ಕನ್ನಡ ನಾಮಫಲಕ: ರಾಜ್ಯ ಸರ್ಕಾರ ಮಾತು ತಪ್ಪಿದರೆ ಎಲ್ಲಾ ಜಿಲ್ಲೆ ಗುಡುಗುತ್ತದೆ: ಕರವೇ ಅಧ್ಯಕ್ಷ ನಾರಾಯಣಗೌಡ

ಬೆಳಗಾವಿಯಲ್ಲಿ ಕನ್ನಡ ಗಟ್ಟಿಗೊಳಿಸುವ ಉದ್ದೇಶದಿಂದ ಜಿಲ್ಲೆಯ ಕನ್ನಡ ಭವನದಲ್ಲಿ ಕರವೇ ರಾಜ್ಯ ಕಾರ್ಯಕಾರಣಿ ಸಭೆ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕರವೇ ಅಧ್ಯಕ್ಷ ನಾರಾಯಣಗೌಡ, ಕನ್ನಡದಲ್ಲಿ ಬೋರ್ಡ್ ಹಾಕಲು ಫೆ.28ರ ವರೆಗೂ ಬೆಂಗಳೂರಿನ ಅಂಗಡಿಗಳಿಗೆ ಡೆಡ್​ಲೈನ್​​ ನೀಡಲಾಗಿದೆ. ಮಾತು ತಪ್ಪಿದರೆ ಎಲ್ಲಾ ಜಿಲ್ಲೆಗಳಲ್ಲೂ ಗುಡುಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕನ್ನಡ ನಾಮಫಲಕ: ರಾಜ್ಯ ಸರ್ಕಾರ ಮಾತು ತಪ್ಪಿದರೆ ಎಲ್ಲಾ ಜಿಲ್ಲೆ ಗುಡುಗುತ್ತದೆ: ಕರವೇ ಅಧ್ಯಕ್ಷ ನಾರಾಯಣಗೌಡ
ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ
Follow us
TV9 Web
| Updated By: Rakesh Nayak Manchi

Updated on: Feb 24, 2024 | 6:05 PM

ಬೆಳಗಾವಿ, ಫೆ.24: ಜಿಲ್ಲೆಯಲ್ಲಿ ಕನ್ನಡ ಗಟ್ಟಿಗೊಳಿಸುವ ಉದ್ದೇಶದಿಂದ ಬೆಳಗಾವಿ (Belagavi) ಕನ್ನಡ ಭವನದಲ್ಲಿ ಇಂದು ಕರವೇ ರಾಜ್ಯ ಕಾರ್ಯಕಾರಣಿ ಸಭೆ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕರವೇ ಅಧ್ಯಕ್ಷ ನಾರಾಯಣಗೌಡ (Narayana Gowda), ಫೇ.28 ರ ಒಳಗೆ ಕನ್ನಡಮಯವಾಗುತ್ತದೆ ಅಂತಾ ಸರಕಾರ ಹೇಳಿ ಸಮಯ ತೆಗೆದುಕೊಂಡಿದೆ. ಸರಕಾರ ಮಾತು ತಪ್ಪಿದರೆ 32 ಜಿಲ್ಲೆಯವರು ಗುಡುಗಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಅಲ್ಲದೆ, ಇನ್ನೊಂದು ಹೋರಾಟದಲ್ಲಿ ನಮ್ಮನ್ನ ಬಂಧಿಸಿ, ಆಗ ಗೊತ್ತಾಗುತ್ತದೆ. ಇಡೀ ರಾಜ್ಯವೇ ಹೊತ್ತಿ ಉರಿಯುತ್ತದೆ ಎಂದರು.

ಕನ್ನಡ ಭಾಷೆ ಉಳಿವಿಗಾಗಿ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಯಿತು. ಬೆಂಗಳೂರಿನಲ್ಲಿ ಕರವೇ ಹೋರಾಟದ ಸಂದರ್ಭದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯುತ್ತದೆ. ಸಭೆಯಲ್ಲಿ ಪೋಲಿಸ್ ಕಮಿಷನರ್ ದಯಾನಂದ ಅವರು ಸಿದ್ದರಾಮಯ್ಯ ಅವರಿಗೆ ತಲೆ ತುಂಬುವ ಕೆಲಸ ಮಾಡಿದರು. ನಾರಾಯಣಗೌಡ ಅವರನ್ನು ಮೂರು ತಿಂಗಳು ಬಂಧಿಸಿದರೆ ಚೆನ್ನಾಗಿರುತ್ತದೆ ಅಂತಾ ದಯಾನಂದ ಹೇಳಿದ್ದ ಎಂದು ಆರೋಪಿಸಿದರು.

