ಟಿವಿ9 ‘ಏನ್‌ ರೋಡ್‌ ಗುರೂ’ ಅಭಿಯಾನ ಪರಿಣಾಮ: ರಾತ್ರೋರಾತ್ರಿ ರಸ್ತೆಗಿಳಿದ ಡಿಕೆ ಶಿವಕುಮಾರ್, ರಸ್ತೆ ಗುಂಡಿ ಮುಚ್ಚಲು ಆದೇಶ

ರಾತ್ರೋರಾತ್ರಿ ಡಿಸಿಎಂ ಡಿಕೆ ಶಿವಕುಮಾರ್ ರಸ್ತೆಗೆ ಇಳಿದಿದ್ದಾರೆ. ಅಧಿಕಾರಿಗಳ ಜೊತೆ ರಸ್ತೆ ಗುಂಡಿಗಳ ಪರಿಶೀಲನೆ ನಡೆಸಿದ್ದಾರೆ. ಮಧ್ಯರಾತ್ರಿವರೆಗೂ ಹಲವು ಏರಿಯಾಗಳಲ್ಲಿ ಸುತ್ತಾಡಿ ಅವ್ಯವಸ್ಥೆ ಖದ್ದು ದರ್ಶನ ಮಾಡಿದ್ದಾರೆ. ಅಂದಹಾಗೆ ಇದಕ್ಕೆಲ್ಲ ಕಾರಣ ಬೆಂಗಳೂರಿನ ರಸ್ತೆಗಳ ಗುಂಡಿ ಗಂಡಾಂತರಗಳ ವಿರುದ್ಧ ‘ಟಿವಿ9’ ಕನ್ನಡ ಮಾಡುತ್ತಿರುವ ಬೃಹತ್ ಅಭಿಯಾನ.

ಟಿವಿ9 ‘ಏನ್‌ ರೋಡ್‌ ಗುರೂ’ ಅಭಿಯಾನ ಪರಿಣಾಮ: ರಾತ್ರೋರಾತ್ರಿ ರಸ್ತೆಗಿಳಿದ ಡಿಕೆ ಶಿವಕುಮಾರ್, ರಸ್ತೆ ಗುಂಡಿ ಮುಚ್ಚಲು ಆದೇಶ
ಡಿಸಿಎಂ ಡಿಕೆ ಶಿವಕುಮಾರ್ ಸೋಮವಾರ ರಾತ್ರಿ ಬೆಂಗಳೂರಿನ ರಸ್ತೆ ಗುಂಡಿ ಸಮಸ್ಯೆಗಳ ಪರಿಶೀಲನೆ ನಡೆಸಿದರು.

Updated on: Aug 26, 2025 | 7:32 AM

ಬೆಂಗಳೂರು, ಆಗಸ್ಟ್ 26: ಯಾವ ರಸ್ತೆಗೆ ಕಾಲಿಟ್ಟರೂ ಗುಂಡಿಗಳದ್ದೇ (Potholes) ಕಾರುಬಾರು. ಪ್ರಾಣಪಣಕ್ಕಿಟ್ಟು ವಾಹನ ಸವಾರರು ಸಂಚರಿಸಬೇಕಾದ ಸ್ಥಿತಿ. ಗುಂಡಿಗಳಿಂದಾಗಿ ಬ್ರ್ಯಾಂಡ್ ಬೆಂಗಳೂರು ಬ್ಯಾಡ್‌ ಬೆಂಗಳೂರು ಎನ್ನುವಂತಾಗಿದೆ. ಬೆಂಗಳೂರಿನ (Bengaluru) ಯಮಗುಂಡಿಗಳ ಬಗ್ಗೆ ‘ಟಿವಿ9’ ದೊಡ್ಡ ಅಭಿಯಾನವನ್ನೇ ನಡೆಸುತ್ತಿದೆ. ‘‘ಏನ್‌ ರೋಡ್ ಗುರೂ’’ ಎಂಬ ಹೆಸರಲ್ಲಿ ಬೆಂಗಳೂರಿನ ರಸ್ತೆಗಳ ಅವ್ಯವಸ್ಥೆಯನ್ನು ಅನಾವರಣ ಮಾಡುತ್ತಿದೆ. ಇದು ಅಧಿವೇಶನದ ಕಲಾಪದಲ್ಲೂ ಚರ್ಚೆಯಾಗಿತ್ತು. ಇದೀಗ ‘ಟಿವಿ9’ ನಿರಂತರ ವರದಿಯಿಂದ ಕೊನೆಗೂ ಸರ್ಕಾರ ಎಚ್ಚೆತ್ತುಕೊಂಡಿದೆ.

ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಸೋಮವಾರ ರಾತ್ರಿ ಬೆಂಗಳೂರಿನ ರಸ್ತೆ ಗುಂಡಿ ಸಮಸ್ಯೆಗಳ ಪರಿಶೀಲನೆ ನಡೆಸಿದರು. ಸರಿಯಾಗಿ ತಡರಾತ್ರಿ 12 ಗಂಟೆ ವೇಳೆಗೆ ರೌಂಡ್ಸ್‌ ಕೈಗೊಂಡ ಡಿಕೆಶಿಗೆ, ಬಿಬಿಎಂಪಿ ಆಯುಕ್ತ ಮಹೇಶ್ವರ್‌ ರಾವ್ ಸಾಥ್ ನೀಡಿದರು.

