ರಸ್ತೆ ಗುಂಡಿಗೆ ಸವಾರ ಬಲಿ? ಟ್ರಾಫಿಕ್ ಪೊಲೀಸ್ ಹಾಗೂ ಬಿಬಿಎಂಪಿ ನಡುವೆ ಆರೋಪ ಪ್ರತ್ಯಾರೋಪ, ಬಿಬಿಎಂಪಿ ಎಇಇ ಮೇಲೆ ಎಫ್ಐಆರ್ ದಾಖಲು

ರಸ್ತೆ ಗುಂಡಿ ಮುಚ್ಚದೆ ಬಿಬಿಎಂಪಿ ನಿರ್ಲಕ್ಷ್ಯ ವಹಿಸಿದೆ ಹೀಗಾಗಿ ಈ ಘಟನೆ ಸಂಭವಿಸಿದೆ ಎಂದು ಬಿಬಿಎಂಪಿ ಎಇಇ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.

ರಸ್ತೆ ಗುಂಡಿಗೆ ಸವಾರ ಬಲಿ? ಟ್ರಾಫಿಕ್ ಪೊಲೀಸ್ ಹಾಗೂ ಬಿಬಿಎಂಪಿ ನಡುವೆ ಆರೋಪ ಪ್ರತ್ಯಾರೋಪ, ಬಿಬಿಎಂಪಿ ಎಇಇ ಮೇಲೆ ಎಫ್ಐಆರ್ ದಾಖಲು
ಬಿಬಿಎಂಪಿ (ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಥಣಿಸಂದ್ರದ ಬಳಿ ರಸ್ತೆ ಗುಂಡಿಗೆ ಸವಾರ ಬಲಿ ಪ್ರಕರಣಕ್ಕೆ ಸಂಬಂಧಿಸಿ ಬಾಣಸವಾಡಿ ಟ್ರಾಫಿಕ್ ಪೊಲೀಸರು ಬಿಬಿಎಂಪಿ ಎಇಇ ಮೇಲೆ ಎಫ್‌ಐಆರ್ ದಾಖಲು ಮಾಡಿದ್ದಾರೆ. ರಸ್ತೆ ಗುಂಡಿ ಮುಚ್ಚದೆ ಬಿಬಿಎಂಪಿ ನಿರ್ಲಕ್ಷ್ಯ ವಹಿಸಿದೆ ಹೀಗಾಗಿ ಈ ಘಟನೆ ಸಂಭವಿಸಿದೆ ಎಂದು ಬಿಬಿಎಂಪಿ ಎಇಇ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.

ಸದ್ಯ ಎಫ್ಐಆರ್ ದಾಖಲಾದ ಬಗ್ಗೆ ಬಿಬಿಎಂಪಿ ಸ್ಪಷ್ಟನೆ ನೀಡಿದೆ. ಬೈಕ್ ಸವಾರ ಸಾವು ಪ್ರಕರಣದಲ್ಲಿ ಬಿಬಿಎಂಪಿಯಿಂದ ಸ್ಪಷ್ಟನೆ ಸಿಕ್ಕಿದೆ. ಸವಾರ ಮೃತಪಟ್ಟಿರುವ ಜಾಗದಲ್ಲಿ ರಸ್ತೆ ಗುಂಡಿಯೇ ಇರಲಿಲ್ಲ. ಘಟನೆ ನಡೆದ ಸ್ಥಳದಲ್ಲಿ ವೈಟ್ ಟಾಪಿಂಗ್ ರಸ್ತೆ ಮಾಡಿದ್ದು ಬೈಕ್ ಸವಾರ ಅತಿ ವೇಗವಾಗಿ ಬಂದು ತಕ್ಷಣ ಬ್ರೇಕ್ ಹಾಕಿದ್ದ ಈ ವೇಳೆ ಸ್ಕಿಡ್ ಆಗಿ ಬೈಕ್‌ನಿಂದ ಬಿದ್ದಿರುವ ಸಾಧ್ಯತೆಯಿದೆ. ಆಗ ಅದೇ ಮಾರ್ಗದಲ್ಲಿ ಗೂಡ್ಸ್ ವಾಹನ ಬಂದಿತ್ತು. ನಿಯಂತ್ರಿಸಲಾಗದೆ ಅಪಘಾತ ಸಂಭವಿಸಿದೆ ಎಂದು ಬಿಬಿಎಂಪಿ ಸ್ಪಷ್ಟನೆ ನೀಡಿದೆ.

ಆದ್ರೆ ಟ್ರಾಫಿಕ್ ಪೊಲೀಸರ ಪ್ರಕಾರ, ನವೆಂಬರ್27 ರಂದು ಮಧ್ಯಾಹ್ನ ಸುಮಾರು 1 ಗಂಟೆಗೆ ಥಣಿಸಂಧ್ರ ಮುಖ್ಯ ರಸ್ತೆಯಲ್ಲಿ ಅಜೀಂ ಅಹ್ಮದ್ (21) ಬೈಕ್ ಮೇಲೆ ಬರುತ್ತಿರುವಾಗ ರಸ್ತೆ ಗುಂಡಿ ಗಮನಿಸದೆ ನಿಯಂತ್ರಣ ತಪ್ಪಿ ಸವಾರ ಕೆಳಗೆ ಬಿದ್ದಿದ್ದು ಅದೇ ಸಮಯದಲ್ಲಿ ಹಿಂದಿನಿಂದ ಅತಿವೇಗವಾಗಿ ಬಂದ ಗೂಡ್ಸ್ ವಾಹನ ಅಜೀಂ ಮೇಲೆ ಹರಿದಿದೆ. ಅಜೀಂ‌ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಸದ್ಯ ರಸ್ತೆ ಗುಂಡಿಗೆ ಸವಾರ ಬಲಿಯಾಗಿದ್ದು ಟ್ರಾಫಿಕ್ ಪೊಲೀಸ್ ಹಾಗೂ ಬಿಬಿಎಂಪಿ ನಡುವೆ ಆರೋಪ ಪ್ರತ್ಯಾರೋಪ ಮುಂದುವರೆದಿದೆ.

ಇದನ್ನೂ ಓದಿ: ರಸ್ತೆ ಗುಂಡಿ ಮುಚ್ಚದ ಅಧಿಕಾರಿಗೆ ಅಮಾನತು ಶಿಕ್ಷೆ, ಬಿಬಿಎಂಪಿಯ ಇಇ ಎಂ.ಜಿ.ನಾಗರಾಜು ಅಮಾನತು

Click on your DTH Provider to Add TV9 Kannada