ತಿರುಪತಿ ತಿಮ್ಮಪ್ಪನ ಮೊದಲ ಆರತಿಯಲ್ಲಿ ಇನ್ಮುಂದೆ ಕರ್ನಾಟಕದ ಸಚಿವರು, ಶಾಸಕರಿಗೂ ಅವಕಾಶ: ಸಿಎಂ ಮಹತ್ವದ ಘೋಷಣೆ!
ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕರ್ನಾಟಕದ ಪರವಾಗಿ ನೆರವೇರಿಸಲಾಗುವ ಪ್ರತಿದಿನದ ಮೊದಲ ಆರತಿ ಪೂಜೆಯಲ್ಲಿ ಇನ್ಮುಂದೆ ರಾಜ್ಯದ ಸಚಿವರು, ಶಾಸಕರು ಹಾಗೂ ಗಣ್ಯ ಅಧಿಕಾರಿಗಳಿಗೂ ಭಾಗವಹಿಸಲು ಶಿಷ್ಟಾಚಾರದ ಅನ್ವಯ ಮುಕ್ತ ಅವಕಾಶ ಕಲ್ಪಿಸಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಇದುವರೆಗೆ ಕೇವಲ ಮುಖ್ಯಮಂತ್ರಿಗಳಿಗಷ್ಟೇ ಇದ್ದ ಈ ವಿಶೇಷ ಸೌಲಭ್ಯವನ್ನು ವಿಸ್ತರಿಸಲಾಗುತ್ತಿದೆ.

ಮುಖ್ಯಾಂಶಗಳು
- ಕರ್ನಾಟಕದ ಸಚಿವರು ಹಾಗೂ ಶಾಸಕರಿಗೂ ಇನ್ಮುಂದೆ ತಿರುಮಲದಲ್ಲಿ ಮೊದಲ ಆರತಿಯಲ್ಲಿ ಪಾಲ್ಗೊಳ್ಳುವ ಅವಕಾಶ
- ಇದುವರೆಗೆ ಕೇವಲ ಸಿಎಂಗಳಿಗಷ್ಟೇ ಇದ್ದ ವಿಶೇಷ ಸೌಲಭ್ಯ
- ಕರ್ನಾಟಕ ಸರ್ಕಾರದ ವತಿಯಿಂದ ಶೀಘ್ರದಲ್ಲೇ ಅಧಿಕೃತ ಪ್ರೋಟೋಕಾಲ್ ನಿಯಮಾವಳಿ ಬಿಡುಗಡೆ
ಬೆಂಗಳೂರು, ಜುಲೈ 13: ಆಂಧ್ರಪ್ರದೇಶದ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿದಿನ ನೆರವೇರಿಸಲಾಗುವ ಮೊದಲ ಆರತಿಯಲ್ಲಿ (First Aarti) ಇನ್ನು ಮುಂದೆ ಕರ್ನಾಟಕದ ಸಚಿವರು, ಶಾಸಕರು, ನ್ಯಾಯಾಧೀಶರು ಹಾಗೂ ಹಿರಿಯ ಅಧಿಕಾರಿಗಳು ಸೇರಿದಂತೆ ಗಣ್ಯ ವ್ಯಕ್ತಿಗಳಿಗೆ ಭಾಗವಹಿಸಲು ಶಿಷ್ಟಾಚಾರದ (Protocol) ಅನ್ವಯ ಮುಕ್ತ ಅವಕಾಶ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಿಸಿದ್ದಾರೆ.
ಬೆಂಗಳೂರಿನ ಬನಶಂಕರಿಯಲ್ಲಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಈ ಕುರಿತು ರಾಜ್ಯ ಸರ್ಕಾರದಿಂದ ಶೀಘ್ರದಲ್ಲೇ ಅಧಿಕೃತ ಪ್ರೋಟೋಕಾಲ್ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.
ಇದುವರೆಗೆ ಕೇವಲ ಮುಖ್ಯಮಂತ್ರಿಗಳಿಗಷ್ಟೇ ಇತ್ತು ಅವಕಾಶ!