ಬೆಂಗಳೂರಿನಲ್ಲಿ ರಾತ್ರಿ 80 ಕಿ.ಮೀ ಡಿಕೆ ಶಿವಕುಮಾರ್ ರೌಂಡ್ಸ್‌

ಮಧ್ಯರಾತ್ರಿ 1.30ರವರೆಗೂ ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿ ರೌಂಡ್ಸ್ ಹಾಕಿದರು. ನಗರದ ವಿವಿಧೆಡೆ ಅಂದಾಜು 80 ಕಿ.ಮೀ ನಷ್ಟು ಸಂಚರಿಸಿದರು. ಯಲಹಂಕದ ಅಟ್ಟೂರು ಮುಖ್ಯರಸ್ತೆ ಮತ್ತು ಬಾಗಲೂರು ಮುಖ್ಯರಸ್ತೆಗಳಲ್ಲಿ ಗುಂಡಿಮುಚ್ಚುವ ಕಾಮಗಾರಿಯನ್ನು ಖುದ್ದು ಪರಿಶೀಲಿಸಿದರು. ಡಾಂಬರು ಹಾಕುವ ಯಂತ್ರದ ಮೇಲೇರಿ ಕಾಮಗಾರಿ ವೀಕ್ಷಿಸಿದರು.

‘ಟಿವಿ9’ ವರದಿ ಪ್ರಸ್ತಾಪಿಸಿದ ಡಿಸಿಎಂ ಡಿಕೆ ಶಿವಕುಮಾರ್

ರಸ್ತೆ ಗುಂಡಿ ಸಮಸ್ಯೆ ಬಗ್ಗೆ ‘ಟಿವಿ9’ ವರದಿ ಪ್ರಸ್ತಾಪಿಸಿದ ಡಿಸಿಎಂ ಡಿಕೆ ಶಿವಕುಮಾರ್, ಇನ್ಮುಂದೆ ಎಲ್ಲೇ ರಸ್ತೆ ಗುಂಡಿ ಕಂಡುಬಂದರೂ ‘‘ಫಿಟ್‌ ಮೈ ಸ್ಟ್ರೀಟ್’’ ಆ್ಯಪ್ ಮೂಲಕ ಮಾಹಿತಿ ನೀಡಿದರೆ ನಮ್ಮ ಅಧಿಕಾರಿಗಳು ಗುಂಡಿ ಮುಚ್ಚಿಸುವ ಕೆಲಸ ಮಾಡುತ್ತಾರೆ ಎಂದು ಭರವಸೆ ನೀಡಿದರು. ರಸ್ತೆ ಗುಂಡಿಗಳ ಶಾಶ್ವತ ಪರಿಹಾರಕ್ಕೆ ಕಾಂಕ್ರೀಟ್ ರಸ್ತೆ ಮಾಡಲಾಗುತ್ತದೆ ಎಂದರು.

ಇತ್ತೀಚಿಗಷ್ಟೇ ಈಜಿಪುರ ಮೇಲ್ಸೇತುವೆ ಕಾಂಕ್ರಿಟ್ ಸ್ಲ್ಯಾಬ್ ಕುಸಿದು ಆಟೋ ಜಖಂ ಆಗಿತ್ತು. ಅಲ್ಲಿಗೂ ತೆರಳಿದ ಡಿಕೆಶಿ ಪರಿಶೀಲಿಸಿದರು.

ಇದನ್ನೂ ಓದಿ: ಬೆಂಗಳೂರು ರಸ್ತೆ ಗುಂಡಿಗಳ ಮುಚ್ಚಲು ಇಕೋಫಿಕ್ಸ್ ಪ್ರಯೋಗಕ್ಕೆ ಬಿಬಿಎಂಪಿ ಚಿಂತನೆ: ಏನಿದು ತಂತ್ರಜ್ಞಾನ?

ಒಟ್ಟಾರೆಯಾಗಿ, ಬೆಂಗಳೂರಿನ ರಸ್ತೆಗುಂಡಿಗಳ ಬಗ್ಗೆ ‘ಟಿವಿ9’ ಮಾಡುತ್ತಿರುವ ‘ಏನ್‌ ರೋಡ್‌ ಗುರೂ’ ಅಭಿಯಾನ ಸರ್ಕಾರಕ್ಕೆ ಬಿಸಿ ಮುಟ್ಟಿಸಿದೆ. ಕೊನೆಗೂ ಎಚ್ಚೆತ್ತುಕೊಂಡಿದ್ದು, 4,400 ರಸ್ತೆ ಗುಂಡಿಗಳನ್ನು ಮುಚ್ಚಲು ಸರ್ಕಾರ ಆದೇಶಿಸಿದೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9, ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:02 am, Tue, 26 August 25