TV9 Kannada News Live: ಚಿತ್ರದುರ್ಗದಲ್ಲಿ ಬಿಎಸ್ ವೈ ಅಭಿಮಾನೋತ್ಸವ ಸಂಭ್ರಮ! ಇಲ್ಲಿದೆ ಈ ಹೊತ್ತಿನ ಪ್ರಮುಖ ಸುದ್ದಿಗಳು
ಚಿತ್ರದುರ್ಗದಲ್ಲಿ ಇಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಬೃಹತ್ 'ಅಭಿಮಾನೋತ್ಸವ' ನಡೆಯುತ್ತಿದ್ದು, ಲಕ್ಷಾಂತರ ಜನ ಸೇರುವ ನಿರೀಕ್ಷೆಯಿದೆ. ಇತ್ತ ಬೆಂಗಳೂರಿನ ನಾಗರಬಾವಿ ಹೋಟೆಲ್ ಅಗ್ನಿ ದುರಂತದಲ್ಲಿ ಓರ್ವ ಮೃತಪಟ್ಟು, ನಾಲ್ವರು ಗಂಭೀರವಾಗಿದ್ದಾರೆ. ಮತ್ತೊಂದೆಡೆ, ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಇಂದು ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಈ ಎಲ್ಲಾ ಪ್ರಮುಖ ವಿದ್ಯಮಾನಗಳ ಸಮಗ್ರ ವರದಿ ಇಲ್ಲಿದೆ.

ಬೆಂಗಳೂರು, ಮೇ 09: ಇಂದು ಚಿತ್ರದುರ್ಗದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಬೃಹತ್ ಅಭಿಮಾನೋತ್ಸವಕ್ಕೆ ಭರ್ಜರಿ ತಯಾರಿ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿಯ (Suvendhu Adhikari) ಪದಗ್ರಹಣದಂತಹ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಇನ್ನೊಂದೆಡೆ ಬೆಂಗಳೂರಿನಲ್ಲಿ ಸಂಭವಿಸಿದ ಅಗ್ನಿ ದುರಂತವೊಂದು ಜನರನ್ನು ಬೆಚ್ಚಿ ಬೀಳಿಸಿದೆ.
ಮುಖ್ಯಾಂಶಗಳು
- ಚಿತ್ರದುರ್ಗದಲ್ಲಿ ಬಿಎಸ್ ವೈ ಅಭಿಮಾನೋತ್ಸವ: ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಅದ್ಧೂರಿ ಕಾರ್ಯಕ್ರಮ
- ನಾಗರಬಾವಿ ಹೋಟೆಲ್ ಅಗ್ನಿ ಅವಘಡ: ಹೊಗೆಯಿಂದ ಉಸಿರುಗಟ್ಟಿ ಓರ್ವ ಸಾವು, ನಾಲ್ವರು ಗಂಭೀರ
- ಬಂಗಾಳದಲ್ಲಿ ಸುವೇಂದು ಅಧಿಕಾರಿ ಪ್ರಮಾಣ ವಚನ
ಚಿತ್ರದುರ್ಗದಲ್ಲಿ ಬಿಎಸ್ ವೈ ಅಭಿಮಾನೋತ್ಸವ!
ಕೋಟೆ ನಾಡು ಚಿತ್ರದುರ್ಗ ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ‘ಅಭಿಮಾನೋತ್ಸವ’ಕ್ಕೆ ಸಾಕ್ಷಿಯಾಗುತ್ತಿದೆ. ಮಾದಾರ ಚನ್ನಯ್ಯ ಮಠದ ಆವರಣದಲ್ಲಿ ನಿರ್ಮಿಸಲಾಗಿರುವ ಬೃಹತ್ ವೇದಿಕೆಯು ಏಳುಸುತ್ತಿನ ಕೋಟೆಯ ಮಾದರಿಯಲ್ಲಿದ್ದು, ಬಿಎಸ್ ವೈ ಮತ್ತು ಅಮಿತ್ ಶಾ ಅವರ ಬೃಹತ್ ಭಾವಚಿತ್ರಗಳಿಂದ ಕಂಗೊಳಿಸುತ್ತಿದೆ. ಈ ಸಮಾರಂಭದ ವಿಶೇಷ ಆಕರ್ಷಣೆಯೆಂದರೆ ಯಡಿಯೂರಪ್ಪನವರು ತಮ್ಮ ಆರಂಭಿಕ ರಾಜಕೀಯ ದಿನಗಳಲ್ಲಿ ಬಳಸುತ್ತಿದ್ದ ಅಂಬಾಸಿಡರ್ ಕಾರು ಪ್ರದರ್ಶನಕ್ಕೆ ಇಟ್ಟಿರುವುದು. ಲಕ್ಷಾಂತರ ಅಭಿಮಾನಿಗಳು ಸೇರುವ ನಿರೀಕ್ಷೆಯಿದ್ದು, ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಭಾಗಿಯಾಗುತ್ತಿದ್ದಾರೆ.
