ವಿಧಾನ ಪರಿಷತ್‌ಗೆ ನಾಲ್ವರ ನಾಮನಿರ್ದೇಶನ ಪಟ್ಟಿ ಫೈನಲ್: ಕೊನೆಕ್ಷಣದಲ್ಲಿ ಅಮಿನ್ ಮಟ್ಟುಗೆ ಶಾಕ್
ಚಿಂತಕರ ಚಾವಡಿ ಎಂದು ಕರೆಯಲಾಗುವ ಮೇಲ್ಮನೆಯಲ್ಲಿ (ವಿಧಾನ ಪರಿಷತ್ ) ಹಲವು ತಿಂಗಳಿಂದ ಖಾಲಿ ಇದ್ದ ನಾಲ್ಕು ಸದಸ್ಯ ಸ್ಥಾನಗಳಿಗೆ ನಾಮನಿರ್ದೇಶನ ಮಾಡಲು ಕಾಂಗ್ರೆಸ್ ಹೈಕಮ್ಯಾಂಡ್ ಒಪ್ಪಿಗೆ ನೀಡಿದೆ. ತೀವ್ರ ಹಗ್ಗಜಗ್ಗಾಟದ ನಡುವೆಯೂ ನಾಲ್ವರ ನಾಮನಿರ್ದೇಶನಕ್ಕೆ ಕಾಂಗ್ರೆಸ್ ಹೈಕಮ್ಯಾಂಡ್ ನಿಂದ ಒಪ್ಪಿಗೆ ಸಿಕ್ಕಿದೆ. ಈ ಹಿಂದೆ ಫೈನಲ್ ಆಗಿ ಓಡಾಡಿದ್ದ ನಾಲ್ವರ ನಾಮನಿರ್ದೇಶನ ಪಟ್ಟಿಯೇ ಇದೀಗ ಬದಲಾಗಿದ್ದು, ಅಚ್ಚರಿ ಆಯ್ಕೆ ಮಾಡಲಾಗಿದೆ.

ಬೆಂಗಳೂರು, (ಆಗಸ್ಟ್ 25): ತೀವ್ರ ಕುತೂಹಲ ಮೂಡಿಸಿದ್ದ ಕರ್ನಾಟಕ ವಿಧಾನ ಪರಿಷತ್‌ನ (Karnataka Legislative Council) ನಾಲ್ಕು ಖಾಲಿ ಸ್ಥಾನಗಳಿಗೆ ಹೆಸರುಗಳನ್ನ ಅಂತಿಮಗೊಳಿಸಲಾಗಿದ್ದು, ಈ ಹಿಂದೆ ಫೈನಲ್ ಮಾಡಲಾಗಿದ್ದ ಪಟ್ಟಿಯಿಂದ ಇಬ್ಬರನ್ನು ಕೈಬಿಡಲಾಗಿದೆ. ಜಕ್ಕಪ್ಪ, ಆರತಿ ಕೃಷ್ಣ, ರಮೇಶ್ ಬಾಬು ಹಾಗೂ ಪತ್ರಕರ್ತ ಶಿವಕುಮಾರ್ ರನ್ನು ವಿಧಾನ ಪರಿಷತ್ ಗೆ ನಾಮ ನಿರ್ದೇಶನ ಮಾಡುವುದಕ್ಕೆ ಕಾಂಗ್ರೆಸ್ ಹೈಕಮ್ಯಾಂಡ್ ಒಪ್ಪಿಗೆ ನೀಡಿದೆ. ಜಕ್ಕಪ್ಪ ಮತ್ತು ಆರತಿ ಕೃಷ್ಣ ಹೈಕಮ್ಯಾಂಡ್ ಕೋಟಾದಡಿಯಲ್ಲಿ ಆಯ್ಕೆಯಾಗಿದ್ದರೇ, ಸಿಎಂ ಕೋಟಾದಿಂದ ರಮೇಶ್ ಬಾಬು ಮತ್ತು ಪತ್ರಕರ್ತ ಶಿವಕುಮಾರ್ ಆಯ್ಕೆಯಾಗಿದ್ದಾರೆ.
ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು, ಅನಿವಾಸಿ ಭಾರತೀಯ ಕೋಶದ (ಎನ್‌ಆರ್‌ಐ) ಉಪಾಧ್ಯಕ್ಷೆ ಆರತಿ ಕೃಷ್ಣ, ಮೈಸೂರು ಮೂಲದ ಶಿವಕುಮಾರ್ ಹಾಗೂ ಹುಬ್ಬಳ್ಳಿ-ಧಾರವಾಡ ಕಾಂಗ್ರೆಸ್ ಮುಖಂಡ ಜಕ್ಕಪ್ಪ ಅವರನ್ನು ನಾಮನಿರ್ದೇಶನ ಮಾಡಲು ತೀರ್ಮಾನಿಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ನಾನಾ ಕ್ಷೇತ್ರಗಳ ಸಾಧಕರ ಕೋಟಾದಲ್ಲಿ ನಾಮನಿರ್ದೇಶನಕ್ಕೆ ಹಲವು ಮಂದಿ ಆಕಾಂಕ್ಷಿಗಳಿದ್ದರು. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮೂಲಕ ಸಂಭಾವ್ಯರ ಪಟ್ಟಿ ಪಡೆದುಕೊಂಡಿದ್ದ ಎಐಸಿಸಿ ವರಿಷ್ಠ ನಾಯಕರು ಈ ನಾಲ್ವರನ್ನು ಅಂತಿಮಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿಕೆ ಶಿವಕುಮಾರ್ ಅವರು ತಮ್ಮ ಆಪ್ತರ ಪರವಾಗಿ ಭಾರೀ ಲಾಬಿ ಮಾಡಿದ್ದರು. ರಮೇಶ್ ಬಾಬು, ಸಿಎಂ ಸಿದ್ದರಾಮಯ್ಯನವರ ಮಾಜಿ ಮಾಧ್ಯಮ ಸಲಹೆಗಾರ ಹಾಗೂ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು, ದಲಿತ ಮುಖಂಡ ಡಿ.ಜಿ. ಸಾಗರ್ ಹಾಗೂ ರಾಜ್ಯ ಸರಕಾರದ ಅನಿವಾಸಿ ಭಾರತೀಯ ಕೋಶದ (ಎನ್‌ಆರ್‌ಐ) ಉಪಾಧ್ಯಕ್ಷೆ ಆರತಿ ಕೃಷ್ಣ ಅವರ ಹೆಸರು ಈ ಹಿಂದೆ ಫೈನಲ್ ಮಾಡಲಾಗಿದ್ದ ಪಟ್ಟಿಯಲ್ಲಿ ಇತ್ತು. ಸಿದ್ದರಾಮಯ್ಯನವರ ತಮ್ಮ ಆಪ್ತ ದಿನೇಶ್ ಅಮಿನ್‌ಮಟ್ಟು ಅವರನ್ನ ಆಯ್ಕೆ ಮಾಡಿದ್ದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಡಿ.ಜಿ. ಸಾಗರ್ ಪರವಾಗಿ ನಿಂತಿದ್ದರು. ಆದ್ರೆ ದಿನೇಶ್ ಅಮಿನ್ ಮಟ್ಟು ಆಯ್ಕೆಗೆ ಭಾರೀ ವಿರೋಧಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಅಂತಿಮವಾಗಿ ದಿನೇಶ್ ಅಮಿನ್ ಮಟ್ಟು ಹಾಗೂ ಸಾಗರ್ ಅವರನ್ನು ಕೈಬಿಡಲಾಗಿದೆ.
ಯಾರು ಈ ಚಕ್ಕಪ್ಪ?
ಇನ್ನು ಅಚ್ಚರಿ ಎಂಬಂತೆ ಕೊನೆ ಕ್ಷಣದಲ್ಲಿ ಪರಿಷತ್ ಗೆ ನಾಮನಿರ್ದೇಶನಗೊಂಡಿರುವ ಜಕ್ಕಪ್ಪ ಹುಬ್ಬಳ್ಳಿ ಧಾರವಾಡ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದು, ಕಾಂಗ್ರೆಸ್ ನ ಅನೇಕ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕೈ ನಾಯಕರ ಜೊತೆ ಆತ್ಮೀಯ ಸಂಬಂಧ ಹೊಂದಿರೋ ಎಪ್ ಎಚ್ ಜಕ್ಕಪ್ಪನವರು 2008 ರಲ್ಲಿ ಹುಬ್ಬಳ್ಳಿ ಪೂರ್ವ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನ್ನನುಭವಿಸಿದ್ದರು. ಅಂಬೇಡ್ಕರ್ ಪೌಂಡೇಶನ್, ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಆಯೋಗದ ಚೇರಮನ್ ಆಗಿ ಈ ಹಿಂದೆ ಕೆಲಸ ನಿರ್ವಹಿಸಿದ್ದಾರೆ.
Published On - 8:04 pm, Mon, 25 August 25




