ಗಮನಿಸಿ: ಬೆಂಗಳೂರಿನ ಈ ರಸ್ತೆಗಳಲ್ಲಿಂದು ಸಂಚಾರಕ್ಕೆ ತೊಂದರೆಯಾಗಬಹುದು

Bengaluru traffic advisory: ಭಾರಿ ಮಳೆಯ ಕಾರಣ ಬೆಂಗಳೂರು ನಗರದ ಅನೇಕ ರಸ್ತೆಗಳಲ್ಲಿ ಸೋಮವಾರ ನೀರು ನಿಂತು ಅಧ್ವಾನ ಸೃಷ್ಟಿಯಾಗಿತ್ತು. ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಗ್ಗೆಯೂ ನಗರದ ವಿವಿಧೆಡೆ ಜಿಟಿಜಿಟಿ ಮಳೆಯಾಗುತ್ತಿದ್ದು ಹಲವು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಸಂಚಾರ ಪೊಲೀಸರು ನೀಡಿರುವ ಮಾಹಿತಿ ಆಧರಿಸಿದ ವಿವರ ಇಲ್ಲಿದೆ.

ಗಮನಿಸಿ: ಬೆಂಗಳೂರಿನ ಈ ರಸ್ತೆಗಳಲ್ಲಿಂದು ಸಂಚಾರಕ್ಕೆ ತೊಂದರೆಯಾಗಬಹುದು
ರಾಜಕುಮಾರ್ ಸಮಾಧಿ ರಸ್ತೆಯಲ್ಲಿ ಮರ ಬಿದ್ದಿರುವುದು
Follow us
Ganapathi Sharma
|

Updated on: Oct 16, 2024 | 7:24 AM

ಬೆಂಗಳೂರು, ಅಕ್ಟೋಬರ್ 16: ಬೆಂಗಳೂರಿನಲ್ಲಿ ಭಾನುವಾರದಿಂದ ಬಿಟ್ಟೂಬಿಡದೆ ಸುರಿದ ಮಳೆಯಿಂದಾಗಿ ಸೋಮವಾರ ಸಾಕಷ್ಟು ಅಧ್ವಾನ ಸೃಷ್ಟಿಯಾಯಿತು. ಅನೇಕ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆ, ಟ್ರಾಫಿಕ್ ಜಾಮ್ ಉಂಟಾಯಿತು. ಸೋಮವಾರ ರಾತ್ರಿ ವೇಳೆಗೆ ಅನೇಕ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟಿದ್ದಾರೆ. ಆದಾಗ್ಯೂ, ಕೆಲವು ರಸ್ತೆಗಳಲ್ಲಿ ಇಂದೂ (ಮಂಗಳವಾರ) ಸಹ ಸಂಚಾರಕ್ಕೆ ಅಡಚಣೆ ಸಾಧ್ಯತೆ ಇದೆ. ಈ ಕುರಿತು ಬೆಂಗಳೂರು ನಗರ ಸಂಚಾರ ಪೊಲೀಸರು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಸಂದೇಶ ಪ್ರಕಟಿಸುವ ಮೂಲಕ ಮಾಹಿತಿ ನೀಡಿದ್ದಾರೆ.

ಯಶವಂತಪುರ ಠಾಣಾ ವ್ಯಾಪ್ತಿಯ ರಾಜಕುಮಾರ್ ಸಮಾಧಿ ರಸ್ತೆಯಲ್ಲಿ (ಔಟರ್ ರಿಂಗ್) ಮರ ಬಿದ್ದಿರುವ ಕಾರಣ ಎರಡು ಬದಿಯ ಸಂಚಾರ ಸ್ಥಗಿತವಾಗಿದೆ.

ಟ್ರಾಫಿಕ್ ಪೊಲೀಸ್ ಎಕ್ಸ್​​ ಸಂದೇಶ

ನಮ್ಮ ಸಿಬ್ಬಂದಿಗಳು ತೆರವು ಕಾರ್ಯಾಚರಣೆಯಲ್ಲಿ ನಿರತರಾಗಿರುತ್ತಾರೆ. ತುಮಕೂರು ರಸ್ತೆಯಿಂದ ಮೈಸೂರು ರಸ್ತೆ ಕಡೆಗೆ ಹೋಗುವ ವಾಹನ ಸವಾರರು SRS ರಸ್ತೆ & ಸುರಾನಾ ಕಾಲೇಜ್ ರಸ್ತೆಯನ್ನು ಬಳಸಲು ಕೋರಲಾಗಿದೆ ಎಂದು ಸಂಚಾರ ಪೊಲೀಸರು ಎಕ್ಸ್​ ಸಂದೇಶದಲ್ಲಿ ತಿಳಿಸಿದ್ದಾರೆ.