ಬೆಂಗಳೂರಿನ ನಾಗರಬಾವಿ ಹೋಟೆಲ್‌ನಲ್ಲಿ ಅಗ್ನಿ ಅವಘಡ!
ಬೆಂಗಳೂರಿನ ನಾಗರಬಾವಿಯ ಹೋಟೆಲ್ ಒಂದರಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಹೋಟೆಲ್‌ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ದಟ್ಟವಾದ ಹೊಗೆ ಆವರಿಸಿದ್ದರಿಂದ ರಾಜಕುಮಾರ್ (45) ಎಂಬುವವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಬೆಂಕಿ ಹೊತ್ತಿಕೊಂಡಾಗ ಕಟ್ಟಡದೊಳಗೆ ಸಿಲುಕಿದ್ದ ಭೀಮ, ಶಿವಾನಂದ, ಸತೀಶ್ ಮತ್ತು ರಾಜಕುಮಾರ್ ಸೇರಿ ಐವರನ್ನು ಅಗ್ನಿಶಾಮಕ ದಳದವರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ರಾಜಕುಮಾರ್ ಕೊನೆಯುಸಿರೆಳೆದಿದ್ದು, ಉಳಿದ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿರಬಹುದು ಎಂದು ಶಂಕಿಸಲಾಗಿದ್ದು, ಈ ಬಗ್ಗೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ ನಾಗರಬಾವಿ ಹೋಟೆಲ್‌ನಲ್ಲಿ ಭೀಕರ ಅಗ್ನಿ ಅವಘಡ, ಉಸಿರುಗಟ್ಟಿ ಓರ್ವ ಸಾವು, ನಾಲ್ವರ ಸ್ಥಿತಿ ಗಂಭೀರ
ಮೊದಲ ಬಿಜೆಪಿ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣ ವಚನ!
ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಇಂದು ಹೊಸ ಮೈಲಿಗಲ್ಲು ಸ್ಥಾಪನೆಯಾಗುತ್ತಿದೆ. ಇತ್ತೀಚಿನ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ ಬಿಜೆಪಿ, ಮೊದಲ ಬಾರಿಗೆ ಬಂಗಾಳದಲ್ಲಿ ಅಧಿಕಾರ ಹಿಡಿದಿದೆ. ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಸುವೇಂದು ಅಧಿಕಾರಿ ಇಂದು ಬೆಳಗ್ಗೆ 11 ಗಂಟೆಗೆ ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಂದು ವಿಶ್ವಕವಿ ರವೀಂದ್ರನಾಥ ಠಾಗೋರ್ ಅವರ 165ನೇ ಜನ್ಮದಿನವಾಗಿರುವುದರಿಂದ, ಬಂಗಾಳಿಗಳ ಭಾವನೆಗಳಿಗೆ ಗೌರವ ನೀಡಲು ಇದೇ ದಿನವನ್ನು ನಿಗದಿಪಡಿಸಲಾಗಿದೆ. ನಂದಿಗ್ರಾಮದ ಕಲಿ ಎಂದೇ ಖ್ಯಾತರಾದ ಸುವೇಂದು ಅವರು ರಾಜ್ಯಪಾಲ ಆರ್.ಎನ್. ರವಿ ಅವರಿಂದ ಪ್ರತಿಜ್ಞಾ ವಿಧಿ ಸ್ವೀಕರಿಸಲಿದ್ದು, ಬಂಗಾಳದಲ್ಲಿ ಕಮಲ ಪಾಳೆಯದ ಆಡಳಿತ ಆರಂಭವಾಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




