ಮೆಟ್ರೋ ಹಳಿ ಮೇಲೆ ಬಿದ್ದ ಮರ: ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ವ್ಯತ್ಯಯ
ಬೆಂಗಳೂರು ಮಳೆ ಹಲವು ಅವಾಂತರಗಳನ್ನೇ ಸೃಷ್ಟಿಸಿದೆ. ಮಳೆ, ಮರ ಬಿದ್ದಿರುವುದು, ರಸ್ತೆಗಳಲ್ಲಿ ನೀರು ನಿಂತಿದ್ದ ಕಾರಣ ಒಂದೆಡೆ ಸಂಚಾರಕ್ಕೆ ಅಡಚಣೆಯಾಗಿದ್ದರೆ, ಮಂಗಳವಾರ ಬೆಳಗ್ಗೆ ಮೆಟ್ರೋ ಟ್ರ್ಯಾಕ್ ಮೇಲೆ ಮರ ಬಿದ್ದು ಮೆಟ್ರೋ ಸಂಚಾರದಲ್ಲಿಯೂ ವ್ಯತ್ಯಯವಾಗಿದೆ. ಸದ್ಯ ಮರ ತೆರವು ಮಾಡಲಾಗಿದ್ದು, ಸಂಚಾರ ಪುನರಾರಂಭಗೊಂಡಿದೆ.
ಬೆಂಗಳೂರು, ಅಕ್ಟೋಬರ್ 16: ಮೆಟ್ರೋ ಹಳಿ ಮೇಲೆ ಮರ ಬಿದ್ದ ಕಾರಣ ಮಂಗಳವಾರ ಬೆಳ್ಳಂಬೆಳಗ್ಗೆ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಅಡಚಣೆಯಾಯಿತು. ಬೆಳಿಗ್ಗೆ 6.15 ರ ಸುಮಾರಿಗೆ ನೇರಳೆ ಮಾರ್ಗದ ಎಸ್‌ವಿ ರಸ್ತೆ ಮತ್ತು ಇಂದಿರಾನಗರ ನಡುವೆ ಹಳಿಯ ಮೇಲೆ ಒಂದು ಮರ ಬಿದ್ದಿದೆ. ಪರಿಣಾಮವಾಗಿ ಮೆಟ್ರೋ ಸಂಚಾರಕ್ಕೆ ತಾತ್ಕಾಲಿಕವಾಗಿ ಅಡ್ಡಿಯಾಯಿತು. ನಂತರ ಬಿಎಂಆರ್ಸಿಎಲ್ ಅಧಿಕಾರಿಗಳು, ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ಮಾಡಿ ಮೆಟ್ರೋ ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಅಡಚಣೆಯ ಸಂದರ್ಭದಲ್ಲಿ ನೇರಳೆ ಮಾರ್ಗದ ಬೈಯಪ್ಪನಹಳ್ಳಿ ಟು ವೈಟ್ ಫೀಲ್ಡ್, ಎಂ ಜಿ ರಸ್ತೆ ಟು ಚಲ್ಲಘಟ್ಟ ನಡುವೆ ಮಾತ್ರ ರೈಲುಗಳು ಸಂಚಾರ ಮಾಡಿದ್ದವು.
ನೇರಳೆ ಮಾರ್ಗದಲ್ಲಿ ಬೆಳಗ್ಗೆ 8.05 ರಿಂದ ಎಂದಿನಂತೆ ರೈಲುಗಳು ಓಡಾಡುತ್ತಿವೆ ಎಂದು ಬಿಎಂಆರ್ಸಿಎಲ್ ಎಕ್ಸ್ ಸಂದೇಶದ ಮೂಲಕ ತಿಳಿಸಿದೆ.
ಅದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಬಿಎಂಆರ್ಸಿಎಲ್, ‘‘ಇಂದು ಬೆಳಿಗ್ಗೆ 6.15 ಗಂಟೆ ಸುಮಾರಿಗೆ ನೇರಳೆ ಮಾರ್ಗದಲ್ಲಿನ ಎಸ್‌ವಿ ರಸ್ತೆ ಮತ್ತು ಇಂದಿರಾನಗರ ನಡುವೆ ಹಳಿಯ ಮೇಲೆ ಒಂದು ಮರ ಬಿದ್ದ ಕಾರಣ ಕಾರ್ಯಾಚರಣೆ ತಾತ್ಕಾಲಿಕವಾಗಿ ಅಡ್ಡಿಯಾಗಿದೆ. ಈ ಸಮಯದಲ್ಲಿ ನೇರಳೆ ಮಾರ್ಗದ ಬೈಯಪ್ಪನಹಳ್ಳಿ ಮತ್ತು ವೈಟ್ ಫೀಲ್ಡ್ ಹಾಗೂ ಎಂ ಜಿ ರಸ್ತೆ ಮತ್ತು ಚಲ್ಲಘಟ್ಟ ನಡುವೆ ಮಾತ್ರ ರೈಲುಗಳು ಓಡುತ್ತಿವೆ, ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಪ್ರಯಾಣಿಕರಿಗೆ ಇದರಿಂದಾಗಿರುವ ಅನಾನುಕೂಲತೆಗಾಗಿ ವಿಷಾದಿಸಲಾಗಿದೆ’’ ಎಂದು ತಿಳಿಸಿತ್ತು.
ಬಿಎಂಆರ್ಸಿಎಲ್ ಎಕ್ಸ್ ಸಂದೇಶ
ಸಂಪೂರ್ಣ ನೇರಳೆ ಮಾರ್ಗದಲ್ಲಿ ಬೆಳಗ್ಗೆ 8.05 ರಿಂದ ಎಂದಿನಂತೆ ರೈಲುಗಳು ಓಡಾಡುತ್ತಿವೆ.
— ನಮ್ಮ ಮೆಟ್ರೋ (@OfficialBMRCL) October 16, 2024
ಬೆಳ್ಳಂಬೆಳಗ್ಗೆಯೇ ಮೆಟ್ರೋ ಸೇವೆ ವ್ಯತ್ಯಯವಾದುದರಿಂದ ಅನೇಕ ಪ್ರಯಾಣಿಕರು ಸಂಕಷ್ಟ ಅನುಭವಿಸಿದರು. ಇಂದಿರಾನಗರ, ಬೈಯಪ್ಪನಹಳ್ಳಿ ಕಡೆ ತೆರಳುವವರು ಎಂಜಿ ರಸ್ತೆಯಲ್ಲಿ ಇಳಿದು ಆಟೊ, ಟ್ಯಾಕ್ಸಿ, ಇತರ ವಾಹನಗಳ ಮೊರೆ ಹೋದರು.
ಇದನ್ನೂ ಓದಿ: ಗಮನಿಸಿ: ಬೆಂಗಳೂರಿನ ಈ ರಸ್ತೆಗಳಲ್ಲಿಂದು ಸಂಚಾರಕ್ಕೆ ತೊಂದರೆಯಾಗಬಹುದು
ಅತ್ತ ಬೆಂಗಳೂರಿನ ಅನೇಕ ರಸ್ತೆಗಳಲ್ಲಿಯೂ ಸಂಚಾರಕ್ಕೆ ಅಡಚಣೆಯಾಗಿದೆ. ಈ ಕುರಿತು ಬೆಂಗಳೂರು ಸಂಚಾರ ಪೊಲೀಸರು ಎಕ್ಸ್ ಖಾತೆ ಮೂಲಕ ಕ್ಷಣ ಕ್ಷಣದ ಮಾಹಿತಿ ನಿಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:52 am, Wed, 16 October 24