ಪ್ರತಿ ಹೋರಾಟದಲ್ಲಿ ನಮಗೆ ಮಾಧ್ಯಮಗಳು ಸಾಕಷ್ಟು ಸಹಕಾರ ನೀಡುವ ಕೆಲಸ ಮಾಡಿವೆ. ನಮ್ಮ ಹೋರಾಟದಲ್ಲಿ ನಮಗೆ ಸದಾ ಬೆನ್ನೆಲುಬಾಗಿ ನಿಂತು ನಮ್ಮ ಜೈಲಿನಿಂದ ಬಿಡಿಸಿದವರು ನಮ್ಮ ವಕೀಲರು ಎಂದು ಹೇಳಿ ಮಾಧ್ಯಮ ಹಾಗೂ ವಕೀಲರಿಗೆ ಅಭಿನಂದನೆ ಸಲ್ಲಿಸಿದರು.

ನಮ್ಮನ್ನ ಬಂಧಿಸಿ ನಮ್ಮನ್ನ ಇನ್ನು ಜೈಲಿಗೆ ಹಾಕಿ ಭಯ ಪಡುವುದಿಲ್ಲ. ಹೆಂಡರು ಹೋಗಲಿ ಮಕ್ಕಳು ಹೋಗಲಿ, ಕನ್ನಡ ನಮ್ಮ ಜಗತ್ತ ಬೆಳಗಿಸೊವರೆಗೂ ನಮ್ಮ ಹೋರಾಟ ನಡೆಯಲಿದೆ. ನಾಡಿನ ಸಲುವಾಗಿ ಮನೆ ಬಿಟ್ಟು ಹೊರಗೆ ಬಂದು ಹೋರಾಟ ಮಾಡುವವರು ನಾವು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಹಾಗೂ ಯಡಿಯೂರಪ್ಪ ಅವರೇ ನಿಮ್ಮ ಕೊಡುಗೆ ರಾಜ್ಯಕ್ಕೆ ಏನಾದರೂ ಇದೇನಾ? ರಾಜಕಾರಣಿಗಳ ಕೊಡುಗೆ ಬಗ್ಗೆ ಪ್ರಶ್ನೆ ಮಾಡಿದಾಗ ಬರುವ ಉತ್ತರ ಶೂನ್ಯ ಎಂದರು.

ಇದನ್ನೂ ಓದಿ: ಕನ್ನಡಿಗರಿಗೆ ಕಂಪನಿಗಳಲ್ಲಿ ಉದ್ಯೋಗ ಮೀಸಲಾತಿಗಾಗಿ ಮುಂದಿನ ಹೋರಾಟ: ಕರವೇ ನಾರಾಯಣಗೌಡ

ಬೆಳಗಾವಿ ಅಂತಾ ಅಂದರೆ ಬೆಳಗಾವಿ ನಮ್ಮದು ಅಂತಾ ಹೇಳಿದ್ದು ಕರವೇ ಹೋರಾಟದಿಂದ ಶುರುವಾಗಿದೆ. ಕರ್ನಾಟಕದ ಸಚಿವ ಸಂಪುಟ ಅಂದರೆ ನಮ್ಮ ಕನ್ನಡಿಗರು. ಅಪ್ಪಟ ಕನ್ನಡಿಗರು ಈ ಸಭೆಯಲ್ಲಿ ಕುಳಿತಿರುವುದೆ ನಮ್ಮ ಸಚಿವ ಸಂಪುಟ ಎಂದರು.

ಪಾಟೀಲ ಪುಟ್ಟಪ್ಪ, ಕುವೆಂಪು ಅವರೇ ನಮ್ಮ ನಾಯಕರು, ಅವರೆ ನಮ್ಮ ದೇವರು. ನಮಗೆ ಕನ್ನಡವೇ ಧರ್ಮ, ಕನ್ನಡವೇ ಜಾತಿ. ನಿಮ್ಮದು ಯಾವುದು ಎಂದು ರಾಜಕೀಯ ನಾಯಕರ ವಿರುದ್ಧ ಅಕ್ರೋಶ ಹೊರಹಾಕಿದ ನಾರಾಯಣಗೌಡ, ನನ್ನನ್ನು ಅಡಗಿಸಿದರೆ ಕರವೇ ಮುಚ್ಚುತ್ತೆ ಎಂದು ತಿಳಿದು ಕೊಂಡಿದ್ದೀರಾ? ಕರವೇ ಬೇರು ಸಾಕಷ್ಟು ಆಳವಾಗಿದೆ, ಅದನ್ನ ಅಡಗಿಸಲು ಅಸಾಧ್ಯವಾದ ಮಾತು ಎಂದರು.

