AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ರಸ್ತೆ ಗುಂಡಿಗಳ ಮುಚ್ಚಲು ಇಕೋಫಿಕ್ಸ್ ಪ್ರಯೋಗಕ್ಕೆ ಬಿಬಿಎಂಪಿ ಚಿಂತನೆ: ಏನಿದು ತಂತ್ರಜ್ಞಾನ?

ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ರಸ್ತೆಗುಂಡಿಗಳು ರಾರಾಜಿಸುತ್ತಿದ್ದರೆ, ಇತ್ತ ಅವುಗಳನ್ನು ಮುಚ್ಚಬೇಕಿದ್ದ ಪಾಲಿಕೆ ಇದೀಗ ಹೊಸ ಹೊಸ ಪ್ಲಾನ್ ಹುಡುಕಲು ಹೊರಟಿದೆ. ಇಷ್ಟು ದಿನ ರಸ್ತೆ ಗುಂಡಿಗಳನ್ನು ಮುಚ್ಚಲು ಕೋಲ್ಡ್ ಮಿಕ್ಸ್ , ಹಾಟ್ ಮಿಕ್ಸ್ ಬಳಸುತ್ತಿದ್ದ ಪಾಲಿಕೆ ಈಗ ಇಕೋಫಿಕ್ಸ್ ತಂತ್ರಜ್ಞಾನ ಪ್ರಯೋಗಕ್ಕೆ ಮುಂದಾಗಿದೆ.

ಬೆಂಗಳೂರು ರಸ್ತೆ ಗುಂಡಿಗಳ ಮುಚ್ಚಲು ಇಕೋಫಿಕ್ಸ್ ಪ್ರಯೋಗಕ್ಕೆ ಬಿಬಿಎಂಪಿ ಚಿಂತನೆ: ಏನಿದು ತಂತ್ರಜ್ಞಾನ?
ಸಾಂದರ್ಭಿಕ ಚಿತ್ರ
ಶಾಂತಮೂರ್ತಿ
| Updated By: Ganapathi Sharma|

Updated on: Aug 21, 2025 | 7:37 AM

Share

ಬೆಂಗಳೂರು, ಆಗಸ್ಟ್ 21: ಬೆಂಗಳೂರಿನ (Bengaluru) ರಸ್ತೆಗಳಲ್ಲಿ ಗುಂಡಿಗಳ (Potholes) ಕಾಟ ಮುಗಿಯದ ಕತೆಯಾಗಿದೆ. ಯಾವ ರಸ್ತೆಯನ್ನು ನೋಡಿದರೂ ಗುಂಡಿಗಳು ರಾರಾಜಿಸುವುದು ಕಾಣಿಸುತ್ತವೆ. ಗುಂಡಿಗಳನ್ನು ಮುಚ್ಚಲು ಹೊಸ ಪ್ರಯೋಗಕ್ಕೆ ಚಿಂತನೆ ನಡೆಸಿದ್ದ ಬಿಬಿಎಂಪಿ ಇದೀಗ ಅದನ್ನು ಜಾರಿಗೊಳಿಸಲು ತಯಾರಿ ನಡೆಸಿದೆ. ಸದ್ಯ ಬೆಂಗಳೂರಿನಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲು ಕೋಲ್ಡ್ ಮಿಕ್ಸ್ ಹಾಗೂ ಹಾಟ್ ಮಿಕ್ಸ್ ತಂತ್ರಜ್ಞಾನ ಬಳಕೆ ಮಾಡುತ್ತಿರುವ ಪಾಲಿಕೆ, ಇದೀಗ ಇಕೋಫಿಕ್ಸ್ ತಂತ್ರಜ್ಞಾನದ ಮೂಲಕ ಗುಂಡಿಗಳನ್ನು ಮುಚ್ಚಲು ಮುಂದಾಗಿದೆ. ಇದಕ್ಕಾಗಿ ಸ್ಟೀಲ್ ಹಾಗೂ ಕಬ್ಬಿಣದ ತ್ಯಾಜ್ಯಗಳನ್ನು ಬಳಸಲು ಚಿಂತನೆ ನಡೆಸಿದೆ. ಕಳೆದ ವರ್ಷವೇ ಈ ಪ್ರಯೋಗಕ್ಕೆ ಬಿಬಿಎಂಪಿ ಚಿಂತನೆ ನಡೆಸಿತ್ತು. ಇದೀಗ ಪ್ರಯೋಗ ಜಾರಿ ಮಾಡಲು ಮುಂದಾಗಿದೆ.