ತಿರುಪತಿ ತಿರುಮಲ ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ ಕರ್ನಾಟಕದ ಪರವಾಗಿ ಮೊದಲ ಆರತಿಯನ್ನು ಸಲ್ಲಿಸಲಾಗುತ್ತದೆ. ಈ ಸಂಪ್ರದಾಯಕ್ಕೆ 400 ವರ್ಷಗಳ ಇತಿಹಾಸವಿದೆ. ಹಂಪಿಯ ವಿಜಯನಗರ ಸಾಮ್ರಾಜ್ಯದ ಅರಸರು ಹಾಗೂ ಅವರ ನಂತರ ಮೈಸೂರಿನ ಒಡೆಯರ್ ರಾಜವಂಶದವರು (ವಿಶೇಷವಾಗಿ ಒಂದನೇ ರಾಜ ಒಡೆಯರ್) ತಿರುಪತಿ ವೆಂಕಟೇಶ್ವರ ಸ್ವಾಮಿಗೆ ಅಪಾರ ಪ್ರಮಾಣದ ಚಿನ್ನಾಭರಣ, ಭೂಮಿ ಹಾಗೂ ನಿತ್ಯ ಪೂಜಾ ಕೈಂಕರ್ಯಗಳಿಗೆ ಬೇಕಾದ ಸಾಮಗ್ರಿಗಳನ್ನು ದಾನವಾಗಿ ನೀಡುತ್ತಿದ್ದರು. ಮೈಸೂರು ಸಂಸ್ಥಾನವು ದೇವಸ್ಥಾನದ ದೈನಂದಿನ ಪೂಜಾ ವೆಚ್ಚಗಳನ್ನು ಭರಿಸುತ್ತಿದ್ದರಿಂದ ಮತ್ತು ಸಾಮಗ್ರಿಗಳನ್ನು ಪೂರೈಸುತ್ತಿದ್ದರಿಂದ, ಪ್ರತಿದಿನ ಬೆಳಿಗ್ಗೆ ದೇವರಿಗೆ ಬೆಳಗುವ ಪ್ರಥಮ ಆರತಿಯನ್ನು ಸ್ವೀಕರಿಸುವ ಗೌರವ ಮತ್ತು ಹಕ್ಕು ಮೈಸೂರು ರಾಜರಿಗೆ ಲಭಿಸಿತು.
ಸ್ವಾತಂತ್ರ್ಯಾನಂತರ ಈ ರಾಜಪ್ರಭುತ್ವದ ಹಕ್ಕನ್ನು ಕರ್ನಾಟಕ ಸರ್ಕಾರವು ಕಾನೂನುಬದ್ಧವಾಗಿ ಮುಂದುವರಿಸಿಕೊಂಡು ಬಂದಿದೆ. ಶಿಷ್ಟಾಚಾರದ ಪ್ರಕಾರ ಪ್ರತಿ ಮುಂಜಾನೆ ಗರ್ಭಗುಡಿಯ ಮುಂಭಾಗದಲ್ಲಿ (ಕುಲಶೇಖರ ಪಡಿ) ನಿಂತು ಇಡೀ ಕರ್ನಾಟಕದ ಪರವಾಗಿ ಈ ಮೊದಲ ಆರತಿಯನ್ನು ಹಾಗೂ ದೇವರ ಪ್ರಸಾದವನ್ನು ಕರ್ನಾಟಕದ ಮುಖ್ಯಮಂತ್ರಿಗಳು ಸ್ವೀಕರಿಸಬೇಕು. ಇಲ್ಲಿಯವರೆಗೆ ಅವರ ಅನುಪಸ್ಥಿತಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ನೇಮಕಗೊಂಡ ವಿಶೇಷ ಅಧಿಕಾರಿಯೊಬ್ಬರು ಸ್ವೀಕರಿಸುತ್ತಿದ್ದರು.