ಬಿಇಎಲ್ ಯು ಟರ್ನ್ ಸಂಚಾರಕ್ಕೆ ಮುಕ್ತ

ವಾಹನ ಚಾಲಕ/ಸವಾರರ ಸುಗಮ ಸಂಚಾರದ ಹಿತದೃಷ್ಟಿಯಿಂದ ಎಂಇಎಸ್ ರಿಂಗ್ ರಸ್ತೆಯಲ್ಲಿನ ಬಿಇಎಲ್ ಯು ಟರ್ನ್ ಸಂಚಾರಕ್ಕೆ ಮುಕ್ತ ಮಾಡಲಾಗಿದ್ದು, ಹೆಬ್ಬಾಳ ಕಡೆಯಿಂದ ಬಂದು ಎಂಎಸ್ ಪಾಳ್ಯ ಮುಂತಾದ ಕಡೆ ಸಾಗುವ ವಾಹನಗಳು ಎಂಇಎಸ್ ರಿಂಗ್ ರಸ್ತೆಯ ಬಿಇಎಲ್ ಯು ತಿರುವಿನಲ್ಲಿ ಯು ಟರ್ನ್ ಪಡೆದು ಸಾಗಬಹುದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾನ್ಯತಾ ಟೆಕ್​​ ಪಾರ್ಕ್​ ರಸ್ತೆಯಲ್ಲಿ ನೀರು ತುಂಬಿದ್ದು, ಸೋಮವಾರ ರಾತ್ರಿ ವರೆಗೂ ಸಂಚಾರ ನಿಧಾನ ಗತಿಯಲ್ಲಿತ್ತು. ಇಂದೂ ಸಹ ಸಂಚಾರಕ್ಕೆ ಅಡಚಣೆ ಸಾಧ್ಯತೆ ಇದೆ.

ಎಫ್‌ಟಿಐ ರಸ್ತೆಯಲ್ಲಿ ಸಂಚಾರ ನಿರ್ಬಂಧ

ಸಿಎಂಟಿಐ ಜಂಕ್ಷನ್ ಬಳಿ ಎಫ್‌ಟಿಐ ರಸ್ತೆಯಲ್ಲಿ ಮರ ಬಿದ್ದ ಪರಿಣಾಮ ಈ ರಸ್ತೆಯನ್ನು ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ನಿರ್ಬಂಧಿಸಿದ್ದು, ವಾಹನ ಸವಾರರು ಪರ್ಯಾಯ ಮಾರ್ಗವನ್ನು ಬಳಸಲು ಕೋರಲಾಗಿದೆ.

ಇದನ್ನೂ ಓದಿ: ಭಾರಿ ಮಳೆಗೆ ಬೆಂಗಳೂರು ತತ್ತರ: ಬಿದ್ದ ಮರಗಳು, ಹಲವೆಡೆ ರಸ್ತೆಗಳೇ ಮಾಯ, ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ವಿವರ

ಮಳೆಯ ಕಾರಣ ನೀರು ನಿಂತಿದ್ದರಿಂದ ಪಾಣತ್ತೂರು ರೈಲ್ವೆ ಅಂಡರ್‌ಪಾಸ್, ಬಳೆಗೆರೆ ರಸ್ತೆಯಲ್ಲಿ ಸೋಮವಾರ ರಾತ್ರಿ ವರೆಗೂ ಸಂಚಾರ ನಿಧಾನವಾಗಿತ್ತು. ಸದ್ಯ ಸಂಚಾರ ದಟ್ಟಣೆ ಕಡಿಮೆ ಮಾಡಲು ವ್ಯವಸ್ಥೆ ಮಾಡಿದ್ದೇವೆ. ಯಾವುದೇ ತುರ್ತು ಸಂದರ್ಭದಲ್ಲಿ ತಕ್ಷಣದ ಸಹಾಯಕ್ಕಾಗಿ 112 ಗೆ ಕರೆ ಮಾಡಿ ಎಂದು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