ಬೆಂಗಳೂರು, ಆಗಸ್ಟ್ 6: ಎರಡು ವರ್ಷಗಳ ಹಿಂದಷ್ಟೇ ತರುಣ್ ಚೌಧರಿ ಎಂಬ ಯುವಕನನ್ನು ವಿವಾಹವಾಗಿದ್ದ ತನಿಷಾ ಚೌಧರಿ ಎಂಬಾಕೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಬೆಂಗಳೂರಿನ ಆಡುಗೋಡಿಯಲ್ಲಿ ಪತ್ತೆಯಾಗಿದೆ. ಇದೀಗ ತನಿಷಾ ಪೋಷಕರು ಆಕೆಯ ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಅಂತಾ ಆರೋಪಿಸುತ್ತಿದ್ದಾರೆ.
ರಾಜಸ್ಥಾನದ ಮೂಲಕ ತರುಣ್ ಚೌಧರಿ ಬೆಂಗಳೂರಿನ ಆಡುಗೋಡಿಯಲ್ಲಿ ಚಿನ್ನದ ಅಂಗಡಿ ಇಟ್ಟುಕೊಂಡಿದ್ದರು. 2022ರಲ್ಲಿ ತರುಣ್ ಚೌಧರಿ ಜೊತೆ ರಾಜಸ್ಥಾನದ ಮೂಲದ ತನಿಷಾ ಮದುವೆ ಆಗಿತ್ತು. ತನಿಷಾ ಪೋಷಕರು ವರದಕ್ಷಿಣೆ, ಕಾರು ಕೊಟ್ಟು ಮದುವೆ ಮಾಡಿಕೊಟ್ಟಿದ್ದರು. ಹೀಗಿದ್ದರೂ ಪದೇಪದೆ ವರದಕ್ಷಿಣೆಗಾಗಿ ತರುಣ್ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಸೋಮವಾರ ತನಿಷಾ ಪೋಷಕರಿಗೆ ಕರೆ ಮಾಡಿದ್ದ ತರುಣ್, ನಿಮ್ಮ ಮಗಳು 50 ಮೆಟ್ಟಿಲಿನಿಂದ ಜಾರಿ ಬಿದ್ದಿದ್ದಾಳೆ ಬೇಗ ಬನ್ನಿ ಎಂದಿದ್ದ. ಸದ್ಯ ಹೈದರಾಬಾದ್ನಲ್ಲಿ ನೆಲೆಸಿರುವ ತನಿಷಾ ಕುಟುಂಬದವರು ಗಾಬರಿಯಲ್ಲಿ ಬೆಂಗಳೂರಿಗೆ ಬಂದಿದ್ದಾರೆ. ಇಲ್ಲಿಗೆ ಬಂದ್ಮೇಲೆ ತನಿಷಾ ಶವ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿತ್ತು ಎಂಬ ವಿಚಾರ ಗೊತ್ತಾಗಿದೆ. ಸದ್ಯ ತರುಣ್ ಸೇರಿದಂತೆ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಇತ್ತ ಮಲ್ಲೇಶ್ವರಂನ ಸಾಯಿ ರೆಸಿಡೆನ್ಸಿಯಲ್ಲಿ ಮಹಿಳೆಯೊಬ್ಬಳು ಬಾಲ್ಕನಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ಯಾರು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಈಕೆ ಈ ಅಪಾರ್ಟ್ಮೆಂಟ್ನಲ್ಲಿ ವಾಸ ಇದ್ದವಳೂ ಅಲ್ಲ. ಸದ್ಯ ಮಹಿಳೆ ಧರಿಸಿದ್ದ ಬಟ್ಟೆಯ ಜೇಬಿನಲ್ಲಿ ಬಸ್ ಟಿಕೆಟ್ ಮತ್ತು ಸಿನಿಮಾ ಟಿಕೆಟ್ ಪತ್ತೆಯಾಗಿದೆ. ಭಾನುವಾರ ನವರಂಗ್ ಥಿಯೇಟರ್ನಲ್ಲಿ ಈ ಮಹಿಳೆ ಸಿನಿಮಾ ನೋಡಿದ್ದಾಳೆ. ಇಂದು ಬೆಳಗ್ಗೆ 6 ಗಂಟೆಗೆ ಮೆಜೆಸ್ಟಿಕ್ನಿಂದ ಮಲ್ಲೇಶ್ವರಂಗೆ ಬಿಎಂಟಿಸಿ ಬಸ್ನಲ್ಲಿ ಬಂದಿದ್ದಾಳೆ. ಬೆಳಗ್ಗೆ 7:20 ಕ್ಕೆ ಅಪಾರ್ಟ್ಮೆಂಟ್ ಬಳಿ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಪಾರ್ಟ್ಮೆಂಟ್ನಲ್ಲಿ ಯಾರೂ ಇಲ್ಲದ್ದು, ಸಿಸಿಟಿವಿ ಇಲ್ಲದ್ದನ್ನ ನೋಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನೇಣು ಹಾಕಿಕೊಳ್ಳಲು ಹೊಸ ಹಗ್ಗ ಖರೀದಿ ಮಾಡಿ ತಂದಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಇದನ್ನೂ ಓದಿ: ಅಮಿತ್ ಶಾಗೆ ಮುಟ್ಟಿದ ಯಾದಗಿರಿ ಪಿಎಸ್ಐ ಪರಶುರಾಮ ನಿಗೂಢ ಸಾವಿನ ಸುದ್ದಿ
ಸದ್ಯ ಮೃತದೇಹವನ್ನು ಕೆಸಿ ಜನರಲ್ ಆಸ್ಪತ್ರೆಗೆ ರವಾನಿಸಿರುವ ಪೊಲೀಸರು, ಈಕೆ ಯಾರು? ಹಿನ್ನೆಲೆ ಏನು ಎಂಬುದನ್ನು ಪತ್ತೆ ಮಾಡಲು ತನಿಖೆ ಮಾಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:58 pm, Tue, 6 August 24