ಬೆಳ್ಳಂಬೆಳಗ್ಗೆ ಮದ್ಯಪಾನ ಮಾಡಿ ಶಾಲಾ ವಾಹನ ಓಡಿಸುತ್ತಿದ್ದ ಚಾಲಕರು, 16 ಜನರ ವಿರುದ್ಧ ದೂರು ದಾಖಲು

| Updated By: ಆಯೇಷಾ ಬಾನು

Updated on: Jan 23, 2024 | 1:18 PM

ಬೆಂಗಳೂರು ಸಂಚಾರಿ ಪೊಲೀಸರು ಬೆಳ್ಳಂಬೆಳಗ್ಗೆ ಫೀಲ್ಡ್​ಗೆ ಇಳಿದಿದ್ದು ಶಾಲಾ ವಾಹನಗಳ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ 16 ಚಾಲಕರು ಮದ್ಯ ಸೇವಿಸಿ ಶಾಲಾ ವಾಹನ ಚಲಾಯಿಸಿದ್ದು ಪತ್ತೆಯಾಗಿದೆ. ಸದ್ಯ ಈ 16 ಚಾಲಕರ ವಾಹನ ಪರವಾನಗಿ ಪತ್ರ ಆರ್​ಟಿಒ ಕಚೇರಿಗೆ ರವಾನಿಸಲಾಗಿದೆ.

ಬೆಳ್ಳಂಬೆಳಗ್ಗೆ ಮದ್ಯಪಾನ ಮಾಡಿ ಶಾಲಾ ವಾಹನ ಓಡಿಸುತ್ತಿದ್ದ ಚಾಲಕರು, 16 ಜನರ ವಿರುದ್ಧ ದೂರು ದಾಖಲು
ಶಾಲಾ ವಾಹನ ಚಾಲಕರ ವಿರುದ್ಧ ಸಂಚಾರಿ ಪೊಲೀಸರ ಕಾರ್ಯಾಚರಣೆ
Follow us on

ಬೆಂಗಳೂರು, ಜ.23: ಶಾಲಾ ಮಕ್ಕಳನ್ನು ಕರೆತರುವ ಎಲ್ಲಾ ಬಗೆಯ ವಾಹನಗಳ ಚಾಲಕರು ಮತ್ತು ಸಹಾಯಕರು ಪೊಲೀಸರಿಂದ ಪಡೆದ ಸನ್ನಡತೆಯ ಪ್ರಮಾಣಪತ್ರವನ್ನು ಸಲ್ಲಿಸುವುದನ್ನು ಶಾಲಾ ಶಿಕ್ಷಣ ಇಲಾಖೆ ಈ ಹಿಂದೆ ಕಡ್ಡಾಯಗೊಳಿಸಿತ್ತು. ಇದೀಗ ಶಾಲಾ ವಾಹನ ಚಾಲಕರ (School Bus Drivers) ವಿರುದ್ಧ ಸಂಚಾರಿ ಪೊಲೀಸರು (Bengaluru Traffic Police) ಕಾರ್ಯಾಚರಣೆಗೆ ಇಳಿದಿದ್ದಾರೆ. ಬೆಂಗಳೂರಿನಲ್ಲಿ ಇಂದು ಬೆಳಗ್ಗೆ 7ರಿಂದ 9.30ರವರೆಗೆ ಶಾಲಾ ವಾಹನಗಳ ತಪಾಸಣೆ ನಡೆಸಿದ್ದು ಬೆಳ್ಳಂಬೆಳಗ್ಗೆ ಮದ್ಯಪಾನ ಮಾಡಿ ಶಾಲಾ ವಾಹನ ಓಡಿಸುತ್ತಿದ್ದ ಚಾಲಕರು ಸಿಕ್ಕಿಬಿದ್ದಿದ್ದಾರೆ (Drink And Drive). ಕುಡಿದು ವಾಹನ ಚಲಾಯಿಸುತ್ತಿದ್ದವರ ವಿರುದ್ಧ ದೂರು ದಾಖಲಾಗಿದೆ.

ಬೆಂಗಳೂರು ಸಂಚಾರಿ ಪೊಲೀಸರು ಫೀಲ್ಡ್​ಗೆ ಇಳಿದು ಶಾಲಾ ವಾಹನಗಳ ಕಾರ್ಯಾಚರಣೆ ನಡೆಸಿದ್ದಾರೆ. ಬೆಳಗ್ಗೆ 7ರಿಂದ 9.30ರವರೆಗೆ ತಪಾಸಣೆ ನಡೆಸಿದ್ದಾರೆ. ಈ ವೇಳೆ ಸುಮಾರು 3,414 ಶಾಲಾ ವಾಹನಗಳನ್ನು ತಪಾಸಣೆ ಮಾಡಿದ್ದು ಈ ಪೈಕಿ 16 ಚಾಲಕರು ಮದ್ಯಸೇವಿಸಿ ಶಾಲಾ ವಾಹನ ಚಾಲನೆ ಮಾಡಿದ್ದು ಬೆಳಕಿಗೆ ಬಂದಿದೆ. 16 ಶಾಲಾ ಚಾಲಕರ ವಿರುದ್ಧ ಸಂಚಾರಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಕುಡಿದು ವಾಹನ ಚಲಾಯಿಸುತ್ತಿದ್ದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ. 16 ಚಾಲಕರ ವಾಹನ ಪರವಾನಗಿ ಪತ್ರ ಆರ್​ಟಿಒ ಕಚೇರಿಗೆ ರವಾನಿಸಲಾಗಿದೆ.

