ಬೆಂಗಳೂರು, ಫೆ.27: ಶೇಕಡ 60 ರಷ್ಟು ಕನ್ನಡ ನಾಮಫಲಕ (Kannada Board) ಕಡ್ಡಾಯಕ್ಕೆ ನಾಳೆ ಡೆಡ್ಲೈನ್ ಹಿನ್ನೆಲೆ ಎಚ್ಚೆತ್ತ ವ್ಯಾಪಾರಿಗಳು ನಿಯಮಾನುಸಾರ ಕನ್ನಡ ಬೋರ್ಡ್ಗಳನ್ನು ಅಳವಡಿಕೆ ಮಾಡುತ್ತಿದ್ದಾರೆ. ಬೆಂಗಳೂರು (Bengaluru) ನಗರದ ಅವೆನ್ಯೂ ರೋಡ್, ಚಿಕ್ಕಪೇಟೆಯಲ್ಲಿ ಹಳೇ ಬೋರ್ಡ್ಗಳನ್ನು ತೆರವು ಮಾಡಿ ಶೇಕಡಾ 60 ರಷ್ಟು ಕನ್ನಡ ನಾಮಫಲಕ ಅಳವಡಿಕೆ ಮಾಡುತ್ತಿದ್ದಾರೆ. ಹಿಂದೆ ಚಿಕ್ಕದಾಗಿದ್ದ ಕನ್ನಡ ಬೋರ್ಡ್ಗಳನ್ನೂ ಬದಲಾವಣೆ ಮಾಡಿ ದೊಡ್ಡ ಅಕ್ಷರಗಳಲ್ಲೇ ಬೋರ್ಡ್ಗಳನ್ನು ಅಳವಡಿಕೆ ಮಾಡುತ್ತಿದ್ದಾರೆ.
ಕನ್ನಡ ನಮ್ಮ ಮಾತೃಭಾಷೆ, ಅದನ್ನ ಬಳಸಬೇಕು. ಬೇರೆ ಭಾಷೆಗಳಿಗೆ ಅವರರವರ ರಾಜ್ಯದಲ್ಲಿ ಬೆಲೆ ಕೊಡುತ್ತಾರೆ. ನಮ್ಮ ರಾಜ್ಯದಲ್ಲಿ ಕನ್ನಡ ಬೆಳೆಯಬೇಕು. ಕನ್ನಡ ನಾಮಫಲಕ ಅಷ್ಟೇ ಅಲ್ಲ, ಕನ್ನಡದಲ್ಲೇ ವ್ಯವಹರಿಸಬೇಕು ಎಂದು ಕೆಲ ವ್ಯಾಪಾರಿಗಳು ಹೇಳಿದ್ದಾರೆ. ಶೇಕಡ 60 ರಷ್ಟು ಕನ್ನಡ ನಾಮಫಲಕ ಅಳವಡಿಕೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಎಲ್ಲೆಡೆ ಕನ್ನಡ ನಾಮಫಲಕ ಕಡ್ಡಾಯವಾಗಲಿ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡ ನಾಮಫಲಕ ಅಳವಡಿಕೆಗೆ ಡೆಡ್ಲೈನ್ ಮುಗಿದರೂ ಕನ್ನಡ ಬಳಕೆಯಾಗಿಲ್ಲ. ನಗರದಲ್ಲಿ ಬಹುತೇಕ ಅಂಗಡಿಗಳಲ್ಲಿ ನಾಮಫಲ ಬದಲಾಗಿಲ್ಲ. ನಗರದಲ್ಲಿ ಶೇಕಡಾ 60 ರಷ್ಟು ಅಂಗಡಿಗಳಲ್ಲಿ ನಾಮಫಲಕ ಬದಲಾಗಿದೆ. ಇನ್ನೂ 40 ಪರ್ಸೆಂಟ್ ಬಾಕಿ ಇದೆ. ಸರ್ಕಾರ ಆದೇಶ ಮಾಡಿ ಕ್ರಮವಹಿಸದ ಹಿನ್ನಲೆ ಕರವೇ ಮತ್ತೆ ಹೋರಾಟದ ಎಚ್ಚರಿಕೆ ನೀಡಿದೆ. ಶೇಕಡಾ 100 ಕ್ಕೆ 100 ನಾಮಫಲಕ ಕನ್ನಡ ಬಳಕೆ ಮಾಡಬೇಕು ಎಂದು ನಾರಾಯಣಗೌಡ ಹೇಳಿದ್ದಾರೆ.
