿದ್ದಾರೆ.

ಬೆಂಗಳೂರು ನಮ್ಮ ಮೆಟ್ರೋದಲ್ಲಿ ಮುಖ್ಯವಾಗಿ ಐಟಿ ಮತ್ತು ಬಿಟಿ ವಲಯದ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ಸಂಚರಿಸುತ್ತಾರೆ. ಬಿಎಂಆರ್​​ಸಿಎಲ್ ಮೆಟ್ರೋ ಪ್ರಯಾಣ ದರಗಳನ್ನು ಹೆಚ್ಚಿಸಿದ್ದರಿಂದ ಬೆಂಗಳೂರು ಮೆಟ್ರೋ ದೇಶದಲ್ಲೇ ಅತ್ಯಂತ ದುಬಾರಿಯಾಗಿದೆ. ನಮ್ಮ ಸರ್ಕಾರ ಶೇ 136 ರಷ್ಟು ದರ ಹೆಚ್ಚಳ ಮಾಡಿತು. ಇದಕ್ಕೆ ವ್ಯತಿರಿಕ್ತವಾಗಿ, ದೆಹಲಿ ಮೆಟ್ರೋ ದರ ಹೆಚ್ಚಳವು ಸಮಂಜಸ ಮತ್ತು ಕೈಗೆಟುಕುವಂತಿದ್ದು, ಗರಿಷ್ಠ 4 ರೂ. ಹೆಚ್ಚಳವಾಗಿದೆ ಎಂದು ಎಕ್ಸ್​ ಮೂಲಕ ತೇಜಸ್ವಿ ಸೂರ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿ ಮೆಟ್ರೋ VS ಬೆಂಗಳೂರು ಮೆಟ್ರೋ ಟಿಕೆಟ್ ದರ: ತೇಜಸ್ವಿ ಸೂರ್ಯ ಕೊಟ್ಟ ವಿವರ


ಒಬ್ಬ ಸಾಮಾನ್ಯ ಮೆಟ್ರೋ ಬಳಕೆದಾರನು ತನ್ನ ನಿವಾಸದಿಂದ ಕೆಲಸಕ್ಕೆ 25 ಕಿ.ಮೀ.ಗಿಂತ ಹೆಚ್ಚು ದೂರ ಪ್ರಯಾಣಿಸಿದರೆ, ಪ್ರತಿ ಪ್ರಯಾಣಕ್ಕೆ ಸುಮಾರು 90 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಇದು ಮೆಟ್ರೋ ತಲುಪುವುದಕ್ಕೆ ಮತ್ತು ಮೆಟ್ರೋ ಇಳಿದ ನಂತರದ ಪ್ರಯಾಣದ ಹೆಚ್ಚುವರಿ ವೆಚ್ಚಗಳನ್ನು ಹೊರತುಪಡಿಸಿದ ಲೆಕ್ಕ. ಈ ದುರದೃಷ್ಟಕರ ಪರಿಸ್ಥಿತಿಯು ಸಾರ್ವಜನಿಕ ಸಾರಿಗೆಯನ್ನು ಅಳವಡಿಸಿಕೊಳ್ಳುವುದನ್ನು ಮತ್ತು ಖಾಸಗಿ ವಾಹನಗಳನ್ನು ಪ್ರೋತ್ಸಾಹಿಸುವುದನ್ನು ನಿರುತ್ಸಾಹಗೊಳಿಸುತ್ತಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋ ಬ್ಲೂ ಲೈನ್ ಉದ್ಘಾಟನೆ ಯಾವಾಗ? ಡೆಡ್​ಲೈನ್ ನಿಗದಿಪಡಿಸಿದ ಬಿಎಂಆರ್​ಸಿಎಲ್

ಇಷ್ಟೊಂದು ದುಬಾರಿ ದರ ಹೆಚ್ಚಳವನ್ನು ಯಾವ ಆಧಾರದ ಮೇಲೆ ಜಾರಿಗೆ ತರಲಾಯಿತು ಎಂದು ಅವರು ಪ್ರಶ್ನಿಸಿದ್ದಾರೆ. ಮೆಟ್ರೋ ದರ ಹೆಚ್ಚಳ ವಿಚಾರವಾಗಿ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿದ್ದೇನೆ. ಶುಲ್ಕ ನಿಗದಿ ಸಮಿತಿ (ಎಫ್‌ಎಫ್‌ಸಿ) ವರದಿಯನ್ನು ಬಹಿರಂಗಪಡಿಸಲಾಗುವುದು ಎಂದು ವಿಚಾರಣೆ ವೇಳೆ ಹೈಕೋರ್ಟ್‌ಗೆ ಸರ್ಕಾರ ಅಫಿಡವಿಟ್ ಸಲ್ಲಿಸಿದೆ. ಆದರೆ, ಈವರೆಗೆ ವರದಿಯನ್ನು ಬಿಎಂಆರ್​ಸಿಎಲ್ ಬಹಿರಂಗಪಡಿಸಿಲ್ಲ. 22ಕ್ಕೆ ಅಂತಿಮ ವಿಚಾರಣೆ ಇದೆ. ಹೀಗಾಗಿ ತಕ್ಷಣವೇ ವರದಿ ಬಿಡುಗಡೆ ಮಾಡಬೇಕೆಂದು ಮತ್ತೊಮ್ಮೆ ಒತ್ತಾಯಿಸುತ್ತೇನೆ. ಸಾರ್ವಜನಿಕ ಹಿತಾಸಕ್ತಿ ಅತ್ಯಂತ ಮುಖ್ಯ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:25 am, Fri, 5 September 25