ಇದನ್ನೂ ಓದಿ: ಮಕ್ಕಳ ಜೊತೆಗೆ ಟ್ರಿಪ್ ಹೋಗುವಾಗ ಈ ಕ್ರಮಗಳನ್ನು ಅನುಸರಿಸಿದರೆ ನಿಮ್ಮ ಟ್ರಿಪ್ ಇನ್ನಷ್ಟು ವಂಡರ್‌ಫುಲ್!

ಕ್ರಿಮಿನಲ್ ಕೇಸ್ ಹಾಕಿ ಕ್ರಮ

ಇನ್ನು ಈ ಘಟನೆ ಸಂಬಂಧ ಸಂಚಾರ ಜಂಟಿ ಪೋಲೀಸ್ ಆಯುಕ್ತ ಎಂ. ಎನ್.ಅನುಚೇತ್ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಬೆಳಗ್ಗೆ ಸಂಚಾರ ಪೊಲೀಸರಿಂದ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಎಲ್ಲಾ ಶಾಲಾ ವಾಹನ ಚಾಲಕರನ್ನ ತಪಾಸಣೆ ಮಾಡಲಾಗಿದೆ. ಮೂರು ಸಾವಿರಕ್ಕೂ ಹೆಚ್ಚು ವಾಹನಗಳನ್ನ ಪರಿಶೀಲನೆ ಮಾಡಲಾಗಿದೆ. ಈ ವೇಳೆ 16 ಚಾಲಕರು ಕುಡಿದು ವಾಹನ ಚಾಲನೆ ಮಾಡಿರೋದು ಕಂಡು ಬಂದಿದೆ. ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ಕ್ರಮ ಕೈಗೊಳ್ಳಲಾಗ್ತಿದೆ. ಅವರ ಡ್ರೈವಿಂಗ್ ಲೈಸೆನ್ಸ್(DL) ಸಸ್ಪೆಂಡ್ ಮಾಡುವಂತೆ RTO ಗೆ ಶಿಫಾರಸ್ಸು ಮಾಡಲಾಗಿದೆ. ಶಾಲಾ ಮಂಡಳಿಗಳಿಗೂ ಈ ಬಗ್ಗೆ ಮಾಹಿತಿ ಕೇಳಿದ್ದೀವಿ. ಏನು ಮಾಹಿತಿ ನೀಡ್ತಾರೆ ಅನ್ನೋದರ ಮೇಲೆ ಅದನ್ನ ಸಾರಿಗೆ ಇಲಾಖೆಗೆ ಮಾಹಿತಿ ನೀಡ್ತಿವಿ. ಕೆಲ ಶಾಲೆಗಳು ಖಾಸಗಿ ವಾಹನಗಳನ್ನ ಬಳಸ್ತಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕೂಡ ಸಾರಿಗೆ ಇಲಾಖೆಗೆ ಮಾಹಿತಿ ನೀಡಿದ್ದೀವಿ ಎಂದು ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತ ಎಂ. ಎನ್.ಅನುಚೇತ್ ತಿಳಿಸಿದರು.

ಮಕ್ಕಳ ಸುರಕ್ಷತೆಗೆ ಹೊಸ ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ

ಶಾಲಾ ವಾಹನಗಳಲ್ಲಿ ಕಾರ್ಯ ನಿರ್ವಹಿಸುವ ಚಾಲಕರು ಹಾಗೂ ಸಹಾಯಕರಿಂದ ಮಕ್ಕಳ ಮೇಲೆ ದೌರ್ಜನ್ಯ ಆಗುತ್ತಿದೆ ಎಂಬ ಪ್ರಕರಣ ಸಂಬಂಧ ಶಾಲಾ ಆಡಳಿತ ಮಂಡಳಿ ಮತ್ತು ಮುಖ್ಯಸ್ಥರಿಗೆ ಮಕ್ಕಳ ಸುರಕ್ಷತೆಯ ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮಕ್ಕೆ ಈ ಹಿಂದೆ ಶಿಕ್ಷಣ ಇಲಾಖೆ ಮಕ್ಕಳ ಸುರಕ್ಷತೆ ನಿಟ್ಟಿನಲ್ಲಿ ಹೊಸ ಸುತ್ತೋಲೆಯನ್ನು ಹೊರಡಿಸಿತ್ತು. ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಶಾಲಾ ವಾಹನಗಳಲ್ಲಿ ಕಾರ್ಯನಿರ್ವಹಿಸುತ್ತಿರುವಂತಹ ಎಲ್ಲಾ ಚಾಲಕರು ಪೊಲೀಸ್ ಠಾಣೆಗಳಿಂದ ಅವರ ನಡತೆಯ ಬಗ್ಗೆ ನಡವಳಿಕೆ ಪ್ರಮಾಣ ಪತ್ರ ಕಡ್ಡಾಯವಾಗಿ ಪಡೆಯಲು ಶಿಕ್ಷಣ ಇಲಾಖೆ ಆದೇಶಿಸಿತ್ತು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:05 pm, Tue, 23 January 24