ಜಿಎಸ್‌ಟಿ ಪ್ರಯೋಜನ ಜನರಿಗೆ ವರ್ಗಾಯಿಸಿ, ಗ್ಯಾರಂಟಿ ನಷ್ಟದ ಬಗ್ಗೆ ಮಾತನಾಡಿ: ಕರ್ನಾಟಕ ಸರ್ಕಾರಕ್ಕೆ ಲಹರ್ ಸಿಂಗ್ ಸಿರೋಯಾ ಟಾಂಗ್
ಉಚಿತ ಗ್ಯಾರಂಟಿಗಳಿಂದ ಆಗುತ್ತಿರುವ ನಷ್ಟವನ್ನು ಉಲ್ಲೇಖಿಸದ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಜಿಎಸ್‌ಟಿ ಸುಧಾರಣೆಯಿಂದ ಆದಾಯ ನಷ್ಟವಾಗುತ್ತದೆ ಎಂದುಕೊಂಡು ಅದರ ಪ್ರಯೋಜನವನ್ನು ಜನರಿಗೆ ದೊರೆಯದಂತೆ ಮಾಡಬಾರದು ಎಂದು ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ಹೇಳಿದ್ದಾರೆ. ಒಂದು ಕೈಯಿಂದ ಉದಾರವಾಗಿ ಉಚಿತವಾಗಿ ಕೊಡುತ್ತಿದ್ದೇವೆ ಎನ್ನುತ್ತಲೇ ಮತ್ತೊಂದು ಕೈಯಿಂದ ಕಿತ್ತುಕೊಳ್ಳುವ ಕೆಲಸ ಮಾಡಬಾರದು ಎಂದು ಅವರು ಹೇಳಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 5: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆರಂಭಿಸಿರುವ ಜಿಎಸ್‌ಟಿ (GST) ಸುಧಾರಣೆಯ ಸಂಪೂರ್ಣ ಪ್ರಯೋಜನ ರಾಜ್ಯದ ಜನತೆಗೆ ತಲುಪುವಂತೆ ಕರ್ನಾಟಕ ಸರ್ಕಾರ ನೋಡಿಕೊಳ್ಳಬೇಕು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ (Lahar Singh Siroya) ಆಗ್ರಹಿಸಿದ್ದಾರೆ. ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ ಮಾಡಿದ್ದಾಗ ರಾಜ್ಯದಲ್ಲಿ ಹೆಚ್ಚುವರಿ ಸುಂಕ ವಿಧಿಸಿ ಜನರಿಗೆ ಅದರ ಪ್ರಯೋಜನ ದೊರೆಯದಂತೆ ಮಾಡಲಾಗಿತ್ತು. ಇದೀಗ ಜಿಎಸ್‌ಟಿ ವಿಚಾರದಲ್ಲಿ ಹಾಗೆ ಮಾಡಬಾರದು ಎಂದು ಅವರು ಹೇಳಿದ್ದಾರೆ.
ಜಿಎಸ್‌ಟಿ ಸುಧಾರಣೆಗಳು ರಾಜ್ಯಕ್ಕೆ ಆದಾಯ ನಷ್ಟ ಉಂಟುಮಾಡುತ್ತವೆ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರವು ಈಗಾಗಲೇ ಹೆಚ್ಚುವರಿ ತೆರಿಗೆಗಳಿಗೆ ವಾದ ಮಂಡಿಸುತ್ತಿರುವಂತೆ ತೋರುತ್ತಿದೆ. ಪ್ರತಿಯೊಬ್ಬ ನಾಗರಿಕ ಮತ್ತು ಗ್ರಾಹಕರಿಗೆ ಪ್ರಯೋಜನ ದೊರೆಯುವಂತೆ ಮಾಡುವ ಉದ್ದೇಶದಿಂದ ಜಾರಿಗೆ ತರಲಾದ ಜಿಎಸ್‌ಟಿ ಸುಧಾರಣೆಗಳನ್ನು ಯಾವುದೇ ರೀತಿಯಲ್ಲಿ ದುರ್ಬಲಗೊಳಿಸಬಾರದು ಎಂದು ಅವರು ಹೇಳಿದ್ದಾರೆ.