ಕನ್ನಡವನ್ನ, ಕರವೇ ಅವರನ್ನ ಎದುರು ಹಾಕಿಕೊಂಡವರು ಯಾರು ಉಳದಿಲ್ಲಾ ನಮ್ಮ ಮುಂದೆ. ನಮ್ಮ ಹೆಣ್ಣ ಮಕ್ಕಳು ಶಾಲು ಹಾಕಿ ಕುತಕ್ಕೊಂಡಾರಲ್ಲಾ ಅವರೆಲ್ಲಾ ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮ ಹೆತ್ತವರು ಅನಸುತ್ತದೆ. ನಾನು ನನ್ನ 35 ವರ್ಷದಲ್ಲಿ ನನ್ನ ಬದುಕಿನ‌ ಬಗ್ಗೆ ಯೋಚನೆ ಮಾಡಿಲ್ಲ. ಇವತ್ತಿಗೂ ನಾನು ನನ್ನ ಬದುಕಿನ ಬಗ್ಗೆ ಯೋಚನೆ ಮಾಡಿಲ್ಲ. ನಾನು ಇವತ್ತಿಗೂ ಎದೆಗುಂದದೆ ಮಾತಾಡುವ ಶಕ್ತಿ ಕೊಟ್ಟಿದ್ದು ನೀವು ಎಂದು ಕಾರ್ಯಕರ್ತರ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದರು.

ಕನ್ನಡ ನಾಡನ್ನ ಪ್ರೀತಿಯಿಂದ ಕಟ್ಟೋಣ, ನಾವು ಯಾರನ್ನ ದ್ವೇಷ ಮಾಡಲು ಬಂದಿಲ್ಲ. ನಮ್ಮ ನಾಡು ನುಡಿ ಹಂಚಿಕೊಂಡು ಬದುಕಿ, ನಮ್ಮ ಭಾಷೆ ಹಂಚಿಕೊಂಡು ಬದುಕಿ ಎಂದು ರಾಜ್ಯದಲ್ಲಿರುವ ಹೊರ ರಾಜ್ಯದವರಿಗೆ ಎಚ್ಚರಿಕೆ ನೀಡಿದರು. ನಮ್ಮಲ್ಲಿ ಬೇರೆ ಬೇರೆ ಭಾಷೆ ಮಾತಾಡುವವರು ಇದ್ದಾರೆ. ಆದರೆ ಕನ್ನಡ ಭಾಷೆಯನ್ನು ಪ್ರೀತಿಸುವವರು ಇದ್ದಾರೆ. ಬೆಳಗಾವಿಯಲ್ಲಿ ಇರುವ ಮರಾಠಿಗರಿಗೆ ದ ರಾ ಬೇಂದ್ರೆ ಆಗಿ ಅಂತಾ ಹೇಳುತ್ತೇವೆ. ಅದು ತಪ್ಪು ಅಂದರೆ ನಾವು ಅದನ್ನ ಒಪ್ಪಿಕ್ಕೊಳುವುದಿಲ್ಲ. ತಕ್ಕ ಉತ್ತರ ಕೊಡಬೇಕಾಗುತ್ತದೆ ಎಂದರು.

ನಾನು ಸುಪ್ರೀಂ ಕೋರ್ಟಗೆ ಹೋಗುತ್ತೇನೆ ಅಂತ ಯಾವನೋ ಮರಾಠಿಯವನು ಹೇಳುತ್ತಿದ್ದಾನೆ. ಹೋಗರಪಾ ನಾವು ಬೇಡಾ ಅಂದಿದ್ದೇವಾ? ಸುಪ್ರೀಂ ಕೋರ್ಟ್​​ಗಾದರೂ ಹೋಗಿ ಅವರ ಅಪ್ಪನ ಕೋರ್ಟ್​​ಗಾದರೂ ಹೋಗಿ. ಇಲ್ಲಿರುವ ಎಂಇಎಸ್​ನವರಿಗೆ ಬೆಳಗಾವಿ ಕಾರ್ಪೋರೆಟರ್ ಆಗಲಿಕೆ ಆಗಲ್ಲ. ಗಾಂಚಾಲಿ ಬಿಡಿ ಸರಿಯಾಗಿ ಇರಿ ಎಂದು ಎಂಇಎಸ್ ನಾಯಕರಿಗೆ ತಿರುಗೇಟು ನೀಡಿದರು.