ರಸ್ತೆ ಗುಂಡಿಗಳಿಂದಾಗಿ ನಿತ್ಯ ವಾಹನ ಸವಾರರು ಕಂಟಕ ಎದುರಿಸುವಂತಾಗಿದೆ. ಕೆಂಗೇರಿಯ ಮುತ್ತು ರಾಜನಗರ ಸುತ್ತಮುತ್ತ ರಸ್ತೆಗಳು ತೀವ್ರವಾಗಿ ಹದಗೆಟ್ಟಿದೆ. ಪರಿಸ್ಥಿತಿ ಹೀಗಿರುವಾಗ, ತುರ್ತು ಕ್ರಮ ಕೈಗೊಳ್ಳುವ ಬದಲು ಹೊಸ ಪ್ರಯೋಗ ಎಂದು ವಿಳಂಬ ನೀತಿ ಅನುಸರಿಸುತ್ತಿರುವ ಪಾಲಿಕೆ ನಡೆಗೆ ಜನರಿಂದ ಆಕ್ರೋಶ ವ್ಯಕ್ತವಾಗಿದೆ. ಮೊದಲು ಗುಂಡಿಬಿದ್ದ ರಸ್ತೆಗಳಿಗೆ ಟಾರ್ ಹಾಕಿ ಎಂದು ಆಗ್ರಹಿಸಿರುವ ಸಾರ್ವಜನಿಕರು, ಗುಂಡಿಗಳಿಂದ ಆಗುತ್ತಿರುವ ಸಮಸ್ಯೆ ಬಗೆಹರಿಯುವುದು ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಆರು ಸಾವಿರಕ್ಕೂ ಹೆಚ್ಚು ರಸ್ತೆ ಗುಂಡಿ

ಸದ್ಯ ಬೆಂಗಳೂರಿನಲ್ಲಿ ಕೇವಲ 6 ಸಾವಿರ ರಸ್ತೆಗುಂಡಿಗಳಷ್ಟೇ ಇವೆ ಎಂದಿರುವ ಪಾಲಿಕೆ, ಇದೀಗ ಕೋಲ್ಡ್ ಮಿಕ್ಸ್, ಹಾಟ್ ಮಿಕ್ಸ್ ಜೊತೆಗೆ ಭಾರತದ ಪ್ರಮುಖ ರಸ್ತೆ ಸಂಶೋಧನಾ ಸಂಸ್ಥೆ ಸಿ.ಎಸ್.ಆರ್.ಐ – ಸಿ.ಆರ್.ಆರ್.ಐ, ರಮುಕ ಗ್ಲೋಬಲ್ ಸರ್ವೀಸ್ ಹಾಗೂ ಪಾಲಿಕೆಯ ಸಹಯೋಗದೊಂದಿಗೆ ಕಳೆದ ವರ್ಷ ಆರಂಭಿಸಿದ್ದ ಇಕೋಫಿಕ್ಸ್ ತಂತ್ರಜ್ಞಾನ ಬಳಕೆಗೆ ಮುಂದಾಗಿದೆ. ಉಕ್ಕಿನ ಕೈಗಾರಿಕೆಗಳ ಕೈಗಾರಿಕಾ ತ್ಯಾಜ್ಯವನ್ನು, ಅಂದರೆ ಕಬ್ಬಿಣ ಮತ್ತು ಉಕ್ಕಿನ ಸ್ಲ್ಯಾಗ್ ಬಳಸಿ ತಯಾರಾಗುವ ಇಕೋಫಿಕ್ಸ್ ತಂತ್ರಜ್ಞಾನ ರಸ್ತೆಗುಂಡಿಗಳನ್ನು ಶೀಘ್ರವಾಗಿ ಮುಚ್ಚಲು ಸಹಕಾರಿಯಾಗುತ್ತದೆ ಎನ್ನಲಾಗಿದೆ. ಕಳೆದ ಬಾರಿ ಪ್ರಾಯೋಗಿಕವಾಗಿ ಅಳವಡಿಸಿ ಪರೀಕ್ಷೆ ನಡೆಸಲಾಗಿತ್ತು. ಅದಾದ ಬಳಿಕ ಮೌನವಾಗಿದ್ದ ಪಾಲಿಕೆ ಇದೀಗ ಮತ್ತೆ ಅದೇ ತಂತ್ರಜ್ಞಾನ ಬಳಕೆಗೆ ಮುಂದಾಗಿದೆ.

ಇದನ್ನೂ ಓದಿ: ರಸ್ತೆ ಕಾಮಗಾರಿ ವಿಳಂಬ, ಟ್ರಾಫಿಕ್ ಜಾಮ್ ಹೆಚ್ಚಳ, ಶಾಲೆಗೆ ಹೋಗಲು ಬೆಂಗಳೂರಿನ ಶಾಲಾ ಮಕ್ಕಳ ಪರದಾಟ

ಗುಜರಾತ್, ಜಾರ್ಖಂಡ್, ಮಹಾರಾಷ್ಟ್ರ ಮತ್ತು ಅರುಣಾಚಲ ಪ್ರದೇಶ ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿ ಜಾರಿಯಲ್ಲಿರುವ ಇಕೋಫಿಕ್ಸ್ ತಂತ್ರಜ್ಞಾನ ಬೆಂಗಳೂರಿನಲ್ಲಿ ಯಶಸ್ವಿಯಾಗಲಿದೆಯೇ? ರಸ್ತೆ ಗುಂಡಿಗಳಿಗೆ ಮುಕ್ತಿ ಸಿಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