ಸಂಚಾರ ನಿಯಮ ಉಲ್ಲಂಘನೆ ದಂಡ ವಸೂಲಿಗೆ ಬೆಂಗಳೂರು ಟ್ರಾಫಿಕ್ ಪೊಲೀಸರ ಹೊಸ ಕ್ರಮ: ಆರ್​ಟಿಒ ಕಚೇರಿಗಳಿಗೆ ಸಿಬ್ಬಂದಿ ನಿಯೋಜನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 04, 2022 | 11:05 PM

ಪದೇಪದೆ ನಿಯಮ ಉಲ್ಲಂಘಿಸುವವರನ್ನು ಗುರುತಿಸಿ, ಅಂಥ ವಾಹನಗಳು ಯಾವುದೇ ಕಾರಣದಿಂದ ಸಾರಿಗೆ ಕಚೇರಿಗೆ ಬಂದಾಗ ಮಾಲೀಕರಿಂದ ಅಲ್ಲಿಯೇ ದಂಡ ಕಟ್ಟಿಸಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆ ದಂಡ ವಸೂಲಿಗೆ ಬೆಂಗಳೂರು ಟ್ರಾಫಿಕ್ ಪೊಲೀಸರ ಹೊಸ ಕ್ರಮ: ಆರ್​ಟಿಒ ಕಚೇರಿಗಳಿಗೆ ಸಿಬ್ಬಂದಿ ನಿಯೋಜನೆ
ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ
Follow us on

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸುವ ಕೆಲ ವಾಹನ ಮಾಲೀಕರಿಗೆ ಎಷ್ಟು ಬಾರಿ ನೊಟೀಸ್ ಕಳಿಸಿದರೂ ನಿರ್ಲಕ್ಷ್ಯ ಧೋರಣೆ ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ ಬಿಗಿಕ್ರಮ ತೆಗೆದುಕೊಳ್ಳಲು ಟ್ರಾಫಿಕ್ ಪೊಲೀಸರು ನಿರ್ಧರಿಸಿದ್ದಾರೆ. ಪದೇಪದೆ ನಿಯಮ ಉಲ್ಲಂಘಿಸುವವರನ್ನು ಗುರುತಿಸಿ, ಅಂಥ ವಾಹನಗಳು ಯಾವುದೇ ಕಾರಣದಿಂದ ಸಾರಿಗೆ ಕಚೇರಿಗೆ ಬಂದಾಗ ಮಾಲೀಕರಿಂದ ಅಲ್ಲಿಯೇ ದಂಡ ಕಟ್ಟಿಸಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ಇದಕ್ಕಾಗಿ 10 ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಪೊಲೀಸ್ ಸಬ್​ ಇನ್​ಸ್ಪೆಕ್ಟರ್ ಮತ್ತು ಅಸಿಸ್ಟೆಂಟ್ ಸಬ್ ಇನ್​ಸ್ಪೆಕ್ಟರ್​ ದರ್ಜೆಯ ಅಧಿಕಾರಿಗಳನ್ನು ಸೇವೆಗೆ ನಿಯೋಜಿಸಲಾಗಿದೆ. ವಾಹನಗಳ ಮೇಲಿರುವ ಪ್ರಕರಣಗಳನ್ನು ಪರಿಶೀಲಿಸಿ ದಂಡ ವಸೂಲು ಮಾಡಲು ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಆದೇಶ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಟೋಯಿಂಗ್ ರದ್ದು
ಬೆಂಗಳೂರಿನಲ್ಲಿ 15 ದಿನಗಳ ಕಾಲ ಟೋಯಿಂಗ್ ವ್ಯವಸ್ಥೆ ರದ್ದು ಮಾಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಟೋಯಿಂಗ್ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಿ, ಸೂಚನೆ ನೀಡಿದ್ದರು. ನೋ ಪಾರ್ಕಿಂಗ್‌ ಸ್ಥಳದಲ್ಲಿ ವಾಹನ ನಿಲ್ಲಿಸಿದರೆ ಪೊಲೀಸರು ದಂಡ ವಿಧಿಸುತ್ತಾರೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಟೋಯಿಂಗ್ ವ್ಯವಸ್ಥೆ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ನೋ ಪಾರ್ಕಿಂಗ್‌ ಬೋರ್ಡ್‌ಗಳನ್ನು ಹೆಚ್ಚು ಅಳವಡಿಸುತ್ತೇವೆ. ಯಾವ ರಸ್ತೆಯಲ್ಲಿ ಪಾರ್ಕಿಂಗ್‌ ಮಾಡಬೇಕೆಂದು ವಾಹನ ಸವಾರರಿಗೆ ಸೂಕ್ತ ಮಾಹಿತಿ ನೀಡಲಾಗುವುದು ಎಂದು ಗೃಹಸಚಿವರು ಹೇಳಿದರು.

