ಕರ್ನಾಟಕಕ್ಕೆ ಬರ ಪರಿಹಾರ ಘೋಷಿಸಿದ ವಿಚಾರ: ನಾಳೆ ಬೆಂಗಳೂರಿನಲ್ಲಿ ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 27, 2024 | 6:34 PM

ರಾಜ್ಯಕ್ಕೆ ಕೇಂದ್ರ ಸರ್ಕಾರ ಬರ ಪರಿಹಾರ ಹಣ ಕಡಿಮೆ ಬಿಡುಗಡೆ ಮಾಡಿದ್ದು, ಈ ಹಿನ್ನಲೆ ನಾಳೆ(ಏ.28) ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್(Congress) ಪ್ರತಿಭಟನೆ ನಡೆಸಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

ಕರ್ನಾಟಕಕ್ಕೆ ಬರ ಪರಿಹಾರ ಘೋಷಿಸಿದ ವಿಚಾರ: ನಾಳೆ ಬೆಂಗಳೂರಿನಲ್ಲಿ ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ನಾಳೆ ಬೆಂಗಳೂರಿನಲ್ಲಿ ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
Follow us on

ಬೆಂಗಳೂರು, ಏ.27: ರಾಜ್ಯಕ್ಕೆ ಕೇಂದ್ರ ಸರ್ಕಾರ ಬರ ಪರಿಹಾರ ಹಣ ಕಡಿಮೆ ಬಿಡುಗಡೆ ಮಾಡಿದ್ದು, ಈ ಹಿನ್ನಲೆ ನಾಳೆ(ಏ.28) ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್(Congress) ಪ್ರತಿಭಟನೆ ನಡೆಸಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ‘ನಮ್ಮ ಹೋರಾಟ ನ್ಯಾಯಾಲಯದಲ್ಲಿ ಮುಂದುವರಿಯುತ್ತೆ, ನಾವು 18 ಸಾವಿರ ಕೋಟಿಲಿ ಕನಿಷ್ಠ 50% ಕೇಳಿದ್ವಿ, ಆದರೆ ಈಗಿನ ಪರಿಹಾರ ಆನೆಗೆ ಅರೆಕಾಸಿನ ಮಜ್ಜಿಗೆ ಕೊಟ್ಟಂತಾಗಿದೆ. ನಾವು ಕೇಂದ್ರ ಸರ್ಕಾರ ಬಳಿ ಭಿಕ್ಷೆ ಕೇಳೋಕೆ ಹೋಗಿದ್ವಾ?, ಬರ ಪರಿಹಾರ ಬಿಡುಗಡೆ ಕೇಂದ್ರ ಸರ್ಕಾರದ ಕರ್ತವ್ಯ ಎಂದು ಕಿಡಿಕಾರಿದ್ದಾರೆ.

‘ಬರಗಾಲದ ಪರಿಸ್ಥಿತಿ ಬಗ್ಗೆ ಗೊತ್ತಿದೆ. 123 ತಾಲ್ಲೂಕಿನಲ್ಲಿ 122 ವರ್ಷಗಳ ಇತಿಹಾಸದಲ್ಲಿ ಇಷ್ಟು ದೊಡ್ಡ ಸಮಸ್ಯೆ ಆಗಿರಲಿಲ್ಲ.
46.9 ಲಕ್ಷ ಹೆಕ್ಟರ್ ಕೃಷಿ ಭೂಮಿ‌ ನಷ್ಟ ಆಗಿದೆ. 223 ತಾಲ್ಲೂಕುಗಳನ್ನ ಬರಗಾಲ‌ ಎಂದು ಘೋಷಿಸಿದ್ದೇವೆ. ನಾವು ಮನವಿ ಕೊಟ್ಟಾಗ 35 ಸಾವಿರ ಕೋಟಿಗೂ ಅಧಿಕ‌ ಹಣ ನಷ್ಟವಾಗಿದೆ. ಜೊತೆಗೆ 29 ಜಿಲ್ಲೆಗಳಲ್ಲಿ‌ ಆದ ತೊಂದರೆಯನ್ನ ಕಮೀಟಿ ಗಮನಿಸಿದೆ. ಕೇಂದ್ರಕ್ಕೆ ಕರ್ನಾಟಕದ ಪರಿಸ್ಥಿತಿಯನ್ನ ತಿಳಿಸಲು‌ 2023 ಅಕ್ಟೋಬರ್​ 24ರಂದು ರಾಜ್ಯದ ಸಚಿವರುಗಳಾದ ಕೃಷಿ ಮತ್ತು ಕಂದಾಯ‌‌ ಸಚಿವರು ಹೋಗಿದ್ದರೆ, ಡಿಸೆಂಬರ್19ರಂದು ಸಿಎಂ, ಕಂದಾಯ ಸಚಿವರು ಇಬ್ಬರೂ ಭೇಟಿ ಮಾಡಿದ್ದರು. ಜ.20ರಂದು ಸಿಎಂ ಮತ್ತೆ ಪ್ರಧಾನಿಗಳ ಬಳಿ ಮನವಿ ಇಟ್ಟರು. ಮಾರ್ಗಸೂಚಿ ಅನ್ವಯ ನಾವು ಮನವಿ ಸಲ್ಲಿಸಿದ್ದೆವು ಎಂದರು.