ನಾನು ಹೇಳಿದ್ದಷ್ಟು ಇಲ್ಲಿನ ರಾಜಕಾರಣಿಗಳು ಮಾತಾಡಲ್ಲ. ವಿಭಜನೆ ಬಗ್ಗೆ ಮಾತಾಡುತ್ತಾರೆ. ಎಂ.ಬಿ.ಪಾಟೀಲ ಬೃಹತ್ ಕೈಗಾರಿಕೆ ಸಚಿವರು, ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳನ್ನ ಸ್ಥಾಪನೆ ಮಾಡಿ. ಪ್ರತ್ಯೇಕ ರಾಜ್ಯದ ಬಗ್ಗೆ ಮಾತಾಡುವುದನ್ನ ಬಿಟ್ಟು ಉದ್ಯಮಗಳನ್ನ ಸ್ಥಾಪನೆ ಮಾಡಿ. ಯುವಕರಿಗೆ ಕೆಲಸ ಕೊಡಿ ಎಂದರು.

ಕರವೇ ಕಾರ್ಯಕರ್ತರು ಪಾಟೀಲ ಪುಟ್ಟಪ್ಪನವರಂತೆ ಆಗಬೇಕು

ಬರುವವರನ್ನ ಸೇರಿಸಿಕೊಂಡು ಕನ್ನಡದ ಬಗ್ಗೆ ತಿಳಿಸಿ ಅವರಿಗೆ ಕನ್ನಡದ ಅಂತರಗವನ್ನ ತುಂಬಿ. ಕರವೇ ಸೇರಿದವರಿಗೆ ನಾಡು ನುಡಿ ಕಟ್ಟುವ ಕೆಲಸ ಬಗ್ಗೆ ತಿಳಸಿ. ಒಂದು ಹನಿ ರಕ್ತ ಉಳಿಯೋವರೆಗೂ ನಾಡು ನುಡಿಗಾಗಿ ಬದುಕಬೇಕು. ಪಾಟೀಲ ಪುಟ್ಟಪ್ಪನವರು ಹೇಳಿದ ಹಾಗೆ ಕನ್ನಡ ಇಲ್ಲದ ಜಾಗ ನರಕ ಇದ್ದಂತೆ ಎಂದು ಹೇಳಿದ್ದರು. ಎಲ್ಲಾ ಕರವೇ ಕಾರ್ಯಕರ್ತರು ಪಾಟೀಲ ಪುಟ್ಟಪ್ಪನವರಂತೆ ಆಗಬೇಕು ಎಂದು ನಾರಾಯಣಗೌಡ ಹೇಳಿದರು.

ಹೋರಾಟದಲ್ಲಿ ಬಂಧನವಾದಾಗ ನಾನು ಪೋಲಿಸನವರು ತಂದ ಊಟಾ ಮಾಡಲಿಲ್ಲ. ನನ್ನ ಮಕ್ಕಳು ಬೆಳಗ್ಗೆ 5 ಗಂಟೆ ಸುಮಾರಿಗೆ ಗಂಜಿ ತಂದಿದ್ದನ್ನ ಕುಡಿದಿದ್ದೇನೆ. ನನ್ನ ಮುಂದಿನ ಶೆಲ್​ನಲ್ಲಿ ಇದ್ದ ಆ ಖೈದಿ ಗಟ್ಟಿ ಧ್ವನಿ ಮಾಡಿ ಕೂಗಿದ. ಗೌಡ್ರೆ ಗೌಡ್ರೆ ನೀವು ಮಲಗಬೇಡಿ ನಿಮ್ಮ ವಿರುದ್ಧ ಸಂಚು ನಡಿತಾ ಇದೆ ಎಂದ. ನಾನು ಮಲಗಲೇ ಇಲ್ಲ. ಇಷ್ಟೇಲ್ಲಾ ಮಾಡಿದವರಿಗೆ ಹೆಂಗೆ ಹೊಡಿಬೇಕು. ಹೇಗೆ ಪಾಠ ಕಲಿಸಬೇಕು ಎಂದರು.

ಈ ಭಾಗದಲ್ಲಿ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಇಲ್ಲಿನ ರಾಜಕಾರಣಿಗಳು ತಮ್ಮ ಮನೆಯವರನ್ನ ಶಾಸಕರನ್ನಾಗಿ, ಸಂಸದರಾಗಿ, ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲರೂ ಅವರೇ ಆಗಿ ಬಿಟ್ಟಿದ್ದಾರೆ. ಒಬ್ಬ ಕನ್ನಡಪರ ಹೋರಾಟಗಾರ ಅವರು ಯಾರೋ ಒಬ್ಬರ ಹತ್ತಿರ ಐದು ಸಾವಿರ ಹತ್ತು ಸಾವಿರ ಹಣ ಕೇಳಿದರೆ ಅದನ್ನ ರೋಲ್ ಕಾಲ್ ಅಂತೀರಾ. ಚುನಾವಣೆ ಖರ್ಚಿಗೊಸ್ಕರ ನೀವು ನೂರಾರು ಕೋಟಿ ತಗೋತ್ತಿರಲ್ಲಾ ಅದು ರೂಲ್ ಕಾಲ್ ಅಲ್ವಾ ಎಂದು ಪ್ರಶ್ನಿಸಿದರು.