ಲಹರ್ ಸಿಂಗ್ ಸಿರೋಯಾ ಎಕ್ಸ್ ಸಂದೇಶ
The Congress government in Karnataka should ensure that the #GST reforms initiated by PM @narendramodi Ji reach the people of the state in total. They should not cleverly bring in additional levies at the state-level, like they have done with petrol and diesel to create a…
— Lahar Singh Siroya (@LaharSingh_MP) September 5, 2025
ಪದೇಪದೆ ಆದಾಯ ನಷ್ಟ ಮತ್ತು ಸಹಕಾರಿ ಒಕ್ಕೂಟ ವ್ಯವಸ್ಥೆಯ ವಿಷಯ ಪ್ರಸ್ತಾಪಿಸುವ ರಾಜ್ಯ ಸರ್ಕಾರ, ಉಚಿತ ಗ್ಯಾರಂಟಿ ಯೋಜನೆಗಳ ಹೊರೆ ರಾಜ್ಯದ ಆರ್ಥಿಕತೆಯನ್ನು ಹೇಗೆ ಕುಗ್ಗಿಸಿದೆ ಎಂಬುದರ ಬಗ್ಗೆ ಮಾತನಾಡುವುದಿಲ್ಲ. ಈಗ ಜಿಎಸ್‌ಟಿ ಸುಧಾರಣೆಯಾಗಿದೆ. ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಸುಧಾರಿಸುವ ಬಗ್ಗೆಯೂ ಪರಿಗಣಿಸಬೇಕು. ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಒಂದು ಕೈಯಿಂದ ಉದಾರವಾಗಿ ಕೊಡುತ್ತಿರುವಂತೆ ನಟಿಸುತ್ತಾ ಇನ್ನೊಂದು ಕೈಯಿಂದ ದರೋಡೆ ಮಾಡುವುದನ್ನು ನಿಲ್ಲಿಸಬೇಕು. ಆ ಮೂಲಕ ಜನರನ್ನು ಮೂರ್ಖರನ್ನಾಗಿ ಮಾಡುವುದನ್ನು ನಿಲ್ಲಿಸಬೇಕು ಎಂದು ಲಹರ್ ಸಿಂಗ್ ಸಿರೋಯಾ ಆಗ್ರಹಿಸಿದ್ದಾರೆ.
ಜನರಿಗೆ ನೆರವಾಗುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರವು ಜಿಎಸ್‌ಟಿ ದರಗಳಲ್ಲಿ ಮಹತ್ವದ ಪರಿಷ್ಕರಣೆ ಘೋಷಿಸಿ ಬುಧವಾರ ಘೋಷಣೆ ಮಾಡಿತ್ತು. ಅದರಂತೆ, ಶೇ 12 ಮತ್ತು 28ರ ಸ್ಲ್ಯಾಬ್‌ಗಳನ್ನು ರದ್ದುಗೊಳಿಸಿ, ಶೇ 5 ಮತ್ತು 18ರ ಸ್ಲ್ಯಾಬ್‌ಗಳನ್ನು ಉಳಿಸಿಕೊಳ್ಳಲಾಗಿದ್ದು, ಇದರು ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿದೆ. ಆಹಾರ ವಸ್ತುಗಳು,ಕಲಿಕಾ ಸಾಮಗ್ರಿಗಳು ಹಾಗೂ ವೈಯಕ್ತಿಕ, ಆರೋಗ್ಯ ವಿಮೆಗೆ ಜಿಎಸ್‌ಟಿ ವಿನಾಯಿತಿ ನೀಡಲಾಗಿದೆ.
ಇದನ್ನೂ ಓದಿ: ಜಿಎಸ್‌ಟಿ ಪರಿಷ್ಕರಣೆಯ ಲಾಭ ನಷ್ಟದ ಲೆಕ್ಕಾಚಾರ: ರಾಜ್ಯಗಳಿಗೆ ನಿಜಕ್ಕೂ ಭಾರಿ ನಷ್ಟವೇ? ಕೇಂದ್ರ ಸರ್ಕಾರ, ತಜ್ಞರು ಹೇಳಿದ್ದಿಷ್ಟು
ಕೇಂದ್ರದ ನಿರ್ಧಾರದಿಂದ ರಾಜ್ಯ ಸರ್ಕಾರಕ್ಕೆ ನಷ್ಟವಾಗಲಿದೆ ಎಂದು ಕರ್ನಾಟಕ ಸರ್ಕಾರದ ಸಚಿವರು ಆಕ್ಷೇಪಿಸಿದ್ದಾರೆ. ಆದರೆ, ಜಿಎಸ್‌ಟಿ ದರ ಇಳಿಕೆಯಿಂದ ದೇಶದ ಮಧ್ಯಮ ಮತ್ತು ಸಣ್ಣ ಗಾತ್ರದ ಉದ್ದಿಮೆಗಳಿಗೆ ಉತ್ತೇಜನ ಸಿಗಲಿದ್ದು, ರಾಜ್ಯಗಳಿಗೆ ಆದಾಯದಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.




