ಕನ್ನಡಿಗರಿಗೆ ಕಂಪನಿಗಳಲ್ಲಿ ಉದ್ಯೋಗ ಮೀಸಲಾತಿಗಾಗಿ ಮುಂದಿನ ಹೋರಾಟ: ಕರವೇ ನಾರಾಯಣಗೌಡ
2023ರ ಡಿಸೆಂಬರ್ 27 ರಂದು ಕರವೇ ಬೆಂಗಳೂರಿನಲ್ಲಿ ನಾಮಫಲಕ ಮಹಾ ಅಭಿಯಾನ ಕೈಗೊಂಡಿತ್ತು. ಫೆ.28ರ ಒಳಗಾಗಿ ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಇರಬೇಕು ಎಂದು ಗಡವು ನೀಡಿತ್ತು. ಕರವೇ ಹೋರಾಟಕ್ಕೆ ಮಣಿದ ಸರ್ಕಾರ ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಇದಕ್ಕೆ ಕರವೇ ಅಧ್ಯಕ್ಷ ನಾರಾಯಣಗೌಡ ಪ್ರತಿಕ್ರಿಯಿಸಿ ಸಂತಸ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ, ಫೆಬ್ರವರಿ 23: ಕರ್ನಾಟಕ ರಕ್ಷಣಾ ವೇದಿಕೆ (Karave) ಡಿಸೆಂಬರ್ 27 ರಂದು ಹೋರಾಟ ಮಾಡಿ, ಫೆಬ್ರವರಿ 28ರ ವರೆಗೆ ಗಡುವು ನೀಡಿದ್ದರ ಪರಿಣಾಮ ನಾಮಫಲಕಗಳಲ್ಲಿ ಶೇ60 ರಷ್ಟು ಕನ್ನಡ ಕಡ್ಡಾಯ (Kannada Compulsory) ಮಾಡಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಇದರ ಪರಿಣಾಮ ಬೆಂಗಳೂರು ಕನ್ನಡಮಯ ಆಗುತ್ತಿದೆ. ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ (Narayana Gowda) ಹೇಳಿದರು. ಬೆಳಗಾವಿಯಲ್ಲಿ (Belagavi) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗ ಉದ್ಯೋಗ ಮೀಸಲಾತಿಗಾಗಿ ಹೋರಾಟ ಮಾಡುತ್ತೇವೆ. ಎಲ್ಲ ಖಾಸಗಿ ಕಂಪನಿಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಲೇಬೇಕು. ಈ ಸಂಬಂಧ ಹೋರಾಟ ಮಾಡಲು ಚಿಂತಿಸಿದ್ದೇವೆ. ನಾಳೆ (ಫೆ.24) ರಂದು ನಡೆಯುವ ಕರವೇ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಟಿ.ಎ.ನಾರಾಯಣಗೌಡ ತಿಳಿಸಿದರು.
ಬೆಳಗಾವಿ ಜಿಲ್ಲೆಯಲ್ಲೂ ಸಂಪೂರ್ಣವಾಗಿ ಕನ್ನಡಮಯ ಆಗಬೇಕು. ನೀವು ಯಾರು ಬೇಕಾದರೂ ಸುಪ್ರೀಂಕೋರ್ಟ್ಗೆ ಅರ್ಜಿ ಹಾಕಲಿ. ಅದರಿಂದ ನಮಗೇನೂ ಆಗಬೇಕಿಲ್ಲ, ಆದರೆ ಕನ್ನಡ ಬೋರ್ಡ್ ಹಾಕಬೇಕು. ಫೆಬ್ರವರಿ 28ರ ಬಳಿಕವೂ ಕನ್ನಡ ಬಳಸದಿದ್ದರೆ ಮತ್ತೊಮ್ಮೆ ಗುಡುಗು-ಸಿಡಿಲು ಆಗಲಿದೆ ಎಂದು ಎಚ್ಚರಿಕೆ ನೀಡಿದರು.