ಕರ್ನಾಟಕ ಸರಕಾರ ಬಸವಣ್ಣನವರನ್ನ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ಸಂತೋಷ. ಆದರೆ ಬಸವಣ್ಣನವರ ವಚನ ನಿಮ್ಮ ಸಚಿವ ಸಂಪುಟದವರಿಗೆ ಅನ್ವಯಿಸುತ್ತಾ? ಕೇವಲ ಬಸವಣ್ಣನವರ ಪೋಟೋ ಹಾಕಿದರೆ ಸಾಕಾ? ಅವರ ಸಿದ್ಧಾಂತಾ ಬೇಡವೇ ಸಿದ್ದರಾಮಯ್ಯ ಅವರೇ ಎಂದು ಕೇಳಿದರು.

ರಾಜ್ಯದಲ್ಲಿ ಒಬ್ಬ ಅಧಿಕಾರಿಯನ್ನ ನೇಮಕ ಮಾಡಬೇಕಾದರೆ ಲಂಚ ತಗೊಂಡು ನೇಮಕ ಮಾಡತ್ತೀರಿ. ಲಂಚ ಕೊಟ್ಟು ನೇಮಕವಾದ ವ್ಯಕ್ತಿ ಲಂಚ ಹೊಡಿಯಲಿಕೆ ಶುರು ಮಾಡುತ್ತಾನೆ. ಅಧಿಕಾರಿಗಳು ಬಂಡವಾಳ ಹೂಡತ್ತಾನೆ, ಲಂಚಾ ತಿನ್ನುತ್ತಾನೆ ಎಂದು ವಾಗ್ದಾಳಿ ನಡೆಸಿದ ನಾರಾಯಣಗೌಡ, ಕನ್ನಡ ನಾಡಿಗಾಗಿ ಹೋರಾಟ ಮಾಡುವವರ ಮೇಲೆ ಇಲ್ಲ ಸಲ್ಲದ ಪ್ರಕರಣ ದಾಖಲಿಸುತ್ತೀರಿ. ನಾಚಿಕೆ ಆಗಬೇಕು ನಿಮಗೆ ಎಂದು ಛೀಮಾರಿ ಹಾಕಿದರು.

ಒಬ್ಬ ಪುಣ್ಯಾತ್ಮ ಮೂರು ವರ್ಷ ಹೋರಾಟ ಮಾಡಬೇಡಿ ಅಂತಾ ನನಗೆ ಹೇಳಿದ್ದ. ಹೋರಾಟ ಮಾಡಬೇಡಿ ಅಂದಿದ್ದಕ್ಕೆ ನಾನು ಹೋರಾಟ ಮಾಡಿದ್ದೇನೆ. ಕಾವೇರಿಗಾಗಿ ಹೋರಾಟ ಮಾಡಿದೆ ಅದಕ್ಕೂ ಬಂಧಿಸಿದರು. ಬೆಂಗಳೂರಿನಲ್ಲಿ ತಮಿಳುನಾಡಿನವರು ಮೂರ್ತಿ ಸ್ಥಾಪನೆ ವಿಚಾರವಾಗಿ ಅದಕ್ಕೂ ಹೋರಾಟ ಮಾಡಿದೆ, ಅವಾಗಲೂ ಬಂಧಿಸಿದರು. ಹೋರಾಟ ವಿಚಾರದಲ್ಲಿ ನಾನು ಯಾರಿಗೂ ಹೊಂದಾಣಿಕೆ ಆಗಲ್ಲ. ಕನ್ನಡ ಸುದ್ದಿಗೆ ಬಂದರೆ ಸಿದ್ದರಾಮಯ್ಯ ಅವರೇ ಮಾನ ಉಳಿಸಾಂಗಿಲ್ಲಾ ಎಂದು ಸಾರಿ ಸಾರಿ ಹೇಳುವುದಕ್ಕೆ ಬರುವುದು ರಕ್ಷಣಾ ವೇದಿಕೆಗೆ ಮಾತ್ರ ಎಂದರು.

ವರದಿ: ಪ್ರತಾಪ್, ಟಿವಿ9 ಬೆಳಗಾವಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