ಡೀಸೆಲ್ ಬಿಕ್ಕಟ್ಟಿನ ಬೆನ್ನಲ್ಲೇ ಕೆಎಸ್‌ಆರ್‌ಟಿಸಿಗೆ ಟಿಕೆಟ್ ಪೇಪರ್ ಶಾಕ್: 3-4 ಜನ ಪ್ರಯಾಣಿಕರಿಗೆ ಒಂದೇ ಟಿಕೆಟ್ ನೀಡ್ತಿರೋ ಕಂಡಕ್ಟರ್ಸ್

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿವೆ. ಇತ್ತೀಚೆಗೆ ಡೀಸೆಲ್ ಅಭಾವ ಎದುರಿಸಿದ್ದ ಸಂಸ್ಥೆಗಳು, ಈಗ ಟಿಕೆಟ್ ಪೇಪರ್ ರೋಲ್ ಕೊರತೆಯಿಂದ ನಲುಗುತ್ತಿವೆ. ಪೂರೈಕೆದಾರರಿಗೆ ಹಣ ಪಾವತಿಸದ ಕಾರಣ, ಪೇಪರ್ ಸರಬರಾಜು ಸ್ಥಗಿತಗೊಂಡಿದೆ. ಶಕ್ತಿ ಯೋಜನೆ ಸಬ್ಸಿಡಿ ವಿಳಂಬವೂ ಇದಕ್ಕೆ ಕಾರಣ. ನಿರ್ವಾಹಕರು ಒಂದೇ ಟಿಕೆಟ್‌ನಲ್ಲಿ ಹಲವು ಪ್ರಯಾಣಿಕರನ್ನು ನಿಭಾಯಿಸುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗಿದೆ.

ಡೀಸೆಲ್ ಬಿಕ್ಕಟ್ಟಿನ ಬೆನ್ನಲ್ಲೇ ಕೆಎಸ್‌ಆರ್‌ಟಿಸಿಗೆ ಟಿಕೆಟ್ ಪೇಪರ್ ಶಾಕ್: 3-4 ಜನ ಪ್ರಯಾಣಿಕರಿಗೆ ಒಂದೇ ಟಿಕೆಟ್ ನೀಡ್ತಿರೋ ಕಂಡಕ್ಟರ್ಸ್
ಸಾಂದರ್ಭಿಕ ಚಿತ್ರ

Updated on: Oct 12, 2026 | 4:18 PM

ಮುಖ್ಯಾಂಶಗಳು

  • ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಒಂದಾದ ಮೇಲೊಂದರಂತೆ ಸಾಲು ಸಾಲು ಸಂಕಷ್ಟ
  • ಟಿಕೆಟ್ ಪೇಪರ್ ರೋಲ್ ತೀವ್ರ ಅಭಾವ ಎದುರಾಗಿದೆ
  • ಇಟಿಎಂ ಯಂತ್ರಗಳಲ್ಲಿ ಬಳಸುವ ಪೇಪರ್ ರೋಲ್ಸ್ ಖಾಲಿಯಾಗುತ್ತಿರುವ ಹಿನ್ನೆಲೆ

ಬೆಂಗಳೂರು, ಅ.12: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಒಂದಾದ ಮೇಲೊಂದರಂತೆ ಸಾಲು ಸಾಲು ಸಂಕಷ್ಟಗಳು ಎದುರಾಗುತ್ತಿವೆ. ಆಯಿಲ್​​ ಕಂಪನಿಗಳಿಗೆ ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಂಡು ಇತ್ತೀಚೆಗಷ್ಟೇ ಡೀಸೆಲ್ ಅಭಾವದಿಂದ ಬಸ್‌ಗಳು ಸ್ಥಗಿತಗೊಂಡಿದ್ದ ಘಟನೆ ಹಸಿಯಾಗಿರುವಾಗಲೇ, ಈಗ  ಟಿಕೆಟ್ ಪೇಪರ್ ರೋಲ್ ತೀವ್ರ ಅಭಾವ ಎದುರಾಗಿದೆ. ಡಿಸೇಲ್​ ಹಣ ಇಲ್ಲದೆ, ಬಸ್​​​ಗಳು ನಿಂತಲ್ಲ ಇದೆ ಎಂದು ಟಿವಿ9 ವರದಿ ಮಾಡಿದ ನಂತರ ಸರ್ಕಾರ 170 ಕೋಟಿಯನ್ನು ಬಿಡುಗಡೆ ಮಾಡಿತ್ತು. ಇದೀಗ ಟಿಕೆಟ್ ಪೇಪರ್ ರೋಲ್ ಕೊರತೆ ಉಂಟಾಗಿದೆ. ಇಟಿಎಂ ಯಂತ್ರಗಳಲ್ಲಿ ಬಳಸುವ ಪೇಪರ್ ರೋಲ್ಸ್ ಖಾಲಿಯಾಗುತ್ತಿರುವ ಹಿನ್ನೆಲೆಯಲ್ಲಿ, ಜೊತೆಯಲ್ಲಿ ಪ್ರಯಾಣಿಸುವ 3 ರಿಂದ 4 ಪ್ರಯಾಣಿಕರಿಗೆ ಒಂದೇ ಟಿಕೆಟ್ ನೀಡಿ ಟಿಕೆಟ್ ಪೇಪರ್ ಉಳಿಸಲು ಕಂಡಕ್ಟರ್‌ಗಳು ಹರಸಾಹಸ ಪಡುತ್ತಿದ್ದಾರೆ.