ಡಿಜಿಟಲ್ ದಂಡ ಪಾವತಿಗೆ ಅನುವು
ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರಿ ಸಂಚರಿಸುವ ವಾಹನಗಳಿಗೆ ಪೊಲೀಸರು ದಂಡ ವಿಧಿಸಿದರೆ, ನಗದು ಹಣವಿಲ್ಲ ಎಂದು ಹೇಳಿ ನುಣುಚಿಕೊಳ್ಳುವ ಸಂದರ್ಭ ಇನ್ನು ಮುಂದೆ ಬರುವುದಿಲ್ಲ. ಬೆಂಗಳೂರಿನಲ್ಲಿ ಪೇಟಿಎಂ ಮೂಲಕ ದಂಡ ಪಾವತಿ ತಂತ್ರಜ್ಞಾನಕ್ಕೆ ಚಾಲನೆ ನೀಡಲಾಗಿದೆ. ಬೆಂಗಳೂರು ಪೊಲೀಸ್ ಆಯುಕ್ತ ಕಮಲ್​ ಪಂತ್ ಈ ನೂತನ ತಂತ್ರಜ್ಞಾನಕ್ಕೆ ಚಾಲನೆ ನೀಡಿದ್ದಾರೆ. ಈ ಮೊದಲು ಡಿಜಿಟಲ್ ಮೂಲಕ ದಂಡ ಪಾವತಿಗೆ ಅವಕಾಶವಿರಲಿಲ್ಲ. ದಂಡವೇನಿದ್ದರೂ ನಗದು ರೂಪದಲ್ಲಿಯೇ ಪೊಲೀಸರಿಗೆ ಕಟ್ಟಬೇಕಿತ್ತು. ಈಗ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದರೆ ಪೇಟಿಎಂ ಡಿಜಿಟಲ್ ತಂತ್ರಜ್ಞಾನದ ಮೂಲಕ ದಂಡ ಪಾವತಿ ಮಾಡಬಹುದಾಗಿದೆ.

ಕರೊನಾ ಸಮಸ್ಯೆಯೂ ಇರುವುದರಿಂದ ನಗದು ರಹಿತ ದಂಡ ಪಾವತಿಗೆ ಪೊಲಿಸ್ ಇಲಾಖೆ ಈ ಮಾದರಿಯನ್ನು ಕಂಡುಕೊಂಡಿದೆ. ಟೆಲಿಬ್ರಹ್ಮ ಸಾಫ್ಟ್​​ವೇರ್ ಸರ್ವಿಸಸ್ ಇದಕ್ಕೆ ಸಹಯೋಗ ನೀಡಿದೆ. ವೆಬ್​ಸೈಟ್, ಪಿಡಿಎ ಮಷೀನ್​ಗಳಲ್ಲಿ ಈ ಸೌಲಭ್ಯ ಲಭ್ಯವಿದೆ. ನಗದು ರಹಿತ ದಂಡ ಪಾವತಿಗೆ ರೂಪಿಸಿದ ಈ ಹೊಸ ಮಾರ್ಗದಿಂದಾಗಿ ಇನ್ನು ಮುಂದೆ ದಂಡ ಕಟ್ಟದೆ ತಪ್ಪಿಸುವುದು ಕಡಿಮೆಯಾಗಲಿದೆ.

ಇದನ್ನೂ ಓದಿ: ರಸ್ತೆ ಗುಂಡಿಗೆ ಸವಾರ ಬಲಿ? ಟ್ರಾಫಿಕ್ ಪೊಲೀಸ್ ಹಾಗೂ ಬಿಬಿಎಂಪಿ ನಡುವೆ ಆರೋಪ ಪ್ರತ್ಯಾರೋಪ, ಬಿಬಿಎಂಪಿ ಎಇಇ ಮೇಲೆ ಎಫ್ಐಆರ್ ದಾಖಲು

ಇದನ್ನೂ ಓದಿ: ಕಾರಿನ ದಾಖಲೆ ಕೇಳಿದಕ್ಕೆ ಟ್ರಾಫಿಕ್ ಪೊಲೀಸ್​​ನ್ನು ಅಪಹರಿಸಿದ ವ್ಯಕ್ತಿಯ ಬಂಧನ