ಏನಿದು ಡಿಸೆಂಬರ್ 27ರ ಹೋರಾಟ
ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ, ನೆಲದ ಭಾಷೆ. ಕರ್ನಾಟಕದ ಎಲ್ಲ ವ್ಯಾಪಾರ, ಉದ್ದಿಮೆಗಳ ನಾಮಫಲಕಗಳಲ್ಲಿ ಕನ್ನಡವೇ ಅಗ್ರಸ್ಥಾನ ಪಡೆಯಬೇಕು ಎಂಬ ಸರ್ಕಾರದ ನಿಯಮಾವಳಿಗಳಿವೆ. ಆದರೂ ಸಹ ಕೆಲವು ಉದ್ಯಮಿಗಳು, ವ್ಯಾಪಾರಸ್ಥರು ಕನ್ನಡದ ಅಸ್ಮಿತೆಯನ್ನು ಅಗೌರವದಿಂದ ಕಾಣುತ್ತ, ಕನ್ನಡದಲ್ಲಿ ನಾಮಫಲಕಗಳನ್ನು ಹಾಕದೇ ಉಡಾಫೆಯಿಂದ ವರ್ತಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಳೆದ ವರ್ಷ 2023ರ ನವೆಂಬರ್ 1ರಿಂದ ಸತತವಾಗಿ ರಾಜ್ಯಾದ್ಯಂತ, ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಜಾಗೃತಿ ಅಭಿಯಾನ ನಡೆಸುತ್ತ ಬಂದಿತ್ತು. ಆದರೂ ಕೆಲವು ವಲಸಿಗ ದುರಹಂಕಾರಿ ವ್ಯಾಪಾರಸ್ಥರು ನಾಮಫಲಕ ಬದಲಿಸದ ಹಿನ್ನೆಲೆಯಲ್ಲಿ ಡಿಸೆಂಬರ್ 27ರೊಳಗೆ ನಾಮಫಲಕ ಕನ್ನಡೀಕರಿಸಲು ಕರ್ನಾಟಕ ರಕ್ಷಣಾ ವೇದಿಕೆ ಗಡುವು ನೀಡಿತ್ತು.
ಆದರೆ, ಕೆಲವು ಮಾಲೀಕರು ಕರವೇಯ ಈ ಅಂತಿಮ ಗಡುವಿಗೆ ಸವಾಲು ಹಾಕಿದ್ದರಿಂದ ಆಕ್ರೋಶ ಭುಗಿಲೆದ್ದಿತ್ತು. ಡಿಸೆಂಬರ್ 27 ರಂದು ನಾಮಫಲಕ ಮಹಾ ಅಭಿಯಾನ ಕೈಗೊಂಡಿದ್ದ ಕರವೇ, ಬೆಳಿಗ್ಗೆ 11 ಗಂಟೆಗೆ ಕೆಂಪೇಗೌಡ ವಿಮಾನ ನಿಲ್ದಾಣ ರಸ್ಥೆಯಿಂದ ರ್ಯಾಲಿ ಆರಂಭಿಸಿ ಯಲಹಂಕ, ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್, SP ರೋಡ್, ಬ್ರಿಗೇಡ್ ರೋಡ್, MG ರೋಡ್, ಚಿಕ್ಕ ಪೇಟೆ, ಸಿಟಿ ಮಾರ್ಕೆಟ್, ಅವಿನ್ಯೂ ರೋಡ್ ಮುಖಾಂತರ ಕಬ್ಬನ್ ಪಾರ್ಕ್ ವರೆಗೆ ರ್ಯಾಲಿ ನಡೆಸಿತ್ತು.
ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಡಾ.ಮಂಜುನಾಥ್ಗೆ ಹೆಚ್ಚಿದ ಒತ್ತಡ: ಬೆಂಬಲ ಘೋಷಿಸಿದ ಕರವೇ ಪ್ರವೀಣ್ ಶೆಟ್ಟಿ
ಜೈಲು ಸೇರಿದ್ದ ನಾರಾಯಣಗೌಡ
ಡಿಸೆಂಬರ್ 27 ರಂದು ಮಾಲ್, ಹೋಟೆಲ್‌ಗಳೂ ಸೇರಿದಂತೆ ವಾಣಿಜ್ಯ ಕಟ್ಟಡಗಳ ನಾಮಲಕಗಳಲ್ಲಿ ಕನ್ನಡ ಕಡ್ಡಾಯ ಬಳಕೆಗೆ ಆಗ್ರಹಿಸಿ ಕರವೇ ಕಾರ್ಯಕರ್ತರು ನಗರದಾದ್ಯಂತ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕಾರ್ಯಕರ್ತರು ಮಾಲ್, ಹೋಟೆಲ್‌ಗಳ ಮೇಲೆ ಕಲ್ಲು ಹಾಗೂ ಚಪ್ಪಲಿ ತೂರಿ, ಒಳ ನುಗ್ಗಲು ಯತ್ನಿಸಿದ್ದರು. ಅಲ್ಲದೆ, ಅನ್ಯ ಭಾಷೆಯ ನಾಮಲಕಗಳು, ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್‌ಗಳನ್ನು ಕಿತ್ತೆಸೆದಿದ್ದರು. ಈ ಸಂಬಂಧ ನಗರದ ಹಲವು ಠಾಣೆಗಳಲ್ಲಿ ನಾರಾಯಣಗೌಡ ಮತ್ತು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದ್ದವು. ಪೊಲೀಸರ ಮೇಲೆ ಹಲ್ಲೆ, ಕರ್ತವ್ಯ ನಿರ್ವಹಣೆಗೆ ಅಡ್ಡಿ, ಸಾರ್ವಜನಿಕ ಆಸ್ತಿಗೆ ಹಾನಿ, ದೊಂಬಿ, ಅನುಮತಿ ಪಡೆಯದೆ ಪ್ರತಿಭಟನೆ ಮಾಡಿದ ಆರೋಪದಡಿ ಪೊಲೀಸರು ನಾರಾಯಣಗೌಡ ಹಾಗೂ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