ಬಾಕಿ ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ಪೇಪರ್ ರೋಲ್ ಸರಬರಾಜುದಾರರು ಪೂರೈಕೆಯನ್ನು ತೀವ್ರವಾಗಿ ಕಡಿತಗೊಳಿಸಿದ್ದಾರೆ. ಇದರಿಂದಾಗಿ ಇಟಿಎಂ ಯಂತ್ರಗಳಲ್ಲಿ ಟಿಕೆಟ್ ಪ್ರಿಂಟ್ ಮಾಡಲು ಕಾಗದವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೇ ಸ್ಥಳಕ್ಕೆ ಪ್ರಯಾಣಿಸುವ ಕುಟುಂಬದ ಸದಸ್ಯರು ಅಥವಾ 3-4 ಜನ ಅಪರಿಚಿತ ಪ್ರಯಾಣಿಕರನ್ನು ಒಟ್ಟಿಗೆ ಸೇರಿಸಿ, ಕಂಡಕ್ಟರ್‌ಗಳು ಕೇವಲ ಒಂದು ಪ್ರಿಂಟೆಡ್ ಟಿಕೆಟ್ ಮಾತ್ರ ನೀಡುತ್ತಿದ್ದಾರೆ.

ಮುಖ್ಯವಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್-ಕಲಬುರಗಿ ಸೇರಿದಂತೆ ಪ್ರಮುಖ ಮಾರ್ಗಗಳ ಬಸ್‌ಗಳಲ್ಲಿ ಈ ಸಮಸ್ಯೆ ತೀವ್ರವಾಗಿದೆ. ಕಾಗದದ ಕೊರತೆ ನೀಗಿಸಲು ಕೆಲವೆಡೆ ಕಂಡಕ್ಟರ್‌ಗಳು ಸಹೋದ್ಯೋಗಿ ಕಂಡಕ್ಟರ್‌ಗಳಿಂದ ಪೇಪರ್ ರೋಲ್‌ಗಳನ್ನು ಸಾಲವಾಗಿ ಪಡೆದು ಬಸ್ ಕಾರ್ಯಾಚರಣೆ ನಡೆಸುವ ಅಸಹಾಯಕ ಸ್ಥಿತಿ ಎದುರಾಗಿದೆ.

ಇದನ್ನೂ ಓದಿ: ಟಿವಿ9 ಬಿಗ್ ಇಂಪ್ಯಾಕ್ಟ್: ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ್ಯ

‘ಶಕ್ತಿ’ ಯೋಜನೆ ಮತ್ತು ಸಾರಿಗೆ ಸಂಸ್ಥೆಗಳ ಆರ್ಥಿಕ ಬಿಕ್ಕಟ್ಟು:

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡಿದ ನಂತರ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಆದರೆ, ಸರ್ಕಾರದಿಂದ ಸಿಗಬೇಕಾದ ಸಬ್ಸಿಡಿ ಮತ್ತು ಮರುಪಾವತಿ ಹಣ ಸಮಯಕ್ಕೆ ಸರಿಯಾಗಿ ಬಿಡುಗಡೆಯಾಗದ ಕಾರಣ ಸಾರಿಗೆ ಸಂಸ್ಥೆಗಳು ತೀವ್ರ ಹಣಕಾಸಿನ ಅಭಾವ ಎದುರಿಸುತ್ತಿವೆ. ಕೆಲವೇ ದಿನಗಳ ಹಿಂದೆ ತೈಲ ಕಂಪನಿಗಳಿಗೆ ಸಾರಿಗೆ ಇಲಾಖೆಯು 170 ಕೋಟಿ ರೂ.ಗೂ ಅಧಿಕ ಬಾಕಿ ಪಾವತಿಸದ ಕಾರಣ ಡೀಸೆಲ್ ಪೂರೈಕೆ ಸ್ಥಗಿತಗೊಂಡು, ನೂರಾರು ಬಸ್ ಟ್ರಿಪ್‌ಗಳು ರದ್ದಾಗಿದ್ದವು. ಈಗ ಟಿಕೆಟ್ ಪೇಪರ್ ನೀಡುವ ಏಜೆನ್ಸಿಗಳಿಗೂ ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡಿದ್ದು, ಅವರು ಸರಬರಾಜು ತಡೆಡಿದಿದ್ದಾರೆ.

ಪ್ರಯಾಣಿಕರ ಒತ್ತಡ ಹಾಗೂ ಆರ್ಥಿಕ ಮುಗ್ಗಟ್ಟಿನ ನಡುವೆ ಬಸ್ಸುಗಳನ್ನು ಸರಾಗವಾಗಿ ಓಡಿಸಲು ದಿನನಿತ್ಯ ಹೋರಾಡುತ್ತಿರುವ ಕಂಡಕ್ಟರ್‌ಗಳು ಹಾಗೂ ಚಾಲಕರು ಈಗ ಪೇಪರ್ ಅಭಾವದಿಂದ ಸಾರ್ವಜನಿಕರ ಆಕ್ರೋಶಕ್ಕೂ ಗುರಿಯಾಗುವಂತಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us