ಇದನ್ನೂ ಓದಿ:ಬರ ಪರಿಹಾರ ಹಣ ಸಾಲದು, ಹೋರಾಟ ಮುಂದುವರಿಯಲಿದೆ: ಸಿಎಂ, ಡಿಸಿಎಂ ಮತ್ತು ಕೃಷಿ ಸಚಿವ

ಇನ್ನು ನರೇಗಾದಲ್ಲಿ 100 ದಿನ ಹೆಚ್ಚುವರಿ ಉದ್ಯೋಗ ಕೊಡುವ ಕೆಲಸ ಮಾಡಲಿಲ್ಲ, ಇದು ಖಂಡನೀಯ. ನಿಮ್ಮ ಸಮಯ ಕ್ಲೋಸ್ ಆಗುತ್ತಿದೆ. ಕರ್ನಾಟಕ ರಾಜ್ಯಕ್ಕೆ ಬಿಜೆಪಿ ಸರ್ಕಾರ ಮೋಸ ಮಾಡಿದೆ. 35 ಸಾವಿರ ಕೋಟಿ ನಷ್ಟ ಆಗಿದ್ದರೆ, 18 ಸಾವಿರ ಕೋಟಿಗೆ ನಾವು ಮನವಿ ಮಾಡಿದ್ದೇವು. ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದು ನಮಗೆ ಅನಿವಾರ್ಯ ಆಯ್ತು. ಕೇಂದ್ರ ಸರ್ಕಾರದ ವಕೀಲರು ಇಲ್ಲಿನ ಪರಿಸ್ಥಿತಿಯನ್ನು ಗಮನಿಸಿದ್ದಾರೆ. ಅನ್ಯಾಯ ಆಗುತ್ತಿರುವ ಬಗ್ಗೆ ಅವರು ಹೇಳಿದ್ದಾರೆ. ನಮಗೆ 3,454 ಕೋಟಿ ರೂ. ಕೊಟ್ಟಿದ್ದಾರೆ, ಪತ್ರ ಈಗ ತಲುಪಿದೆ. ಖಾತೆಗೆ ಯಾವಾಗ ಜಮಾ ಆಗುತ್ತೆ ಅನ್ನೋದು ಗೊತ್ತಿಲ್ಲ. ಇದು‌ ರಾಜಕೀಯ ಅಲ್ಲ, ರಾಜ್ಯಕ್ಕೆ ಆಗುತ್ತಿರುವ ದೊಡ್ಡ ದ್ರೋಹ, ರಾಜ್ಯದ ಹಿತಕ್ಕೆ ಕೇಂದ್ರ ಕೆಲಸ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

ಕುಮಾರಸ್ವಾಮಿ ವಿರುದ್ದ ವಾಗ್ದಾಳಿ

ಇದೇ ವೇಳೆ ಭದ್ರಾ ಯೋಜನೆಯಲ್ಲಿ ಪಿಎಂ, ನಿರ್ಮಲಾ ಸೀತಾರಾಮ್ ಕೇಂದ್ರದ ಬಜೆಟ್ ಪಾಸ್ ಮಾಡಿದ್ದಾರೆ. 5300 ಕೋಟಿ ಯಾಕೆ ಬಿಡುಗಡೆ ಮಾಡಿಲ್ಲ?, ಇದಕ್ಕೆ ಏನು ಉತ್ತರ ಕೊಡ್ತೀರಿ, ಮಹದಾಯಿ, ಎತ್ತಿನಹೊಳೆ ಯೋಜನೆ ರಾಷ್ಟ್ರೀಯ ಮಾಡಿ ಅಂದಿದ್ದೇವೂ, ಯಾಕೆ‌ ಮಾಡಲಿಲ್ಲ. ಮೇಕೆದಾಟು, ಎತ್ತಿನಹೊಳೆಯ ಬಗ್ಗೆ ಕುಮಾರಸ್ವಾಮಿ ಮಾತಾಡಿದ್ದಾರೆ, ‘ನೀವು ಬಿಜೆಪಿ ಜೊತೆ ಸೇರಿದ್ದೀರಲ್ಲ ಅವರ ಜೊತೆ ಮೊದಲೇ ಮಾತಾಡಬೇಕಿತ್ತಲ್ಲ. ಈಗ ತಂದೆ- ಮಗ ನಾವು ಮಾಡಿಸುತ್ತೀವಿ ಹೋಪ್ ಕೊಡಿ ಅಂತ ಕೇಳುತ್ತಿದ್ದಾರೆ. ಅಧಿಕಾರ ಕೊಟ್ರೆ ಇವರಿಗೆ ರಾಜ್ಯದ ಹಿತ, ಇಲ್ಲಾಂದ್ರೆ ರಾಜ್ಯದ ಹಿತ ಇಲ್ಲ ಎಂದು ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