ನನ್ನ ಅಧಿಕಾರಾವಧಿಯ ಅತಿ ದೊಡ್ಡ ಘೋಷಣೆ ಇದು ಎಂದ ಸಿಎಂ
ಇನ್ನು ಮುಂದೆ ಕರ್ನಾಟಕ ಸರ್ಕಾರವನ್ನು ಪ್ರತಿನಿಧಿಸಿ ತಿರುಮಲಕ್ಕೆ ಭೇಟಿ ನೀಡುವ ಸಚಿವರು, ಶಾಸಕರು, ಸಂಸದರು, ನ್ಯಾಯಾಧೀಶರು ಹಾಗೂ ಹಿರಿಯ ಐಎಎಸ್-ಐಪಿಎಸ್ ಅಧಿಕಾರಿಗಳಿಗೂ ಈ ಪವಿತ್ರ ಆರತಿ ವೀಕ್ಷಿಸುವ ಮತ್ತು ದೇವರ ದರ್ಶನ ಪಡೆಯುವ ಸೌಲಭ್ಯ ಸಿಗುವಂತೆ ಆದೇಶ ಹೊರಡಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಡಿ.ಕೆ ಶಿವಕುಮಾರ್, ನಮ್ಮ ರಾಜ್ಯದ ಅನೇಕ ಜನಪ್ರತಿನಿಧಿಗಳು ಮತ್ತು ಶಾಸಕರು ತಿರುಪತಿಗೆ ಹೋದಾಗ ಸೂಕ್ತ ದರ್ಶನ ಸಿಗದೆ ಬರಿಗೈಲಿ ವಾಪಸ್ ಬಂದ ಉದಾಹರಣೆಗಳಿವೆ. ಇನ್ಮುಂದೆ ಕರ್ನಾಟಕದ ಪರವಾಗಿ ಸೇವೆ ಸಲ್ಲಿಸುವ ಎಲ್ಲ ಗಣ್ಯರಿಗೂ ತಿಮ್ಮಪ್ಪನ ಎದುರು ನಿಂತು ಪ್ರಾರ್ಥಿಸುವ ಈ ಪರಮ ಸೌಭಾಗ್ಯ ಸಿಗಲಿದೆ. ಇದು ನನ್ನ ಮುಖ್ಯಮಂತ್ರಿ ಅಧಿಕಾರಾವಧಿಯ ಅತ್ಯಂತ ಪ್ರಮುಖ ಮತ್ತು ಮಹತ್ವದ ಘೋಷಣೆಯಾಗಿದೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.
ಇದನ್ನೂ ಓದಿ ಪತ್ನಿ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಇದೇ ವೇಳೆ ತಮ್ಮ ವೈಯಕ್ತಿಕ ಭಾವನೆ ಹಂಚಿಕೊಂಡ ಸಿಎಂ, ತಿರುಪತಿ ವೆಂಕಟೇಶ್ವರ ಸ್ವಾಮಿ ತಮ್ಮ ಮನೆದೇವರಾಗಿದ್ದರೂ, ಜೈಲಿನಿಂದ ಬಿಡುಗಡೆಯಾದ ನಂತರ ಇತ್ತೀಚಿನವರೆಗೂ ತಮಗೆ ತಿರುಮಲಕ್ಕೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಇತ್ತೀಚಿನ ಭೇಟಿಯ ಸಂದರ್ಭದಲ್ಲಿ ಈ ಮಹತ್ವದ ಆಲೋಚನೆ ಬಂತು ಎಂದು ನೆನಪಿಸಿಕೊಂಡರು. ಅಲ್ಲದೆ, ಹಿಂದೆ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ತಿರುಪತಿಯಲ್ಲಿ ಕರ್ನಾಟಕ ಟ್ರಸ್ಟ್ ರಚಿಸಿ ನನಗೆ ಅದರ ಜವಾಬ್ದಾರಿ ನೀಡಿದ್ದರು. ಆಗ ಈ ಜವಾಬ್ದಾರಿ ಹೊರುವುದರ ಒಳಗೆ ನಮ್ಮ ಆಡಳಿತಾವಧಿ ಮುಗಿದಿತ್ತು. ಈಗ ಸಮಯ ಕೂಡಿಬಂದಿದೆ ಎಂದು ಸಿಎಂ ಹೇಳಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:28 am, Mon, 13 July 26