ಇದನ್ನೂ ಓದಿ: ಕಡ್ಡಾಯ ಕನ್ನಡ ನಾಮಫಲಕ ಅಳವಡಿಸದಿದ್ರೆ ಕರ್ನಾಟಕ ಬಂದ್ ಎಚ್ಚರಿಕೆ ಕೊಟ್ಟ ವಾಟಾಳ್ ನಾಗರಾಜ್
ಕನ್ನಡ ನಾಮಫಲಕ ಅಳವಡಿಕೆಗೆ ಅಂಗಡಿ ಮಾಲೀಕರು ನಿರ್ಲಕ್ಷ್ಯ ತೋರುತ್ತಿರುವ ಹಿನ್ನೆಲೆ ಮಾರ್ಚ್ 1 ರಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಮಹತ್ವದ ಸಭೆ ನಡೆಸಲು ಮುಂದಾಗಿದೆ. ಕರವೇ ರಾಜ್ಯಾಧ್ಯಕ್ಷ ನಾರಯಣಗೌಡ ನೇತೃತ್ವದಲ್ಲಿ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ಸಭೆ ನಡೆಯಲಿದೆ. ಸಭೆಯಲ್ಲಿ ಮುಂದಿನ ನಡೆಯನ್ನು ತೀರ್ಮಾನಿಸಲಾಗುತ್ತದೆ.
ಕನ್ನಡ ಬೋರ್ಡ್ ಅಳವಡಿಕೆ ವಿಚಾರವಾಗಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದಕ್ಕೆ ಪರೋಕ್ಷವಾಗಿ ತಿರುಗೇಟು ನೀಡಿದ ನಾರಾಯಣಗೌಡ, ಕರ್ನಾಟಕ ಬಂದ್ನಿಂದ ಏನು ಪ್ರಯೋಜನವಿಲ್ಲ. ಬಂದ್ ಮಾಡುವುದರಿಂದ ಯಾವುದು ಆಗುವುದಿಲ್ಲ. ಬಂದ್ ಬಿಟ್ಟು ಬನ್ನಿ ಹೋರಾಟಕ್ಕೆ. ಕನ್ನಡಕ್ಕಾಗಿ ಜೈಲ್ ಬರೋ ಚಳವಳಿ ಮಾಡೋಣಾ ಬನ್ನಿ ಎಂದರು.
ಬೆಂಗಳೂರಿನ ಹಲವೆಡೆ ಇಂಗ್ಲಿಷ್ ಬೋರ್ಡ್ಗಳು ಕನ್ನಡ ಬೋರ್ಡ್ಗಳಾಗಿ ಬದಲಾವಣೆಯಾಗುತ್ತಿದ್ದರೆ, ಬಳ್ಳಾರಿ ನಗರದಲ್ಲಿ ಆಂಗ್ಲ ಭಾಷೆ ಬೋರ್ಡ್ಗಳು ರಾರಾಜಿಸುತ್ತಿವೆ. ಶೇಕಡಾ 60 ಕ್ಕೂ ಅಧಿಕ ಇಂಗ್ಲಿಷ್ ಪದ ಬಳಕೆ ಮಾಡಲಾಗಿದೆ. ಆ ಮೂಲಕ ಅಂಗಡಿ ಮಾಲೀಕರು ರಾಜ್ಯ ಸರ್ಕಾರದ ಆದೇಶಕ್ಕೂ ಡೋಂಟ್ ಕೇರ್ ಎಂದಿದ್ದಾರೆ.
ಹೊಸಪೇಟೆ ರೋಡ್, ಬೆಂಗಳೂರ ರೋಡ್, ಮುಖ್ಯ ಮಾರುಕಟ್ಟೆಯಲ್ಲಿ ಆಂಗ್ಲ ಪದ ಬಳಕೆ ಹೆಚ್ಚಿದ್ದ ಬೋರ್ಡ್ಗಳೇ ಕಾಣಸಿಗುತ್ತಿವೆ. ಕೆಲವು ಅಂಗಡಿಗಳಲ್ಲಿ ಶೇಕಡಾ 80 ರಷ್ಟು ಆಂಗ್ಲ ಪದಗಳನ್ನು ಬಳಕೆ ಮಾಡಲಾಗಿದೆ. ಬೋರ್ಡ್ನಲ್ಲಿ ಶೇ.60 ರಷ್ಟು ಕನ್ನಡ ಪದ ಬಳಕೆಗೆ ನಾಳೆ ಕೊನೆ ದಿನಾಂಕ ಇದ್ದರೂ ಮಾಲೀಕರು ನಿರ್ಲಕ್ಷ್ಯ ತೋರುತ್ತಿದ್ದಾರೆ.
ವರದಿ: ಶಾಂತಮೂರ್ತಿ, ಟಿವಿ9 ಬೆಂಗಳೂರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:39 pm, Tue, 27 February 24